ಕನ್ನಡಪ್ರಭ ವಾರ್ತೆ, ತರೀಕೆರೆ
ಬಸವಾದಿ ಶರಣರು ಬಯಸಿದ ಸಮ ಸಮಾಜದ ಕನಸು ನನಸಾಗಿಸುವ ಮೂಲಕ ರಾಜ್ಯವನ್ನು ಕಲ್ಯಾಣ ರಾಜ್ಯವಾಗಿ ಮಾಡಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.ದೋರನಾಳು ಗ್ರಾಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು , ವಿನಾಯಕ ಕ್ರಿಕೇಟರ್ಸ್, ಸ್ವಾಮಿ ವಿವೇಕಾನಂದ ಮಹಿಳಾ ಸಂಘ ದೋರನಾಳು ಇವರ ಆಶ್ರಯದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ನಡೆದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನನ್ನು ಅಪ್ರಸ್ತುತ ಗೊಳಿಸುವ ಕೆಲಸವಾಗಬಾರದು. ಇಂದಿನ ದೇಶದ ಎಲ್ಲಾ ಸಮಸ್ಯೆಗಳಿಗೆ ಶರಣರ ಬದುಕು ಪರಿಹಾರವಾಗಬಲ್ಲದು. ದಯೆ ಇರದ ಧರ್ಮ ಯಾವುದು ಎಂದು ಬಸವಣ್ಣ ಪ್ರಶ್ನಿಸಿರುವುದು ಇಂದಿನ ಧಾರ್ಮಿಕ ಮೂಲಭೂತವಾದಕ್ಕೆ ಸೂಚಿಸಿದ ಪರಿಹಾರ ಎಂದು ಹೇಳಿದರು.ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಸೌಲಭ್ಯಗಳು ಹೆಚ್ಚಾಗಬೇಕು. ಮಹಾನೀಯರ ಜಯಂತಿ ಸಾರ್ವಜನಿಕರಿಗೆ ಸಹಕಾರಿಯಾಗುವಲ್ಲಿ ಉಚಿತ ಆರೋಗ್ಯ ಶಿಬಿರ ಸಹಕಾರಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ಅಂತರಂಗ ಶುದ್ಧಿ ಆಗದ ಹೊರತು ಬಹಿರಂಗ ಶುದ್ಧಿ ಆಗದು. ನಾವು ಬದಲಾಗದ ಹೊರತು ಸಮಾಜ ಬದಲಾಗದು. ಶರಣರು ಬಯಸಿದ ಕೇಡಿಲ್ಲದ ಪ್ರೀತಿಯ ಸಮಾಜ ಕಟ್ಟೊಣ, ಬಸವಣ್ಣ ಕರ್ನಾಟಕದಲ್ಲಿ ಹುಟ್ಟಿದ ಕಾರಣಕ್ಕೆ ನಾಡಿಗೆ ಮಹತ್ವವಿದೆ. ನಾಡಿನ ಸೌಹಾರ್ದತೆಗೆ ಶಿವ ಶರಣರ , ದಾಸರ, ದಾರ್ಶನಿಕರ ಸೂಫಿಗಳ ಕೊಡುಗೆ ಅಪಾರ. ಭಾರತದ ಸಂವಿಧಾನ ಬಸವ ಸಂವಿಧಾನವಾಗಿದೆ ಎಂದು ಹೇಳಿದರು. ಬಸವಣ್ಣ ಕೇಳುವ ಧ್ವನಿಯಾಗಿದ್ದನು. ನಮ್ಮೊಳಗಿನ ಅಹಂಕಾರ ಕಳೆದುಕೊಳ್ಳುವ ವರೆಗು ಬಸವ ಮಾರ್ಗ ತಲುಪಲು ಸಾಧ್ಯವಿಲ್ಲ. ನಡೆ ನುಡಿ ಒಂದಾಗದೆ ವಿವೇಕ ಬರಲು ಸಾಧ್ಯವಿಲ್ಲ. ಬಸವಣ್ಣ ವಿರೋಧಿಸಿದ ಅನಿಷ್ಟಾಚರಣೆ. ಮೌಢ್ಯಗಳನ್ನು ತೊಡೆದು ಹಾಕುವಲ್ಲಿ ಆಧುನಿಕ ಸಮಾಜ ಕಾರ್ಯ ಪ್ರವೃತ್ತ ರಾಗಬೇಕು ಎಂದು ಹೇಳಿದರುದೋರನಾಳು ಗ್ರಾಪಂ ಅಧ್ಯಕ್ಷೆ ಶೀಲಾ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಅಸ್ಲಾಂ ಖಾನ್, ಗ್ರಾಮದ ಮುಖಂಡರಾದ ದೋರನಾಳು ಪರಮೇಶ್, ಚಿತ್ರ ಶೇಖರಯ್ಯ, ಶಿವರಾಜ್, ಬಸವರಾಜ್, ಲೋಹಿತ್ , ರಾಜೇಶ್ವರಿ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ , ಮುಖಂಡರಾದ ನಟರಾಜ್, ಟಿ.ಎಸ್. ಮೋಹನ್ ಕುಮಾರ್, ಚೇತನ್ ಗೌಡ, ಟಿ.ಜಿ.ಸದಾನಂದ ಮಾತನಾಡಿದರು.ರೋಟರಿ ರಕ್ತ ನಿಧಿ ಕೇಂದ್ರ ಶಿವಮೊಗ್ಗದ ಸಹಕಾರದಲ್ಲಿ ಯುವಕರು ರಕ್ತ ದಾನ ಮಾಡಿದರು. ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ನಡೆಸಿದ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 35 ಮಂದಿ ಶಸ್ತ್ರ ಚಿಕಿತ್ಸೆಗೆ ಹೆಸರು ನೊಂದಾಯಿಸಿದರು.-
30ಕೆಟಿಆರ್.ಕೆ.6ಃತರೀಕೆರೆ ಸಮೀಪದ ದೋರನಾಳು ಗ್ರಾಮದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಡಿಸಿ.ಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮತ್ತಿತರರು ಇದ್ದರು.