ಭೂಮಿ ಬರೀ ಮಣ್ಣಿನ ಮುದ್ದೆಯಲ್ಲ, ನಮ್ಮನ್ನು ರಕ್ಷಿಸುವ ದೇವತೆ: ಸ್ವರ್ಣವಲ್ಲೀ ಶ್ರೀಗಳು

KannadaprabhaNewsNetwork |  
Published : Oct 29, 2026, 02:30 AM IST
ಫೋಟೋ ಅ.೨೭ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಪ್ರಾತಃಕಾಲದಲ್ಲಿ ಎದ್ದ ನಾವು ಭೂಮಿತಾಯಿಗೆ ನಮಸ್ಕರಿಸಿಯೇ ನಮ್ಮ ಮುಂದಿನ ದಿನಚರಿಗೆ ತೊಡಗುತ್ತೇವೆ. ಅದನ್ನು ಅರ್ಥೈಸಿಕೊಳ್ಳಬೇಕು.

ಯಲ್ಲಾಪುರ: ಭೂತಾಯಿಯ ಅನುಗ್ರಹ ನಾವು ಪಡೆಯಲೇಬೇಕು. ಅನೇಕ ರೀತಿಯಿಂದ ಭೂತಾಯಿಯ ಮೇಲೆ ಸದಾ ಅನಾಚಾರವೆಸಗುತ್ತೇವೆ. ಅದು ಮಣ್ಣಿನ ಮುದ್ದೆಯಲ್ಲ, ನಮ್ಮನ್ನು ರಕ್ಷಿಸುವ ದೇವತೆ. ಹಾಗಾಗಿಯೇ ಪರಂಪರೆಯಲ್ಲಿ ಭೂತಾಯಿಯ ಆರಾಧನೆ ಇದೆ. ಆ ನೆಲೆಯಲ್ಲಿ ಈ ಸಂಸ್ಥೆ ಸದಸ್ಯರನ್ನು ಪೊರೆಯುವ ಭೂತಾಯಿ ಇದ್ದಂತೆ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.

ಸೋಮವಾರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಮತ್ತು ಸೂಪರ್ ಮಾರ್ಟ್ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪ್ರಾತಃಕಾಲದಲ್ಲಿ ಎದ್ದ ನಾವು ಭೂಮಿತಾಯಿಗೆ ನಮಸ್ಕರಿಸಿಯೇ ನಮ್ಮ ಮುಂದಿನ ದಿನಚರಿಗೆ ತೊಡಗುತ್ತೇವೆ. ಅದನ್ನು ಅರ್ಥೈಸಿಕೊಳ್ಳಬೇಕು. ಇಂದು ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದ ಅದು ಭೂಮಿಯಲ್ಲಿ ಸೇರಿ, ಸಾವಿರ ವರ್ಷವಾದರೂ ಮಣ್ಣಾಗದೇ, ಹಾಗೆಯೇ ಉಳಿಯುತ್ತದೆ. ಅದನ್ನು ಎಸೆಯದಂತೆ ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಭಾರತ ದೇಶ ಹಳ್ಳಿಗಳ ನಾಡು. ಹಳ್ಳಿಗಳಿಲ್ಲದಿದ್ದರೆ ಈ ದೇಶದಲ್ಲಿ ಯಾರಿಗೂ ಬದುಕು ಸಿಗಲಾರದು. ಐಟಿ ಬಿಟಿ ಕಂಪನಿಯ ಮಾಲೀಕರೊಬ್ಬರು ನಾವು ಸಾವಿರಾರು ಕೋಟಿ ತೆರಿಗೆ ನೀಡುತ್ತೇವೆ. ಭಾರತದ ಖಜಾನೆಗೆ ಹಳ್ಳಿಯಿಂದ ಹಣ ಬರುವುದಿಲ್ಲ ಎಂದಾಗ ಅವರಿಗೆ ನಾನು ಸವಾಲು ಹಾಕಿದ್ದೆ. ನಿಮ್ಮ ಯಾವುದೇ ತಂತ್ರಜ್ಞಾನ, ವಿಜ್ಞಾನದಿಂದ ಒಂದು ಕೆಜಿ ಅಕ್ಕಿ ಬೆಳೆಯಿರಿ. ರೈತನ ಅಕ್ಕಿ ಇಲ್ಲದಿದ್ದರೆ ಭಾರತದ ಜನ ಜೀವಿಸಲು ಸಾಧ್ಯವೇ? ಎಂದಾಗ ಮೌನಿಯಾದರು ಎಂದರು.

ಸಂಘದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಣ್ಣ ವ್ಯವಹಾರಗಳೊಂದಿಗೆ ಪ್ರಾರಂಭಿಸಿದ ನಮ್ಮ ಸಂಸ್ಥೆ ಇಂದು ದೇವರ, ಗುರುಗಳ ಅನುಗ್ರಹ, ಆಶೀರ್ವಾದ ಮತ್ತು ಸದಸ್ಯರ ಸಹಕಾರದೊಂದಿಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂದರು.

ಕಟ್ಟಡ ವಿನ್ಯಾಸಗೊಳಿಸಿ, ನಿರ್ಮಿಸಿಕೊಟ್ಟ ಟಿ.ಎಸ್. ಭಟ್ಟ, ವಸಂತ ಭಟ್ಟ, ಶ್ಯಾಮಸುಂದರ ಭಟ್ಟ ಅವರನ್ನು ಗೌರವಿಸಲಾಯಿತು. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಆನಗೋಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ ಶೇಟ್, ಮುಖ್ಯಕಾರ್ಯನಿರ್ವಾಹಕ ನಾಗರಾಜ ಭಟ್ಟ ಉಪಸ್ಥಿತರಿದ್ದರು.

ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಗಣಪತಿ ಮಾನಿಗದ್ದೆ ಸ್ವಾಗತಿಸಿದರು. ಮಹೇಶ ಭಟ್ಟ ಹಸರಪಾಲ ನಿರ್ವಹಿಸಿದರು. ನಿರ್ದೇಶಕ ದತ್ತಾತ್ರೇಯ ಬೋಳಗುಡ್ಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್