ದೈವ ಸ್ವರೂಪಳಾದ ಮಹಿಳೆಗೆ ವಿಶೇಷ ಶಕ್ತಿ

KannadaprabhaNewsNetwork |  
Published : Sep 19, 2025, 01:04 AM IST
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಪದಗ್ರಹಣ ಸಮಾರಂಭದಲ್ಲಿ ವೀಣಾ ಕಾಶಪ್ಪನವರ ಮಾತನಾಡಿದರು | Kannada Prabha

ಸಾರಾಂಶ

ಹೆಣ್ಣು ಮಕ್ಕಳಿಗೆ ವಿಶೇಷವಾದ ಶಕ್ತಿಯಿದೆ. ಅವಳು ದೈವ ಸ್ವರೂಪಗಳು ಎಂಬುವುದನ್ನು ನಮ್ಮ ಸಂಸ್ಕೃತಿ ಎತ್ತಿತೋರಿಸುತ್ತದೆ. ಅವಳು ಸರಸ್ವತಿ, ಲಕ್ಷ್ಮೀ, ದುರ್ಗೆ, ಚಾಮುಂಡಿ ಹೀಗೆ ಎಲ್ಲವೂ ಆಗಿದ್ದಾಳೆ. ಅವಳು ಅಬಲೆ ಅಲ್ಲ, ಸಬಲೆ. ಮಹಿಳೆಯನ್ನು ಗೌಣವಾಗಿ ಕಾಣುವ ಪ್ರಶ್ನೆ ಸಮಾಜದಲ್ಲಿ ಉದ್ಭವಿಸಬಾರದು ಅಷ್ಟೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹೆಣ್ಣು ಮಕ್ಕಳಿಗೆ ವಿಶೇಷವಾದ ಶಕ್ತಿಯಿದೆ. ಅವಳು ದೈವ ಸ್ವರೂಪಗಳು ಎಂಬುವುದನ್ನು ನಮ್ಮ ಸಂಸ್ಕೃತಿ ಎತ್ತಿತೋರಿಸುತ್ತದೆ. ಅವಳು ಸರಸ್ವತಿ, ಲಕ್ಷ್ಮೀ, ದುರ್ಗೆ, ಚಾಮುಂಡಿ ಹೀಗೆ ಎಲ್ಲವೂ ಆಗಿದ್ದಾಳೆ. ಅವಳು ಅಬಲೆ ಅಲ್ಲ, ಸಬಲೆ. ಮಹಿಳೆಯನ್ನು ಗೌಣವಾಗಿ ಕಾಣುವ ಪ್ರಶ್ನೆ ಸಮಾಜದಲ್ಲಿ ಉದ್ಭವಿಸಬಾರದು ಅಷ್ಟೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜರುಗಿದ ಜಿಲ್ಲಾ ಮಹಾಸಭೆ ಮಹಿಳಾ ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರು 800 ವರ್ಷಗಳ ಹಿಂದೆಯೇ ಮಹಿಳೆಯನ್ನು ಸಮಾನವಾಗಿ ಕಂಡರು. ಅವಳ ಆತ್ಮಬಲವನ್ನು ಹೆಚ್ಚಿಸಿದರು. ಕಾಯಕದಲ್ಲಿ ಸಮಾನತೆ ನೀಡಿದರು. ಸಮಾಜದ ಮುನ್ನೆಲೆ ಅವಳನ್ನು ತಂದರು ಎಂಬುವುದನ್ನು ಗಮನಿಸಬೇಕು. 12ನೇ ಶತಮಾನದ ಅನುಭವ ಮಂಟಪದ ಮೂಲಕ ಸ್ತ್ರೀ ಸಮಾನತೆ ನೀಡಿ ಸ್ತ್ರೀ ಸಬಲೀಕರಣದ ಧ್ವನಿ ವಿಸ್ತರಿಸಿದವರು ಬಸವಣ್ಣನವರು ಹಾಗೂ ಉಳಿದೆಲ್ಲ ಶರಣರು. ಅವರ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಫಲವೇ ಇಂದು ನಮ್ಮ ಸಮಾಜದ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಗೈದಿದ್ದಾಳೆ ಎಂದು ತಿಳಿಸಿದರು.ಮಹಾಸಭೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮೂಕ್ತಂಬಾ.ಬಿ ಮಾತನಾಡಿ, ಹಾನಗಲ್ ಕುಮಾರಸ್ವಾಮಿಗಳಿಂದ ಪ್ರಾರಂಭಗೊಂಡ ಮಹಾಸಭೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಮಾಜವನ್ನು ಉನ್ನತಿಗೊಳಿಸಬೇಕೆಂಬುವುದಕ್ಕಾಗಿತ್ತು. ಆ ನೆಲೆಯಲ್ಲಿ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದೇವೆ. 1940 ಸಂದರ್ಭದಲ್ಲಿಯೇ ವೀರಶೈವ ಲಿಂಗಾಯತ ಧರ್ಮವನ್ನು ಸ್ವತಂತ್ರ್ಯ ಧರ್ಮವನ್ನಾಗಿ ರೂಪಿಸಬೇಕೆಂಬ ಒತ್ತಾಯವಿತ್ತು. ಅದು ಈಡೇರಲಿಲ್ಲ. ರಾಜಕೀಯವಾಗಿ ನಾವು ಪ್ರಭಾವಿಗಳಾಗದಿದ್ದರೇ ನಮ್ಮ ಸಮಾಜವು ತುಳಿತ್ತಕ್ಕೊಳಗಾಗುತ್ತದೆ. 121 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಮಹಾಸಭೆಯು ಸಂಘಟನೆಗೆ ಬಹು ಆದ್ಯತೆಯನ್ನು ನೀಡುತ್ತ ಬಂದಿದೆ. ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಬಹುಮೌಲಿಕ. ಹಿಂದಿನ ಎಲ್ಲ ಅಧ್ಯಕ್ಷರು ಮಹಾಸಭೆಯನ್ನು ತಳಮಟ್ಟದಲ್ಲಿ ಕಟ್ಟಿಬೆಳೆಸಿದ್ದಾರೆ ಎಂದು ಬಣ್ಣಿಸಿದರು.ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪವನ್ನು ಮೂಡಿಸುವ ಕೆಲಸವನ್ನು ಮಹಾಸಭೆಯು ನಿರಂತರವಾಗಿ ಮಾಡುತ್ತಿದೆ. ಕಾಯಕಕಟ್ಟೆ ಮೂಲಕ ಸ್ವಾವಲಂಬತನವನ್ನು ತಂದಿದೆ. ಇಂದು ಅನೇಕ ಮಹಿಳೆಯರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಮಹಿಳಾ ಘಟಕವು ಮತ್ತಷ್ಟು ಸಬಲಗೊಳ್ಳಲಿದೆ ಎಂದರು.ನಿಡಸೋಸಿಯ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರು ಕಾಯಕ ಸಂಸ್ಕೃತಿಯನ್ನು ಬಿತ್ತಿ ಬೆಳೆದರು. ಪುರುಷ ಸ್ತ್ರೀ ಎಂಬ ಭೇದವನ್ನು ಅಳಿಸಿ ಸರ್ವಸಮಾನತೆ ನೀಡಿದರು. ಬಸವಣ್ಣನವರ ಸಮಾನತೆಯ ಪರಿಕಲ್ಪನೆ ಯುಗಯುಗಳಿಗೂ ವಿಸ್ತರಿಸಿದೆ. ಮಹಿಳೆಯರಿಗೆ ಅಂಥ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದರು. ಮಹಿಳೆ ಸ್ವಾವಲಂಬಿಯಾಗಿಯೇ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.ವೇದಿಕೆಯ ಮೇಲೆ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಆಶಾ ಪ್ರಭಾಕರ ಕೋರೆ, ವಿದ್ಯಾ ಗೌಡರ, ಶಾರದಾ ಪಾಟೀಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾಸಭೆಯ ನೂತನ ಸದಸ್ಯೆಯರಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿತು. ಉಮೇಶ ಬಾಳಿ, ಅಣ್ಣಾ ಸಾಹೇಬ ಕೊರಬು, ಸರೋಜನಿ ನಿಶಾನದಾರ, ರಮೇಶ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಯ.ರು.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಮಹಾಸಭೆಯು ಇಂದು ಸಾಕಷ್ಟು ವಿಸ್ತರಿಸುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಕಲ್ಪಿಸುತ್ತಿದೆ. ನಾವೆಲ್ಲರೂ ಒಂದು ಶಕ್ತಿಯಾಗಿ ಬೆಳೆಯಬೇಕು. ನಾವೆಲ್ಲ ಮನೆಬಿಟ್ಟು ಹೊರಗೆ ಬರುವಂತಾಗಬೇಕು. ನಮ್ಮೊಳಗೆ ಸಂಘಟನೆ ಬಹುಮುಖ್ಯವೆನಿಸಿದೆ. ರಾಜ್ಯದಲ್ಲಿ ಏಕೈಕ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಬಹುಮೌಲಿಕ ಸೇವೆಯನ್ನು ಸಲ್ಲಿಸುತ್ತಿರುವವರು ರತ್ನಪ್ರಭಾ ಬೆಲ್ಲದ ಅವರು. ಅವರೊಂದು ನಮಗೆಲ್ಲ ನಿದರ್ಶನವಾಗಿದ್ದಾರೆ. ಮುಂಬರುವ ದಿನಗಳಲ್ಲಿ ಮಹಿಳಾ ಇನ್ನಷ್ಟು ರಚನಾತ್ಮಕವಾದ ಕೆಲಸಗಳನ್ನು ಮಾಡಲಿ.

-ವೀಣಾ ಕಾಶಪ್ಪನವರ, ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕ.

ಬೆಳಗಾವಿ ಜಿಲ್ಲಾ ಘಟಕವು ಸಾಕಷ್ಟು ಕೆಲಸವನ್ನು ಮಾಡುತ್ತಿದೆ. ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸುವುದನ್ನು ಯಾರೂ ಮರೆಯಬಾರದು. ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ನಿಲ್ಲುವಂತೆ ಮಹಾಸಭೆಯು ಎಲ್ಲ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಯಕ ಸಂಸ್ಕೃತಿಯನ್ನು ಬಿತ್ತಿ ಬೆಳೆಸುತ್ತಿದೆ. ಸಮಾನತೆಯನ್ನು ನೀಡಿದೆ. ಎಲ್ಲರೂ ಇದರ ಸದುಪಯೋಗ ಪಡೆಯುವಂತಾಗಬೇಕು.

-ಮೂಕ್ತಂಬಾ.ಬಿ,

ಮಹಾಸಭೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ