ಮಗುವನ್ನು ವಿಶ್ವಮಾನವ ಮಾಡುವುದೇ ವಿದ್ಯೆ ಕರ್ತವ್ಯ: ಶಾಸಕ ಕೆ.ಎಸ್.ಬಸವಂತಪ್ಪ

KannadaprabhaNewsNetwork |  
Published : Dec 30, 2025, 02:00 AM IST
ಕ್ಯಾಪ್ಷನ29ಕೆಡಿವಿಜಿ33ದಾವಣಗೆರೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ, ಬೆಳೆಯುತ್ತ ನಾವು ಆ ಮಗುವನ್ನು ಅಲ್ಪಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ, ಬೆಳೆಯುತ್ತ ನಾವು ಆ ಮಗುವನ್ನು ಅಲ್ಪಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕರೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂತಹ ಮಹನೀಯರ ಜಯಂತಿಗಳಲ್ಲಿ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರೆ ಅವರಲ್ಲಿ ಜ್ಞಾನದ ಮಟ್ಟ ಹೆಚ್ಚಾಗುತ್ತದೆ. ಈ ಬಗ್ಗೆ ಶಿಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ. ಅಧಿಕಾರಿಗಳು ಕಾಟಾಚಾರಕ್ಕೆ ಜಯಂತಿಗಳನ್ನು ಆಚರಿಸಬಾರದು, ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸಬೇಕೆಂದು ಸಲಹೆ ನೀಡಿದರು.

ಕುವೆಂಪು ಅವರ ‘ಮನುಜ ಮತ ವಿಶ್ವಪಥ’ ಎಂಬ ವಿಶ್ವಮಾನವ ಸಂದೇಶವನ್ನು ಸಾರಬೇಕಾಗಿದೆ. ಇದು ಮಾನವ ಕುಲದ ಸಮಾನತೆ, ವೈಚಾರಿಕತೆ ಮತ್ತು ಜಾತ್ಯಾತೀತೆಯ ಆಶಯಗಳನ್ನು ಪಸರಿಸುವ ದಿನವಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅವರ ಕಾವ್ಯಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯಕವಾಗಲಿದೆ ಎಂದು ಕಿವಿಮಾತು ಹೇಳಿದರು.

ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು. ಹೃದಯವಂತಿಕೆ, ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎನ್ನುವುದನ್ನು ತಮ್ಮ ಕಾವ್ಯಗಳ ಮೂಲಕ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗಲಿದೆ ಎಂದರು.

‘ಸರ್ವಜನಾಂಗದ ಶಾಂತಿಯ ತೋಟ’ ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳ ಸಾರವಾಗಿದೆ. ಇದನ್ನು ಅವರ ಜನ್ಮದಿನದಂದು ಆಚರಿಸಲಾಗುತ್ತಿದೆ. ಎಲ್ಲಾ ಧರ್ಮ, ಜಾತಿ, ಭಾಷೆಗಳ ಜನರ ನಡುವೆ ಸಾಮರಸ್ಯ, ಸಹಭಾಳ್ವೆ ಮತ್ತು ಏಕತೆಯನ್ನು ಸಾರುತ್ತದೆ. ಕುವೆಂಪು ಅವರು ನೀಡಿರುವ ವಿಶ್ವ ಮಾನವ ಸಂದೇಶವನ್ನು ಇಂದಿನ ಸಮಾಜದಲ್ಲಿ ಪಾಲಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ನಮನ ಅಕಾಡೆಮಿಯ ವಿದುಷಿ ಡಿ.ಕೆ.ಮಾಧವಿ ಇತರರು ಹಾಜರಿದ್ದರು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇಂದಿನ ದಿನಗಳಲ್ಲಿ ಅನ್ನ, ಆಚಾರ, ವಿಚಾರ, ಉಡುಪು ಮುಂತಾದ ವಿಷಯಗಳಲ್ಲಿ ಮನಸ್ಸುಗಳನ್ನು ಒಡೆಯುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ‘ವಿಶ್ವಮಾನವ ಸಂದೇಶ’ ಮಾನವ ಸಂಕುಲಕ್ಕೆ ಉಳಿದಿರುವ ಏಕೈಕ ದಾರಿ.

ಕೆ.ಎಸ್.ಬಸವಂತಪ್ಪ, ಶಾಸಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ