ಸಂವಿಧಾನ ಶಿಲ್ಪಿ ಸವೇಸಿದ ಕಠಿಣ ಹಾದಿ

KannadaprabhaNewsNetwork |  
Published : Nov 26, 2026, 01:30 AM IST
ಸಂವಿಧಾನ  | Kannada Prabha

ಸಾರಾಂಶ

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟ, ಸಾಂವಿಧಾನಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಸ್ಮರಣೆ

(ಬಾಟಂ)

-ಎನ್‌.ಮಹೇಶ್‌, ಮಾಜಿ ಶಾಸಕ.

(ಇಂದು ಸಂವಿಧಾನ ದಿನ- ಸೀಲ್‌ ಮಾಡಿ)

----

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟ, ಸಾಂವಿಧಾನಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಸ್ಮರಣೆ

ಭಾರತದ ಸಂವಿಧಾನವೆಂದರೆ ಕೇವಲ ಕಾನೂನು ಮತ್ತು ವಿಧಿಗಳ ಸಂಗ್ರಹವಲ್ಲ; ಅದು ಶತಮಾನಗಳಿಂದ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಶೋಷಣೆ ಹಾಗೂ ತಾರತಮ್ಯದ ಬೇಗೆಯಲ್ಲಿ ಬೆಂದ ಕೋಟ್ಯಂತರ ಜನರ ಸ್ವಾಭಿಮಾನ, ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಆಶಯಗಳಿಗೆ ದೊರೆತ ಪವಿತ್ರ ಸಾಂವಿಧಾನಿಕ ಭರವಸೆಯಾಗಿದೆ. ಈ ಮಹಾನ್ ಗ್ರಂಥದ ಶಿಲ್ಪಿಯಾದ ಡಾ। ಬಿ.ಆರ್.ಅಂಬೇಡ್ಕರ್ ಅವರು ಕೇವಲ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿಲ್ಲ; ಬದಲಾಗಿ ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಸಮಾನತೆಯನ್ನು ಸ್ಥಾಪಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ ಚಿಂತಕರಾಗಿದ್ದರು. ಆದರೆ ಇಂದಿನ ಸಂದರ್ಭದಲ್ಲಿ ನಾವು ಕೆಲವು ಗಂಭೀರ ಐತಿಹಾಸಿಕ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕಾಗಿದೆ. ಬಾಬಾಸಾಹೇಬರ ಜೀವಿತಾವಧಿಯಲ್ಲಿ ಅವರ ರಾಜಕೀಯ ಹಕ್ಕುಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದವರು ಯಾರು? ಅವರ ಸಾಮಾಜಿಕ ನ್ಯಾಯದ ಕನಸುಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ವಿಫಲರಾದವರು ಯಾರು? ಮತ್ತು ದಶಕಗಳ ಕಾಲ ಅವರ ಕೊಡುಗೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲು ವಿಳಂಬ ಮಾಡಿದವರು ಯಾರು ಎಂಬ ಸತ್ಯವನ್ನು ಅರಿಯುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ.

ಅಂಬೇಡ್ಕರ್‌ ಅವರ ಹೋರಾಟದ ಹಾದಿ:

ಬಾಬಾಸಾಹೇಬರು ತಮ್ಮ ಹೋರಾಟವನ್ನು ಕೇವಲ ಅಸ್ಪೃಶ್ಯತೆಯ ನಿರ್ಮೂಲನೆ ಅಥವಾ ಸಾಮಾಜಿಕ ಸುಧಾರಣೆಗೆ ಸೀಮಿತಗೊಳಿಸಲಿಲ್ಲ. ರಾಜಕೀಯ ಅಧಿಕಾರವಿಲ್ಲದೆ ಶೋಷಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ವಿಮೋಚನೆ ಅಸಾಧ್ಯ ಎಂಬ ಸತ್ಯವನ್ನು ಅವರು ಬಹಳ ಹಿಂದೆಯೇ ಮನಗಂಡಿದ್ದರು. ಇದೇ ಕಾರಣಕ್ಕಾಗಿ 1918ರ ಸೌತ್ಬರೋ ಸಮಿತಿ ಮತ್ತು 1928ರ ಸೈಮನ್ ಆಯೋಗದ ಮುಂದೆ ಅವರು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಹಾಗೂ ದಮನಿತ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಪ್ರಬಲ ಬೇಡಿಕೆಯನ್ನು ಮುಂದಿಟ್ಟರು. 1930ರಿಂದ 1932ರವರೆಗೆ ಲಂಡನ್‌ನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನಗಳಲ್ಲಿ ದಲಿತ ಸಮುದಾಯಗಳಿಗೆ ಪ್ರತ್ಯೇಕ ಮತಕ್ಷೇತ್ರಗಳ ಮೂಲಕ ಸ್ವತಂತ್ರ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕೆಂದು ಅವರು ದಿಟ್ಟವಾಗಿ ಹೋರಾಡಿದರು. ಆದರೆ 1932ರಲ್ಲಿ ಪ್ರತ್ಯೇಕ ಮತಕ್ಷೇತ್ರದ ವಿಚಾರವಾಗಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿತು. ಗಾಂಧೀಜಿಯವರ ಆಮರಣಾಂತ ಉಪವಾಸ ಸತ್ಯಾಗ್ರಹದ ಒತ್ತಡದ ಹಿನ್ನೆಲೆಯಲ್ಲಿ 1932ರ ಸೆಪ್ಟೆಂಬರ್ 24ರಂದು ಪೂನಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಪರಿಣಾಮವಾಗಿ ಪ್ರತ್ಯೇಕ ಮತದಾರರ ವ್ಯವಸ್ಥೆಯ ಬದಲಿಗೆ ಜಂಟಿ ಮತದಾರರ ವ್ಯವಸ್ಥೆಯಡಿ ಮೀಸಲು ಸ್ಥಾನಗಳು ಜಾರಿಗೆ ಬಂದವು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಈ ಒಪ್ಪಂದವು ದಲಿತ ಸಮುದಾಯಗಳ ಸ್ವತಂತ್ರ ರಾಜಕೀಯ ಧ್ವನಿಗೆ ಒಂದು ಮಿತಿಯನ್ನು ಹೇರಿತು. ಮೀಸಲಾತಿ ಎಂಬುದು ಕೇವಲ ಸ್ಥಾನಗಳ ಹಂಚಿಕೆಯಲ್ಲ; ಅದು ಅಧಿಕಾರದಲ್ಲಿ ನೈಜ ಪಾಲುದಾರಿಕೆಯನ್ನು ಖಚಿತಪಡಿಸುವ ಸಾಧನವಾಗಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು.

ಬಾಬಾ ಸಾಹೇಬ್‌ ಅವರಿಗೆ ಅಡೆತಡೆ:

ಸ್ವಾತಂತ್ರ್ಯಪೂರ್ವದ ಈ ಸಂಘರ್ಷವು ಸಂವಿಧಾನ ರಚನಾ ಸಭೆಯ ಚುನಾವಣೆಯ ಸಂದರ್ಭದಲ್ಲೂ ಮುಂದುವರಿಯಿತು. 1946ರಲ್ಲಿ ಸಂವಿಧಾನ ರಚನಾ ಸಭೆಗೆ ತಮ್ಮ ತವರು ಪ್ರಾಂತ್ಯವಾದ ಬಾಂಬೆಯಿಂದ ಆಯ್ಕೆಯಾಗಲು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ತೀವ್ರ ವಿರೋಧ ಎದುರಾಯಿತು. ತಮ್ಮ ಸ್ವಂತ ನೆಲದಲ್ಲೇ ರಾಜಕೀಯವಾಗಿ ಅವರನ್ನು ತಡೆಯುವ ಪ್ರಯತ್ನಗಳು ನಡೆದಾಗ, ಜೋಗೇಂದ್ರನಾಥ್ ಮಂಡಲ್ ಸೇರಿದಂತೆ ಬಂಗಾಳದ ನಾಯಕರ ಬೆಂಬಲದೊಂದಿಗೆ ಅವರು ಬಂಗಾಳದ ಜೈಸೂರ್-ಖುಲ್ನಾ ಕ್ಷೇತ್ರದಿಂದ ಸಂವಿಧಾನ ಸಭೆಗೆ ಆಯ್ಕೆಯಾದರು. ಆದರೆ 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಜೈಸೂರ್-ಖುಲ್ನಾ ಕ್ಷೇತ್ರವು ಪಾಕಿಸ್ತಾನದ ಪಾಲಾದ ಕಾರಣ ಅವರ ಸಂವಿಧಾನ ಸಭೆಯ ಸದಸ್ಯತ್ವಕ್ಕೆ ಮತ್ತೆ ಕಂಟಕ ಎದುರಾಯಿತು. ತದನಂತರ ಬಾಂಬೆ ಪ್ರಾಂತ್ಯದಲ್ಲಿ ಖಾಲಿಯಾದ ಸ್ಥಾನದ ಮೂಲಕ ಅವರು ಮರು ಆಯ್ಕೆಯಾಗಿ ಸಂವಿಧಾನ ರಚನೆಯ ಜವಾಬ್ದಾರಿಯನ್ನು ಹೊತ್ತರು. ಭಾರತದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಅನಿವಾರ್ಯವಾಗಿದ್ದರೂ, ಆ ಸ್ಥಾನವನ್ನು ತಲುಪಲು ಅವರು ಎದುರಿಸಿದ ರಾಜಕೀಯ ಅಡೆತಡೆಗಳು ಅವರ ಹೋರಾಟದ ಕಠಿಣ ಹಾದಿಯನ್ನು ಸ್ಪಷ್ಟಪಡಿಸುತ್ತವೆ.

ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಂಬೇಡ್ಕರ್ ಅವರು, ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಕ್ರಾಂತಿಕಾರಿ ‘ಹಿಂದೂ ಕೋಡ್ ಬಿಲ್’ ರೂಪಿಸಿದರು. ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು, ವಿವಾಹ, ವಿಚ್ಛೇದನ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಆಧುನಿಕ ಹಾಗೂ ನ್ಯಾಯಸಮ್ಮತ ಕಾನೂನುಗಳನ್ನು ಜಾರಿಗೆ ತರುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಸಂಪ್ರದಾಯವಾದಿ ವಲಯಗಳಿಂದ ಮತ್ತು ಅಂದಿನ ಕಾಂಗ್ರೆಸ್ ಸರ್ಕಾರದ ಒಳಗಿನಿಂದಲೇ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಸರ್ಕಾರವು ಮಸೂದೆಯನ್ನು ಸಮಗ್ರವಾಗಿ ಅಂಗೀಕರಿಸಲು ಹಿಂದೇಟು ಹಾಕಿದಾಗ ತೀವ್ರ ನೊಂದ ಅಂಬೇಡ್ಕರ್ ಅವರು 1951ರಲ್ಲಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ಹಿಂದೂ ಕೋಡ್ ಬಿಲ್ ಕಡೆಗಣನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಸ್ಯೆಗಳ ಬಗೆಗಿನ ನಿರ್ಲಕ್ಷ್ಯ, ವಿದೇಶಾಂಗ ನೀತಿಯ ಕುರಿತ ಭಿನ್ನಾಭಿಪ್ರಾಯ ಹಾಗೂ ಸರ್ಕಾರದ ಪ್ರಮುಖ ನೀತಿ ನಿರ್ಧಾರಗಳಲ್ಲಿ ತಮಗೆ ಸೂಕ್ತ ಪಾತ್ರ ನೀಡದಿರುವುದನ್ನು ನೇರವಾಗಿ ಪ್ರಸ್ತಾಪಿಸಿದ್ದರು. ಇದು ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲಿ ಅಂದಿನ ಆಡಳಿತ ವ್ಯವಸ್ಥೆಯ ಧೋರಣೆಯ ವಿರುದ್ಧ ವ್ಯಕ್ತವಾದ ಐತಿಹಾಸಿಕ ಪ್ರತಿಭಟನೆಯಾಗಿತ್ತು.

ಸಂವಿಧಾನವು ಸಂಸತ್ತಿಗೆ ತಿದ್ದುಪಡಿ ಮಾಡುವ ಅಧಿಕಾರವನ್ನು ನೀಡಿದೆಯಾದರೂ, ಆ ಅಧಿಕಾರವನ್ನು ಬಳಸುವಾಗ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ರಕ್ಷಿಸುವ ಹೊಣೆಗಾರಿಕೆಯೂ ಆಡಳಿತಗಾರರ ಮೇಲಿರುತ್ತದೆ. ಆದರೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಹಲವು ಸಂವಿಧಾನ ತಿದ್ದುಪಡಿಗಳು ಪ್ರಜಾಪ್ರಭುತ್ವದ ಬುನಾದಿಯನ್ನೇ ಅಲ್ಲಾಡಿಸಿದವು. ವಿಶೇಷವಾಗಿ 1975ರಲ್ಲಿ ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅಧ್ಯಾಯವಾಗಿದೆ.

2015ರಲ್ಲಿ ಸಿಕ್ಕಿದ ನ್ಯಾಯ:

ಇಷ್ಟೆಲ್ಲಾ ಸಾಂವಿಧಾನಿಕ ಕೊಡುಗೆಗಳನ್ನು ನೀಡಿದ ಮಹಾನಾಯಕನಿಗೆ ರಾಷ್ಟ್ರದ ಅತ್ಯುನ್ನತ ಗೌರವ ನೀಡುವ ವಿಚಾರದಲ್ಲೂ ದೀರ್ಘಕಾಲದ ನಿರ್ಲಕ್ಷ್ಯ ಎದ್ದುಕಾಣುತ್ತದೆ. ಈ ಐತಿಹಾಸಿಕ ನಿರ್ಲಕ್ಷ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಬಾಬಾಸಾಹೇಬರ ಜೀವನ, ಚಿಂತನೆ ಮತ್ತು ಪರಂಪರೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪುನರ್ಸ್ಥಾಪಿಸುವ ಮಹತ್ವದ ಹೆಜ್ಜೆಗಳನ್ನು ಇರಿಸಿದರು. ಅಂಬೇಡ್ಕರ್ ಅವರ 125ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, 2015ರಿಂದ ಪ್ರತಿವರ್ಷ ನವೆಂಬರ್ 26ಅನ್ನು ದೇಶಾದ್ಯಂತ ‘ಸಂವಿಧಾನ ದಿನ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಈ ನಿರ್ಧಾರವು ಸಂವಿಧಾನದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಯಿತು. ಇದರೊಂದಿಗೆ, ಬಾಬಾಸಾಹೇಬರ ಜೀವನದ ಪ್ರಮುಖ ಘಟ್ಟಗಳಿಗೆ ಸಾಕ್ಷಿಯಾದ ಐದು ಐತಿಹಾಸಿಕ ಸ್ಥಳಗಳನ್ನು ‘ಪಂಚತೀರ್ಥ’ಗಳಾಗಿ ಅಭಿವೃದ್ಧಿಪಡಿಸಲಾಯಿತು. ಅವರ ಜನ್ಮಸ್ಥಳವಾದ ಮಧ್ಯಪ್ರದೇಶದ ಮಹೂ (ಜನ್ಮಭೂಮಿ), ಉನ್ನತ ವ್ಯಾಸಂಗ ಮಾಡಿದ ಲಂಡನ್‌ನ ನಿವಾಸ (ಶಿಕ್ಷಾಭೂಮಿ), ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರ (ದೀಕ್ಷಾಭೂಮಿ), ಕೊನೆಯುಸಿರೆಳೆದ ದೆಹಲಿಯ 26 ಅಲಿಪುರ ರಸ್ತೆಯ ಸ್ಮಾರಕ (ಮಹಾಪರಿನಿರ್ವಾಣ ಭೂಮಿ) ಮತ್ತು ಅಂತ್ಯಕ್ರಿಯೆ ನಡೆದ ಮುಂಬೈನ ಸ್ಮಾರಕವನ್ನು (ಚೈತ್ಯಭೂಮಿ) ರಾಷ್ಟ್ರೀಯ ಸ್ಮಾರಕಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಅವರ ಪರಂಪರೆಗೆ ಅರ್ಥಪೂರ್ಣ ಗೌರವ ಸಲ್ಲಿಸಲಾಗಿದೆ.

ಸಂವಿಧಾನವು ಆಡಳಿತಗಾರರಿಗೆ ದೇಶವನ್ನು ಮುನ್ನಡೆಸುವ ಅಧಿಕಾರವನ್ನು ನೀಡುವುದರ ಜೊತೆಗೆ, ಆ ಅಧಿಕಾರ ನಿರಂಕುಶವಾಗದಂತೆ ಕಡಿವಾಣವನ್ನೂ ಹಾಕುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ಅತ್ಯುನ್ನತ ಗೌರವವೆಂದರೆ ಕೇವಲ ಸ್ಮಾರಕಗಳ ನಿರ್ಮಾಣ ಅಥವಾ ಉತ್ಸವಗಳ ಆಚರಣೆಯಷ್ಟೇ ಅಲ್ಲ; ಅವರು ಕಂಡ ಕನಸಿನಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ರಾಜಕೀಯ ಅಧಿಕಾರದಲ್ಲಿ ನೈಜ ಪಾಲುದಾರಿಕೆಯನ್ನು ಒದಗಿಸುವ ಮೂಲಕ ಸಂವಿಧಾನದ ಆಶಯಗಳನ್ನು ನಿತ್ಯಜೀವನದಲ್ಲಿ ಸಾಕಾರಗೊಳಿಸುವುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವೇಶ್ವರರ ಬಗ್ಗೆ ಅವಹೇಳನಕಾರಿ ಪದಬಳಕೆ ನಾಡಿಗೆ ಕಪ್ಪುಚುಕ್ಕೆ: ಡಾ.ಶ್ರೀ.ಗುರುಬಸವ ಮಹಾಸ್ವಾಮಿ
ಸರ್ಕಾರಿ ಕೆಲಸವಿದ್ರೂ ರೈತನ ವರಿಸಲಿದ್ದಾಳೆ ಲಕ್ಷ್ಮೀ