- ದಾವಣಗೆರೆ ಸಂಸದರಾಗಿ ಆಯ್ಕೆಗೊಳಿಸಲು ಕಾಂಗ್ರೆಸ್ ಅಭ್ಯರ್ಥಿ ಮನವಿ ।
- - - ಕನ್ನಡಪ್ರಭ ವಾರ್ತೆ, ದಾವಣಗೆರೆಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಬದಲಾವಣೆಯ ಅಲೆ ಇದ್ದು, ನಮ್ಮ ಮೇಲಿದ್ದ ಜನರ ವಿಶ್ವಾಸವು ಮತ್ತಷ್ಟು ಹೆಚ್ಚಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ, ಎಲ್ಲ ವರ್ಗಗಳ ಹಿತಾಸಕ್ತಿಗಳ ಪರವಾಗಿ ನಿಲ್ಲುವೆ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮವಾರ ಕಿತ್ತೂರು, ಕುರುಡಿ, ಹೆಮ್ಮನಬೇತೂರು, ಚಿಕ್ಕವ್ವ ನಾಗತಿಹಳ್ಳಿ, ದ್ಯಾಮವ್ವನಹಳ್ಳಿ, ಗಾಂಧಿ ನಗರ, ಹುಲಿಕಟ್ಟೆ, ಕೆರೆಯಾಗಳಹಳ್ಳಿ, ಗಿರಿಯಾಪುರ, ಗೊಲ್ಲರಹಳ್ಳಿ, ಅಣಜಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ, ರೋಡ್ ಶೋ ವೇಳೆ ಮಾತನಾಡಿದ ಅವರು, ರಾಜ್ಯ, ದೇಶದಲ್ಲಿ ಬದಲಾವಣೆಯ ಅಲೆ ಆರಂಭವಾಗಿದೆ. ಕಾಂಗ್ರೆಸ್ ಪರ ಒಲವು ವ್ಯಕ್ತವಾಗುತ್ತಿದೆ ಎಂದರು.ಕಳೆದೊಂದು ದಶಕದಿಂದ ಕೇಂದ್ರದ ಬಿಜೆಪಿ ಸರ್ಕಾರವಾಗಲೀ, ಸ್ಥಳೀಯ ಬಿಜೆಪಿ ಸಂಸದರಾಗಲೀ ರೈತರಿಗೆ ನೆರವಾಗುವ ಯಾವುದೇ ಕೆಲಸಗಳನ್ನು ಮಾಡಲಿಲ್ಲ. ಆದರೆ, ಹಿಂದಿನ ಯುಪಿಎ ಆಳ್ವಿಕೆಯಲ್ಲಿ ಡಾ.ಮನಮೋಹನ ಸಿಂಗ್ ಸರ್ಕಾರವು ರೈತರ ಸಾಲ ಮನ್ನಾ ಮಾಡಿ, ಸ್ಪಂದಿಸಿತ್ತು. ಕಾಂಗ್ರೆಸ್ ಸರ್ಕಾರವು ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ದಾವಣಗೆರೆ ಕ್ಷೇತ್ರದಲ್ಲೂ ಜನರು ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದಾವಣಗೆರೆ ಕ್ಷೇತ್ರ ಅಭಿವೃದ್ಧಿ ಹೊಂದಲು ನನಗೊಂದು ಸಲ ಅವಕಾಶ ಮಾಡಿಕೊಡಬೇಕು. ತುಂಗಭದ್ರಾ ನದಿಯಿಂದ ಈ ಭಾಗದ 22 ಕೆರೆಗಳಿಗೆ ನೀರುಹರಿಸಲು ಸ್ಥಳೀಯ ಮುಖಂಡರ ಸಹಕಾರ ಹಾಗೂ ಸಿರಿಗೆರೆ ಶ್ರೀಗಳ ಸಲಹೆಯಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದ ಅವರು, ಅತಿ ಹೆಚ್ಚು ಮತಗಳ ಅಂತರದಲ್ಲಿ ತಮ್ಮನ್ನು ಗೆಲ್ಲಿಸುವಂತೆ ಕೋರಿದರು.ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಬ್ಲಾಕ್ ಅಧ್ಯಕ್ಷ ಹನುಮಂತಪ್ಪ, ಬಿ.ಜಿ.ನಾಗರಾಜ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಅಣಜಿ ಎಸ್.ಕೆ. ಚಂದ್ರಣ್ಣ, ಮುದೇಗೌಡರ ಗಿರೀಶ, ಬಿ.ಕರಿಬಸಪ್ಪ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
- - -ಟಾಪ್ ಕೋಟ್ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಚುನಾವಣೆ ದಿನದಂದು ಮತಗಟ್ಟೆಗೆ ತೆರಳಿ, ಮತದಾನ ಮಾಡಬೇಕು. ಜನರ ಆಶೋತ್ತರಗಳನ್ನು ನಿರಾಸೆಗೊಳಿಸದೇ, ಶ್ರದ್ಧೆಯಿಂದ ಈಡೇರಿಸಲು ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ನಿಂತಿದೆ. ಈ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದರೆ ಎಲ್ಲ ವರ್ಗಗಳ ಹಿತಾಸಕ್ತಿಗಳ ಪರವಾಗಿ ನಿಲ್ಲುತ್ತೇನೆ
- ಡಾ.ಪ್ರಭಾ ಮಲ್ಲಿಕಾರ್ಜುನ, ಅಭ್ಯರ್ಥಿ, ಕಾಂಗ್ರೆಸ್- - - -8ಕೆಡಿವಿಜಿ4, 5:
ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ರೋಡ್ ಶೋ, ಸಭೆ ಮೂಲಕ ಮತಯಾಚಿಸಿದರು.