ಕನ್ನಡಪ್ರಭ ವಾರ್ತೆ ಹಾಸನ
ವಿಜಯ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಮಗೆ ಇರುವುದು ಒಂದೇ ಒಂದು ಭೂಮಿ, ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ರೈತರು ಹಿಂದಿನ ಕಾಲದಲ್ಲಿ ಹೊಳೆ, ಬಾವಿ ನೀರನ್ನು ಕೃಷಿ ಬಳಕೆಗೆ ಬಳಸುತ್ತಿದ್ದರು. ಆದರೆ ಈಗ ಕೊಳವೆ ಬಾವಿಯ ಮೂಲಕ ಭೂಮಿಯ ಅಂತರ್ಜಲವನ್ನು ಯಥೇಚ್ಛವಾಗಿ ಕೃಷಿ, ಕೈಗಾರಿಕೆಗಳಿಗೆ ಬಳಸಿ ನೀರಿನ ಅಭಾವಕ್ಕೆ ಕಾರಣನಾಗಿದ್ದಾನೆ.ಅಂತರ್ಜಲ ಮಟ್ಟ ಕುಸಿದಿದ್ದು, ಅದನ್ನು ತಡೆಯಲು ಇಂದು ನಾವು ಮಳೆ ಬಂದಾಗ ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕಾಗಿದೆ. ಪ್ರತಿ ಮನೆಯಲ್ಲೂ, ಕಟ್ಟಡದಲ್ಲೂ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳವಂತೆ ಸಲಹೆ ನೀಡಿದರು.
ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿಯವರು ಮಾತನಾಡುತ್ತಾ ಕೋಟಿ ರು.ಗಳನ್ನು ನೀಡಿದರೂ ನಾವು ಒಂದೇ ಒಂದು ಎಲೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸಸ್ಯ ಸಂಪತ್ತು ಬಹಳ ಅಮೂಲ್ಯವಾದ ಸಂಪತ್ತು ಅದನ್ನು ರಕ್ಷಿಸುವತ್ತ ಪ್ರತಿಯೊಬ್ಬರು ಗಮನ ಹರಿಸಬೇಕು. ರಸ್ತೆ ಬದಿಯಲ್ಲಿ ಕಸ ಹಾಕುವ ಪ್ರವೃತ್ತಿ ನಿಲ್ಲಿಸಿ ಮನೆಯಲ್ಲಿ ಕಸವನ್ನು ಸರಿಯಾಗಿ ವಿಂಗಡಿಸಿ ಕಸದಿಂದ ರಸವನ್ನಾಗಿ ಪರಿವರ್ತಿಸುವ ಕೆಲಸ ನಡೆಯುವಂತಾಗಬೇಕು. ಪರಿಸರ ದಿನ ಎಂದರೆ ಬಣ್ಣಬಣ್ಣದ ಹಸಿರು ಉಡುಪುಗಳನ್ನು ಧರಿಸುವುದು, ನಾಟಕ ಪ್ರದರ್ಶಿಸುವುದು, ಹಾಡುಗಳನ್ನು ಹಾಡುವುದು, ನೃತ್ಯ ಮಾಡುವುದು ಅಷ್ಟೇ ಅಲ್ಲ ಇದು ಚಿಂತನೆ ನಡೆಸುವ ದಿನ. ಪ್ರತಿದಿನವೂ ಪರಿಸರ ದಿನವಾಗಬೇಕು ಎಂಬ ಸಂದೇಶವನ್ನು ನೀಡಿದರು.ಪರಿಸರ ದಿನಾಚರಣೆಯ ಅಂಗವಾಗಿ 9ನೇ ತರಗತಿಯ ವಿದ್ಯಾರ್ಥಿಗಳು ಪ್ರಕೃತಿ ಮಾನವನೊಂದಿಗೆ ಹೊಂದಿರುವ ಒಡನಾಟದ ಕುರಿತ ತಮ್ಮ ಅನುಭವಗಳನ್ನು ‘ಪ್ರಕೃತಿಯ ಪಿಸುಮಾತಿನೊಂದಿಗೆ’ಎಂಬ ಸಂದೇಶವನ್ನು ಕ್ಯೂಆರ್ ಕೋಡ್ ಅನ್ನು ರಚಿಸುವ ಮೂಲಕ ಹಂಚಿಕೊಂಡರು, 10ನೇ ತರಗತಿಯ ವಿದ್ಯಾರ್ಥಿಗಳು ‘ಭವಿಷ್ಯತ್ತಿನ ಪ್ರಕೃತಿ 2050’ ಇಂದಿನ ವಿದ್ಯಾಮಾನಗಳಿಗೆ ಒಳಪಡುತ್ತಿರುವ ಪ್ರಕೃತಿಯು 2050ರಲ್ಲಿ ಯಾವ ಬಗೆಯ ರೂಪ ಹಾಗೂವೈರುಧ್ಯಗಳಿಗೆ ಒಳಪಡಬಹುದು ಎಂಬ ಚಿಂತನೆ ಗಳನ್ನೊಳಗೊಂಡ ‘ಭವಿಷ್ಯತ್ತಿನ ಪ್ರಕೃತಿ- 2050 ಮತ್ತು 2075 ’, ಎಂಬ ಶೀರ್ಷಿಕೆ ಅಡಿಯಲ್ಲಿ ಭಿತ್ತಿ ಪತ್ರಿಕೆಗಳನ್ನು ರೂಪಿಸಿ ಪ್ರದರ್ಶಿಸಿದರು.
ವಿದ್ಯಾರ್ಥಿಗಳು ಅಡಿಕೆ ತಟ್ಟೆಗಳಲ್ಲಿ ಹಾಗೂ ಅರಳಿಮರದ ಎಲೆಗಳ ಮೇಲೆ ಮೂಡಿಸಿದ ಬಣ್ಣದ ಚಿತ್ತಾರಗಳು ನೋಡುಗರ ಮನಸೂರೆಗೊಂಡವು. ಶಿಕ್ಷಕಿ ಲಾವಣ್ಯ ಹೆಚ್ ಎಸ್ ವಿವಿಧ ಜಾತಿಯ ಒಣ ಎಲೆ ಹಾಗೂ ಹೂಗಳಿಂದ ತಯಾರಿಸಿದ ಶುಭಾಶಯ ಪತ್ರ ಅಮೋಘವಾಗಿತ್ತು.