ಐಗೂರು ಗ್ರಾ.ಪಂ. ವ್ಯಾಪ್ತಿಯ ಸಜ್ಜಳ್ಳಿ ಹಾಡಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ, ಪರಿಶೀಲನೆ

KannadaprabhaNewsNetwork |  
Published : Jun 04, 2024, 12:31 AM IST
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಹಾಡಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ  ನೀಡಿ ಪರಿಶೀಲನೆ | Kannada Prabha

ಸಾರಾಂಶ

ಸಜ್ಜಳ್ಳಿ ಹಾಡಿಯಲ್ಲಿನ ರೈಲ್ವೇ ಬ್ಯಾರಿಕೇಡ್‌ ಕಾಮಗಾರಿ ಪೂರ್ಣಗೊಳ್ಳ್ಳದ ಸ್ಥಳಕ್ಕೆ ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್‌ ಭೇಟಿ ನೀಡಿ ಮಾಹಿತಿ ಪಡೆದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಜ್ಜಳ್ಳಿ ಹಾಡಿಯಲ್ಲಿನ ರೈಲ್ವೇ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳ್ಳದ ಸ್ಥಳಕ್ಕೆ ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಭೇಟಿ ನೀಡಿ ಮಾಹಿತಿ ಪಡೆದರು.

ಸಜ್ಜಳ್ಳಿ ಹಾಡಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮನೆ ಮತ್ತು ಹೊರಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಡಾನೆಗಳು ಬ್ಯಾರಿಕೇಡ್ ದಾಟಿ ಬರುತ್ತಿವೆ. ಹಾಡಿಯಲ್ಲಿ ಶಿಥಿಲಾವಸ್ಥೆಯ ಮನೆಗಳಿದ್ದು, ಮಕ್ಕಳು, ವೃದ್ಧರು, ಮಹಿಳೆಯರು ಮಲಗಿರುತ್ತಾರೆ. ಜೀವಹಾನಿಯಾದರೆ ಏನು ಮಾಡುವುದು. ನಷ್ಟ ಪರಿಹಾರವನ್ನು ಸರ್ಕಾರದಿಂದ ಕೊಡಿಸಬೇಕು ಎಂದು ಜೇನು ಕುರುಬ ಯುವಸೇವಾ ಸಮಿತಿ ತಾಲೂಕು ಅಧ್ಯಕ್ಷ ಜೆ.ಎ. ಶ್ಯಾಮ್ ಮನವಿ ಮಾಡಿದರು.

ಸಜ್ಜಳ್ಳಿ ಗಿರಿಜನರ ಹಾಡಿಯ ನಿವಾಸಿಗಳಿಗೆ ವ್ಯವಸಾಯ ಮಾಡಲು ಅರಣ್ಯ ಇಲಾಖೆಯಿಂದ ಹಕ್ಕುಪತ್ರ ನೀಡಲಾಗಿದೆ. ಈ ಕಾರಣದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಜಾಗದ ಆರ್.ಟಿ.ಸಿ. ಇದ್ದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕಾಡಾನೆಗಳ ಕಾಟವನ್ನು ತಡೆಗಟ್ಟಲು ಇಲಾಖೆ ಎಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ಭರವಸೆ ನೀಡಿದರು. ಬ್ಯಾರಿಕೇಡ್ ಉಳಿಕೆ ಕಾಮಗಾರಿಯನ್ನು ಕೂಡಲೇ ಪೂರೈಸಲಾಗುವುದು. ಬ್ಯಾರಿಕೇಡ್ ಎಲ್ಲಾ ಗೇಟ್‍ಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿ ಭರವಸೆ ನೀಡಿದರು.

ಮೇ 23 ಗುರುವಾರ ರಾತ್ರಿ ಸಜ್ಜಳ್ಳಿ ಹಾಡಿಯ ಒಳಗೆ ನುಗ್ಗಿದ ಜೋಡಿ ಕಾಡಾನೆಗಳು ಪ್ಲಾಸ್ಟಿಕ್ ಹೊದಿಕೆಯ ಮನೆಗೆ ಹಾನಿಗೊಳಿಸಿತ್ತು. ಮನೆಯಲ್ಲಿದ್ದ ಕರಿಯಪ್ಪ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಜೇನುಕುರುಬರ ಶಿವು ಎಂಬವರ ಬೈಕ್ ತುಳಿದು ಜಖಂಗೊಳಿಸಿತ್ತು. ಜೆ.ಎ.ಶ್ಯಾಮ್ ಎಂಬುವವರ 4 ಸಾವಿರ ಲೀಟರಿನ ವಾಟರ್ ಟ್ಯಾಂಕ್ ಒಡೆದು ಹಾಕಿವೆ. ರಾತ್ರಿಯಿಡಿ ಹಾಡಿಯಲ್ಲೇ ಠಿಕಾಣಿ ಹೂಡಿ ಜೇನುಕುರುಬರನ್ನು ನಿದ್ದೆಗೆಡಿಸಿದ್ದವು.

ಕಾಡಿಗೆ ಸುಮಾರು 7 ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಿಸಿದ್ದು, ಎಲ್ಲೆಡೆ ಮುಚ್ಚಲಾಗಿದೆ. ಆದರೆ, ಸಜ್ಜಳ್ಳಿ ಹಾಡಿಯ ಬಳಿಯಲ್ಲಿ ಮಾತ್ರ ಗೇಟ್ ಬಿಟ್ಟಿರುವುದರಿಂದ ಇಲ್ಲಿಂದ ಕಾಡಾನೆಗಳು ಹೊರಗೆ ಬರಲು ಅವಕಾಶವಾಗಿರುವುದು, ಸ್ಥಳೀಯರಿಗೆ ತೊಂದರೆಯಾಗಿದೆ. ಆನೆಗಳು ಇಲ್ಲಿಂದ ಹೊರಗೆ ಬಂದು ಮತ್ತೆ ಕಾಡಿಗೆ ಹಿಂದಿರುಗುತ್ತಿವೆ. ಬಂದು ಹೋಗುವ ನಡುವೆ ಗ್ರಾಮದಲ್ಲಿ ಸಾಕಷ್ಟು ಹಾನಿಯಾಗುತ್ತಿದೆ. ಮನೆಗಳ ಬಳಿಯಲ್ಲಿ ರಾತ್ರಿ ಸಂಚರಿಸುವುದರಿಂದ ಮನೆಯಿಂದ ಹೊರಗೆ ಬರಲು ಹೆದರಿಕೆಯಾಗುತ್ತಿದೆ. ಮನೆಯ ಬಳಿಯಲ್ಲಿಯೇ ಕೆಲವೊಮ್ಮೆ ನಿಂತಿರುತ್ತವೆ. ಜೀವ ಹಾನಿಯಾಗುವ ಮುನ್ನ ಕಾಡಾನೆಗಳನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು.

ಕಾಫಿ ಬೆಳೆಗಾರರಾದ ಮಚ್ಚಂಡ ಅಶೋಕ್, ಕೆ.ಪಿ.ರಾಯ್, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕಾಡಾನೆ ಹಾವಳಿ, ಕೃಷಿ ಫಸಲು ಹಾನಿಯ ಬಗ್ಗೆ ತಿಳಿಸಿದರು. ರೈಲ್ವೆ ಬ್ಯಾರಿಗೇಡ್ ಕಾಮಗಾರಿ ಕಳಪೆಯಾದರೆ, ಕಾಡಾನೆಗಳು ಮುರಿದು ಬರುತ್ತವೆ. ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಸಜ್ಜಳ್ಳಿ ಹಾಡಿಯ ಅಣ್ಣಯ್ಯ, ಸತೀಶ, ಶೇಷಪ್ಪ ಮತ್ತು ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!