ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯಲ್ಲಿ ಉಂಟಾಗಬಹುದಾದ ಅತಿವೃಷ್ಟಿ, ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಬೋಟ್‌ಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡಬೇಕು. ಅಗತ್ಯಬಿದ್ದರೆ ಬಾಡಿಗೆ ಬೋಟ್‌ಗಳನ್ನು ಪಡೆಯುವಂತೆ ಅವರು ಸೂಚಿಸಿದರು.
ಐದು ಬೋಟ್‌ಗಳನ್ನು ಖರೀದಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗೆ ಬಳಸುವ ಬಗ್ಗೆ ತರಬೇತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸರ್ಚ್ ಲೈಟ್‌ಗಳನ್ನು ಕೂಡ ಒದಗಿಸಲಾಗುವುದು ಎಂದು ಹೇಳಿದರು.ನದಿತೀರದ ಗ್ರಾಮಗಳ ಕುರಿತು ತಹಸೀಲ್ದಾರರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪ್ರವಾಹ ಬಾಧಿತವಾಗಲಿರುವ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿತೀರದ ಗ್ರಾಮಗಳಲ್ಲಿ ತಹಸೀಲ್ದಾರ್‌ರು, ನೋಡಲ್ ಅಧಿಕಾರಿಗಳು, ಅಗ್ನಿಶಾಮಕ ಮತ್ತು ಪೊಲೀಸ್ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಮಂಗಾವತಿ, ಜುಗೂಳ, ಶಿರಗುಪ್ಪಿ, ಕುಸನಾಳ, ಬಳಜಿವಾಡ, ಮುಳವಾಡ, ಉಗಾರ್, ಯಡೂರ, ಮಾಂಜರಿ, ತಂಗಡಗಿ, ಶಿನಾಳ, ಝಂಜರವಾಡ, ಸತ್ತಿ, ಸವದಿ, ನಾಗನೂರ ಪಿ.ಕೆ, ಬಳವಾಡ, ಭಿಂವಶಿ, ಕೋಡಣಿ, ಭೋಜ್, ಹೊನ್ನುರಗಿ ಹಾಗೂ ತೋಟದ ವಸತಿ ಸೇರಿದಂತೆ ಕಳೆದ ಬಾರಿ ಪ್ರವಾಹ ಬಾಧಿತ ಗ್ರಾಮಗಳ ಪರಿಸ್ಥಿತಿ ಮೇಲೆ ನಿರಂತರ ನಿಗಾ ವಹಿಸಬೇಕು. ಘಟಪ್ರಭಾ ನದಿ ಪ್ರವಾಹದಿಂದ ಬಾಧಿತಗೊಳ್ಳಲಿರುವ ಬಸನಾಳ, ಕೋಟನಾಳ, ಇದಲ್ಲದೇ ಸಂಕೇಶ್ವರದ ನದಿಗಲ್ಲಿ, ಕುಂಬಾರ ಓಣಿ ಮತ್ತಿತರ ಪ್ರದೇಶಗಳಲ್ಲಿಯೂ ನಿಗಾ ವಹಿಸುವಂತೆ ಸೂಚಿಸಿದರು. ಅಲ್ಲದೇ, ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ತಹಸೀಲ್ದಾರ್‌ರಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅನೇಕ ಕಡೆಗಳಲ್ಲಿ ಕಾರ್ಮಿಕರ ವಸತಿ ಶೆಡ್, ಡಾಬಾ, ಸಣ್ಣಪುಟ್ಟ ಅಂಗಡಿಗಳು ಕಂಡುಬಂದಿವೆ. ಭೂಕುಸಿತ ಉಂಟಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು ಎಂದು ಡಿಸಿ ಮೊಹಮ್ಮದ ರೋಷನ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ನದಿ ತೀರದ ಗ್ರಾಮಗಳ ಜತೆಗೆ ತೋಟದ ವಸತಿಗಳ ಮೇಲೆಯೂ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಕೇಶ್ವರ, ಯಮಕನಮರಡಿ ಬಳಿ ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ನಡೆಯುವ ಕಡೆಗಳಲ್ಲಿ ದೊಡ್ಡ ದೊಡ್ಡ ಕಂದಕಗಳನ್ನು ಕೊರೆಯಲಾಗಿರುತ್ತದೆ. ಇಂತಹ ಕಡೆ ಭೂಕುಸಿತದ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ತುರ್ತು ಕಾರ್ಯಾಚರಣೆಯ ಸಿದ್ಧತೆ ಪರಿಶೀಲನೆ:
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
=---------------------------------------
2 ಲಕ್ಷ ಕ್ಯುಸೆಕ್ ನೀರು ಬಿಡುಗಡೆಗೆ ಕ್ರಮ:
ಜಿಲ್ಲೆಯ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ 1.80 ಲಕ್ಷ ಕ್ಯುಸೆಕ್ ನೀರಿನ ಒಳಹರಿವಿದೆ. ಆಲಮಟ್ಟಿಯಿಂದ ಇಂದಿನಿಂದ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.ಘಟಪ್ರಭಾ ಜಲಾಶಯದಲ್ಲಿ ಸದ್ಯ ಶೇ.80 ರಷ್ಟು ಸಂಗ್ರಹಮಟ್ಟವನ್ನು ಆಧರಿಸಿ ಇಂದಿನಿಂದ ಹತ್ತು ಸಾವಿರ ಕ್ಯುಸೆಕ್ ನೀರು ಬಿಡುಗಡೆಯ ಕುರಿತು ನಿರ್ಧರಿಸಲಾಗುವುದು. ನೀರು ಬಿಡುಗಡೆಯ ಕುರಿತು ಎಲ್ಲ ತಹಸೀಲ್ದಾರ್‌ರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಜಿಲ್ಲಾದ್ಯಂತ ಅನೇಕ ತಳಮಟ್ಟದ ಸೇತುವೆಗಳು ಮುಳುಗಡೆಯಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಪರ್ಯಾಯ ರಸ್ತೆಗಳಿದ್ದು, ಆದರೂ, ಪ್ರತಿಯೊಂದು ಸೇತುವೆಗಳ ಕಡೆ ಸುರಕ್ಷತಾ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
-----------------------------------------------------ಕೋಟ್
ಬೆಳಗಾವಿ ನಗರದಲ್ಲಿಯೂ ಚರಂಡಿ, ಗಟಾರುಗಳನ್ನು ಸ್ವಚ್ಛಗೊಳಿಸಿ ಮಳೆಯ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು. ನಗರ ಪ್ರದೇಶ ಸೇರಿದಂತೆ ಪಾಶ್ವಾಪುರ, ಹಗೇದಾಳ, ಬಗರನಾಳ, ಅಂಕಲಗಿ ಮತ್ತಿತರ ಕಡೆ ಬಳ್ಳಾರಿ ನಾಲಾದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿತು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.- ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ.---------