ಧಾರವಾಡ:
ಇದು ಧಾರವಾಡದ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸರ್ಕಾರಿ ಉರ್ದು ಮತ್ತು ಕನ್ನಡ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಒಂದು ಝಲಕ. ಅಂದ ಹಾಗೆ ಆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಬೋಧಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ್ದು ಜಿಲ್ಲಾಧಿಕಾರಿ ದಿವ್ಯಪ್ರಭು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾ ಪ್ರಾರಂಭೋತ್ಸವವನ್ನು ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಶಾಲೆಯಲ್ಲಿ ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಆಗಮಿಸಿದ್ದರು. ಎಲ್ಲರಂತೆ ಬರೀ ಜ್ಯೋತಿ ಬೆಳಗಿ ಉದ್ಘಾಟಿಸುವ ಕೆಲಸವನ್ನಷ್ಟೇ ಮಾಡಲಿಲ್ಲ ಜಿಲ್ಲಾಧಿಕಾರಿ. ಬದಲಿಗೆ 7 ಮತ್ತು 8ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಪಾಠವೊಂದನ್ನು ತಾವೇ ಶಿಕ್ಷಕಿಯಾಗಿ ಬೋಧಿಸುವ ಮೂಲಕ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು.8ನೇ ತರಗತಿಗೆ ಇಂಗ್ಲಿಷ್ ಭಾಷೆಯಲ್ಲಿನ ಸ್ವಾನ್ ಆ್ಯಂಡ್ ದಿ ಪ್ರಿನ್ಸ್‌ಸ್ ಎಂಬ ಬುದ್ಧನ ಕುರಿತು ಜಾನಪದ ನಾಟಕದ ಪಾಠವಿದೆ. ಆ ಪಾಠವನ್ನು ಜಿಲ್ಲಾಧಿಕಾರಿ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧಿಸಿದರು. ಬರೀ ಪಾಠ ಮಾಡುವುದಷ್ಟೇ ಅಲ್ಲ. ಮಕ್ಕಳನ್ನು ವೇದಿಕೆಗೆ ಕರೆದು ಅವರನ್ನೇ ನಾಟಕದ ಪಾತ್ರಧಾರಿಯನ್ನಾಗಿ ಮಾಡಿ, ತಾವೇ ಸೂತ್ರಧಾರರಾಗಿ ಬೋಧಿಸಿದರು. ಈ ಮೂಲಕ ಮಕ್ಕಳಿಗೆ ಪಾಠ ಮನದಾಳಕ್ಕೆ ಇಳಿಯುವಂತೆ ಮಾಡಿದರು. ಜತೆಗೆ ಶಿಕ್ಷಕರಿಗೆ ಯಾವ ರೀತಿ ಪಾಠ ಮಾಡಬೇಕು ಎಂಬುದರ ಝಲಕ್ ಕೂಡ ನೀಡಿದರು.
ಸಭಾ ಕಾರ್ಯಕ್ರಮ:
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.74 ಆಗಿದೆ. ರಾಜ್ಯದಲ್ಲಿ 24ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ನಮ್ಮ ಜಿಲ್ಲೆ ಬಂದಿದೆ. ಇದು ನಾವು ಹೆಮ್ಮೆ ಪಡುವ ವಿಷಯವಲ್ಲ. ಈ ವರ್ಷ ಜಿಲ್ಲೆ ಶೇ. 100ರಷ್ಟು ಫಲಿತಾಂಶ ಪಡೆಯಬೇಕು. ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ. 10ನೇ ತರಗತಿ ಕಲಿಸುವ ಪ್ರತಿ ಶಿಕ್ಷಕ ಪ್ರತಿಜ್ಞೆ ಮಾಡಿ, ಫಲಿತಾಂಶಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡಬೇಕು. ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಈ ವೇಳೆ ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಯಟ್ ಪ್ರಾಚಾರ್ಯ ಜಯಶ್ರೀ ಕಾರೇಕರ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಟಿಸಿಡಬ್ಲ್ಯೂ ಪ್ರಾಚಾರ್ಯ ಬಿ.ಎಂ. ಬಡಿಗೇರ, ಬಿಆರ್‌ಸಿ ಮಂಜುನಾಥ ಅಡವೆರ, ವಿಷಯ ಪರಿವೀಕ್ಷಕರಾದ ಬಿ.ಬಿ. ದುಬ್ಬನಮರಡಿ, ನಫಿಜಾಬಾನು ದಾವಲಸಾಬನವರ, ಶಿವಲೀಲಾ ಕಳಸಣ್ಣವರ ಸೇರಿದಂತೆ ಇಲಾಖೆ ಅಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.