ಮೇಲುಕೋಟೆಯಲ್ಲಿ ಪುಷ್ಠಿಕರಿಸುವ ಶ್ರೀರಾಮಚಂದ್ರ- ಚೆಲುವನಾರಾಯಣಸ್ವಾಮಿಯ ದೈವೀಕ ಸಂಬಂಧ

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಸುಮಾರು ಎರಡು ಕಿಮೀ ಕ್ರಮಿಸಿದರೆ 1000 ಅಡಿ ಎತ್ತರದ ಬೆಟ್ಟದ ಮೇಲೆ ಹೆಬ್ಬಂಡೆಯಲ್ಲಿ ಧನುಷ್ಕೋಟಿ ತೀರ್ಥವಿದೆ. ಧನುಷ್ಕೋಟಿ ತಲುಪಲು ಬೆಟ್ಟಹತ್ತಿ ಕಡಿದಾದ ಹೆಬ್ಬಂಡೆಯನ್ನು ಇಳಿದು ಸಾಗಬೇಕು. ಧನುಷ್ಕೋಟಿ ಮೇಲುಕೋಟೆ ಬೆಟ್ಟದ ತುತ್ತತುದಿಯಲ್ಲಿದೆ. ರಾಮನ ಬಾಣಪ್ರಯೋಗದಿಂದ ಬಂದ ಧನುಷ್ಕೋಟಿಯಲ್ಲಿನ ತೀರ್ಥ ಎಂಥಹ ಬರಗಾಲವಿದ್ದರೂ ಬತ್ತಿದ ನಿದರ್ಶನ ಇಲ್ಲ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆಯ ಧನುಷ್ಕೋಟಿ, ಸೀತಾರಣ್ಯ, ಪಟ್ಟಾಭಿರಾಮನ ಸನ್ನಿಧಿಗಳು ಶ್ರೀರಾಮಚಂದ್ರನಿಗೂ ಚೆಲುವನಾರಾಯಣಸ್ವಾಮಿಯ ಸನ್ನಿಧಿಗೂ ಇರುವ ದೈವೀಕ ಸಂಬಂಧವನ್ನು ಪುಷ್ಠಿಕರಿಸುತ್ತಿದೆ.

ಚೆಲುವನಾರಾಯಣಸ್ವಾಮಿ ಸಾಕ್ಷಾತ್ ರಾಮಚಂದ್ರನೇ ಆರಾಧಿಸಿದ ದಿವ್ಯ ಮೂರ್ತಿಯಾಗಿದ್ದು, ಈ ಕಾರಣದಿಂದಲೇ ಸ್ವಾಮಿಗೆ ರಾಮಪ್ರಿಯ ಎಂಬ ಹೆಸರಿದೆ. ಇಲ್ಲಿನ ಧನುಷ್ಕೋಟಿ, ಸೀತಾರಣ್ಯ, ಪಟ್ಟಾಭಿರಾಮನ ಸನ್ನಿಧಿಗಳು ಶ್ರೀಕ್ಷೇತ್ರದೊಂದಿಗೆ ಶ್ರೀರಾಮಚಂದ್ರನ ಭಾಂಧವ್ಯದ ಮಹಿಮೆಗೆ ಸಾಕ್ಷಿಯಾಗಿದೆ.

ಮೇಲುಕೋಟೆಯ ಬೆಟ್ಟಗುಡ್ಡಗಳ ಮೇಲೆ ದಟ್ಟಡವಿಯಲ್ಲಿ ಸಂಚರಿಸುತ್ತಿದ್ದಾಗ ಸೀತಾಮಾತೆಗೆ ಬಾಯಾರಿಕೆ ಆದಾಗ ಶ್ರೀ ರಾಮಚಂದ್ರ ಲಕ್ಷ್ಮಣನಿಗೆ ಬಂಡೆ ಮೇಲೆ ಬಾಣಪ್ರಯೋಗ ಮಾಡಿ ನೀರು ತರಿಸುವಂತೆ ಹೇಳುತ್ತಾನೆ. ಲಕ್ಷ್ಮಣ ಹಲವು ಸಲ ಬಾಣಪ್ರಯೋಗ ಮಾಡಿದರೂ ಬಂಡೆಯಲ್ಲಿ ನೀರು ತರಿಸಲು ಸಾಧ್ಯವಾಗದಿದ್ದಾಗ ಸಾಕ್ಷಾತ್ ರಾಮಚಂದ್ರನೇ ಬಾಣಪ್ರಯೋಗ ಮಾಡಿ ಹೆಬ್ಬಂಡೆಯಲ್ಲಿ ನೀರು ತರಿಸುತ್ತಾನೆ.

ಈ ಪವಿತ್ರ ತೀರ್ಥವನ್ನು ಸೀತಾಮಾತೆ ಸ್ವೀಕರಿಸಿ ಬಾಯಾರಿಕೆ ತೀರಿಸಿಕೊಂಡರೆಂದು ಈ ಸ್ಥಳಕ್ಕೆ ಧನುಷ್ಕೋಟಿ ಎಂಬ ಹೆಸರು ಬಂತು ಎಂದು ಐತಿಹ್ಯ ವಿವರಿಸುತ್ತದೆ. ಇಲ್ಲಿನ ಬಂಡೆಯಲ್ಲಿ ಸೀತಾಲಕ್ಷಣ ಹನುಮನ ಸಮೇತ ರಾಮಚಂದ್ರನ ಉಬ್ಬುಶಿಲ್ಪವಿದ್ದು ಪುಟ್ಟ ಗುಡಿ ನಿರ್ಮಿಸಲಾಗಿದೆ. ರಾಮನ ಪಾದುಕೆಯೂ ಇಲ್ಲಿದೆ ಲಕ್ಷ್ಮಣ ಬಾಣ ಪ್ರಯೋಗ ಮಾಡಿದ ಗುರುತೆಂಬಂತೆ ಬಂಡೆಗಳ ಮೇಲೆ ಅಲ್ಲಲ್ಲಿ ಬಾಣದ ಗುರುತುಗಳಿವೆ. ಧನುಷ್ಕೋಟಿಯಲ್ಲಿ ರಾಮಚಂದ್ರ ಬಾಣಪ್ರಯೋಗ ಮಾಡಿದ ಜಾಗದಲ್ಲಿ ನೀರು ಸದಾಕಾಲ ಸಂಗ್ರವಾಗಿರುತ್ತದೆ.

ಬೆಟ್ಟದ ಮೇಲಿನ ಹೆಬ್ಬಂಡೆಯಲ್ಲಿದೆ ಧನುಷ್ಕೋಟಿ:

ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಸುಮಾರು ಎರಡು ಕಿಮೀ ಕ್ರಮಿಸಿದರೆ 1000 ಅಡಿ ಎತ್ತರದ ಬೆಟ್ಟದ ಮೇಲೆ ಹೆಬ್ಬಂಡೆಯಲ್ಲಿ ಧನುಷ್ಕೋಟಿ ತೀರ್ಥವಿದೆ.

ಧನುಷ್ಕೋಟಿ ತಲುಪಲು ಬೆಟ್ಟಹತ್ತಿ ಕಡಿದಾದ ಹೆಬ್ಬಂಡೆಯನ್ನು ಇಳಿದು ಸಾಗಬೇಕು. ಧನುಷ್ಕೋಟಿ ಮೇಲುಕೋಟೆ ಬೆಟ್ಟದ ತುತ್ತತುದಿಯಲ್ಲಿದೆ. ರಾಮನ ಬಾಣಪ್ರಯೋಗದಿಂದ ಬಂದ ಧನುಷ್ಕೋಟಿಯಲ್ಲಿನ ತೀರ್ಥ ಎಂಥಹ ಬರಗಾಲವಿದ್ದರೂ ಬತ್ತಿದ ನಿದರ್ಶನ ಇಲ್ಲ.

ದಿನನಿತ್ಯ ನೂರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಮತ್ತು ಮುಜರಾಯಿ ಇಲಾಖೆ ಜಂಟಿ ವ್ಯಾಪ್ತಿಯಲ್ಲಿರುವ ಈ ಸ್ಥಳದಲ್ಲಿ ಅರಣ್ಯಇಲಾಖೆ ಚೆಲುವ ದೈವೀವನ ನಿರ್ಮಾಣ ಮಾಡಿದೆ. ಸಮೀಪದಲ್ಲೇ ದತ್ತಾತ್ರೇಯ ಪಾದುಕೆ ಇರುವ ಗುಡಿ ಹಾಗೂ ವೇದಪುಷ್ಕರಣಿ ಇದೆ.

ಕಲ್ಯಾಣಿ ತೀರದಲ್ಲಿ ಸೀತಾರಣ್ಯದಲ್ಲಿ ರಾಮನ ಮೂರ್ತಿ ಹಾಗೂ ಅಕ್ಕತಂಗಿಕೊಳದ ಬಳಿ ಪಟ್ಟಾಭಿರಾಮನ ಸನ್ನಿಧಿಯಿದೆ ಮತ್ತೊಂದು ವಿಶೇಷವೆಂದರೆ ಮೇಲುಕೋಟೆ ಸಂಪರ್ಕಿಸುವ ಎಲ್ಲಾ ಮಾರ್ಗದಲ್ಲಿಯೂ ಹನುಮನ ಗುಡಿಗಳಿವೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾಗುತ್ತಿದೆ. ಈ ಐತಿಹಾಸಿ ಕ್ಷಣ ಭಾರತಾದ್ಯಂತ ಸಂಚಲನ ಮೂಡಿಸಿದೆ.

Share this article