- ನ್ಯಾಷನಲ್ ಮೆಡಿಕಲ್ ಕಮಿಷನ್‌ನಿಂದ ಅರ್ಜಿ ತಿರಸ್ಕೃತ - ಜಿಲ್ಲಾಸ್ಪತ್ರೆಯನ್ನೇ ಮೆಡಿಕಲ್ ಕಾಲೇಜನ್ನಾಗಿ ಪರಿವರ್ತಿಸುವ ಉದ್ದೇಶ
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಕೇಂದ್ರ ರಾಮನಗರ ಮತ್ತು ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸು ಸದ್ಯಕ್ಕೆ ಭಗ್ನಗೊಂಡಿದೆ.ರಾಮನಗರ ಮತ್ತು ಕನಕಪುರದಲ್ಲಿ ಪ್ರತ್ಯೇಕ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನ್ಯಾಷನಲ್ ಮೆಡಿಕಲ್ ಕಮಿಷನ್ ಗೆ ಅರ್ಜಿ ಸಲ್ಲಿಸಿತ್ತು. ಸಿಬ್ಬಂದಿ, ಮೂಲಸೌಕರ್ಯದ ಕೊರತೆ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದಾಗಿ ಆ ಅರ್ಜಿಗಳು ತಿರಸ್ಕೃತಗೊಂಡಿವೆ.
ಎರಡೂ ಮೆಡಿಕಲ್ ಕಾಲೇಜುಗಳ ಅರ್ಜಿ ತಿರಸ್ಕೃತ:
ಈ ಪೈಕಿ ನ್ಯಾಷನಲ್ ಮೆಡಿಕಲ್ ಕಮಿಷನ್ ರಾಮನಗರ ಮತ್ತು ಕನಕಪುರದ ಮೆಡಿಕಲ್ ಕಾಲೇಜುಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳ ನೆಪವೊಡ್ಡಿ ತಿರಸ್ಕರಿಸಿದೆ. ಆ ತಾಂತ್ರಿಕ ಕಾರಣಗಳು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ, ಸದ್ಯಕ್ಕೆ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯಗಳು, ಬೋಧನಾ ಸಿಬ್ಬಂದಿ ವಿಚಾರದಲ್ಲಿ ಸ್ಥಾಪಿತ ನಿಯಮಗಳು ಮತ್ತು ನಿಬಂಧನೆಗಳನ್ನು ಪೂರೈಸಿಲ್ಲ ಎಂದು ಗೊತ್ತಾಗಿದೆ.
ಜಿಲ್ಲಾ ಕೇಂದ್ರ ರಾಮನಗರದಲ್ಲಿ ಆರಂಭವಾಗಿರುವ ಜಿಲ್ಲಾಸ್ಪತ್ರೆಯನ್ನೇ ನೂತನ ಮೆಡಿಕಲ್ ಕಾಲೇಜನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಇದು 500 ಹಾಸಿಗೆಗಳ ಆಸ್ಪತ್ರೆಯಾಗಿದೆ. ಮೆಡಿಕಲ್ ಕಾಲೇಜು ಆರಂಭವಾಗಲು ಕನಿಷ್ಠ 350 ಹಾಸಿಗೆಗಳ ಹಾಲಿ ನಡೆಯುತ್ತಿರುವ ಆಸ್ಪತ್ರೆ ಇರಬೇಕು ಎಂಬ ಎನ್‌ಎಂಸಿ ನಿಯಮ ಪಾಲನೆಯಾಗಿದೆ.
2020ರ ಅಕ್ಟೋಬರ್‌ನಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್ ಹೊರಡಿಸಿರುವ ಆದೇಶದಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಹಲವಾರು ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಮೆಡಿಕಲ್ ಕಾಲೇಜು ಸ್ಥಾಪಿಸಲು ಕನಿಷ್ಠ 2 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಕನಿಷ್ಠ 300 ಹಾಸಿಗೆಗಳ ಆಸ್ಪತ್ರೆ ಇರಬೇಕು. ವೈದ್ಯಕೀಯ ಶಾಸ್ತ್ರದ ಹಲವಾರು ವಿಭಾಗಗಳಲ್ಲಿ ಬೋಧನೆಗೆ ಅವಕಾಶವಾಗುವಂತೆ ಅವಶ್ಯಕ ಸಂಖ್ಯೆಯ ಕೊಠಡಿಗಳು ಲಭ್ಯವಿರಬೇಕು. ಗ್ರಂಥಾಲಯ, ಗಣಕ ಯಂತ್ರಗಳ ಕೊಠಡಿ ಹೀಗೆ ಹಲವಾರು ಮೂಲ ಸೌಕರ್ಯಗಳು ಸ್ಥಾಪಿತವಾಗಿರಬೇಕು. ವಿದ್ಯಾರ್ಥಿಗಳ ವಾಸಕ್ಕೆ ಅನುಕೂಲಗಳನ್ನು ಕಲ್ಪಿಸಬೇಕು. ಬೋಧನೆಗೆ ಅನುಕೂಲವಾಗುವಂತೆ ಬೋಧಕ ವರ್ಗ ಮತ್ತು ಆಡಳಿತ ಸಿಬ್ಬಂದಿಯ ಲಭ್ಯತೆಯನ್ನು ಅರ್ಜಿಯೊಂದಿಗೆ ತಿಳಿಸಬೇಕು.
ರಾಮನಗರ ಮತ್ತು ಕನಕಪುರ ಮೆಡಿಕಲ್ ಕಾಲೇಜುಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಗೆ ನ್ಯಾಷನಲ್ ಮೆಡಿಕಲ್ ಕಮಿಷನ್ ಮಾನ್ಯ ಮಾಡಿಲ್ಲ. ಕೊರತೆಗಳನ್ನು ನೀಗಿಸಿ ಪುನಃ ಅರ್ಜಿ ಸಲ್ಲಿಸಿದರೆ ಬಹುಶಃ ಅನುಮತಿ ದೊರೆಯಬಹುದು. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಗಮನಹರಿಸಬೇಕು.
- ಡಾ.ಸಿ.ಎನ್.ಮಂಜುನಾಥ್, ಸಂಸದರುರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತರಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ಈ ವಿಚಾರವನ್ನು ಬಜೆಟ್ ನಲ್ಲೂ ಸೇರಿಸಲಾಗಿತ್ತು. ಸಿಬ್ಬಂದಿ ಕೊರತೆ ಎಂದು ಅನುಮತಿ ನೀಡಿಲ್ಲ ಎಂಬ ವಿಚಾರ ತಿಳಿಸಿದ್ದು, ಈ ಬಗ್ಗೆ ಗಮನಹರಿಸುತ್ತೇವೆ.
- ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ