ಮೈಸೂರು ನಗರವನ್ನು ಈಗಿನಂತೆ ಉಳಿಸಿಕೊಳ್ಳಬೇಕಿದೆ

KannadaprabhaNewsNetwork |  
Published : Oct 27, 2025, 12:00 AM IST
6 | Kannada Prabha

ಸಾರಾಂಶ

ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡ, ವಸ್ತುಗಳು ನಶಿಸುತ್ತಿವೆ. ಮೈಸೂರು ಪರಂಪರೆಯ ನಗರ ಮಾತ್ರವಲ್ಲ, ಐತಿಹಾಸಿಕ ನಗರವೂ ಹೌದು

ಕನ್ನಡಪ್ರಭ ವಾರ್ತೆ ಮೈಸೂರುಪರಂಪರೆ, ಐತಿಹಾಸಿಕ ಮೈಸೂರು ನಗರವನ್ನು ಈಗಿನಂತೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ ತಿಳಿಸಿದರು.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ವಿಜಯಲಕ್ಷ್ಮಿ ಪ್ರಕಾಶನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿ. ಈಚನೂರು ಕುಮಾರ್ ಅವರ ಭವ್ಯ ಚಿತ್ರಪಟ ಮೈಸೂರು ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡ, ವಸ್ತುಗಳು ನಶಿಸುತ್ತಿವೆ. ಮೈಸೂರು ಪರಂಪರೆಯ ನಗರ ಮಾತ್ರವಲ್ಲ, ಐತಿಹಾಸಿಕ ನಗರವೂ ಹೌದು. ಹೀಗಾಗಿ, ಮೈಸೂರನ್ನು ಈಗಿನಂತೆ ಉಳಿಸಿಕೊಳ್ಳಬೇಕಿದೆ. ಮೈಸೂರಿನ ಬಗ್ಗೆ ಈಚನೂರು ಕುಮಾರ್ ಅವರಿಗೆ ವಿಶೇಷ ಪ್ರೀತಿ ಇತ್ತು. ಹೀಗಾಗಿಯೇ ಪತ್ರಾಗಾರ ಇಲಾಖೆಯನ್ನು ಸಮರ್ಥವಾಗಿ ಬಳಸಿಕೊಂಡು ಮೈಸೂರಿನ ಬಗ್ಗೆ ಹಲವಾರು ಉಪಯುಕ್ತ ಲೇಖನ ಬರೆದರು ಎಂದು ಅವರು ಹೇಳಿದರು.ಮೈಸೂರು ಹಾಗೂ ಪತ್ರಾಗಾರ ಇಲಾಖೆ ನಡುವೆ ಅವಿನಾಭಾವ ಸಂಬಂಧವಿದೆ. ಅರಮನೆಗೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು ಇಲ್ಲಿವೆ. ಈಚನೂರು ಕುಮಾರ್ ಅವರು ಇವನ್ನೆಲ್ಲ ಅತಿ ಆಸಕ್ತಿಯಿಂದ, ಯಾವೊಬ್ಬ ಇತಿಹಾಸ ಸಂಶೋಧನಾ ವಿದ್ಯಾರ್ಥಿಗೂ ಕಡಿಮೆಯಿಲ್ಲದಂತೆ ಅಧ್ಯಯನ ಮಾಡುತ್ತಿದ್ದರು. ಸರಳ ಜೀವಿಯೂ ಆಗಿದ್ದರು. ಅರಮನೆಗೆ ಸಂಬಂಧಿಸಿದ ಪ್ರತಿಯೊಂದೂ ಮಾಹಿತಿಯನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರೆ ಎಂದು ಅವರು ಸ್ಮರಿಸಿದರು.ಹಿರಿಯ ಪತ್ರಕರ್ತ ಜಿ. ಸತ್ಯನಾರಾಯಣ (ಗೌರಿ ಸತ್ಯ) ಮಾತನಾಡಿ, ಮೈಸೂರಿನ ಇತಿಹಾಸ ಬಗ್ಗೆ ಸಾಕಷ್ಟು ತಿಳಿದು ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಈಚನೂರು ಕುಮಾರ್ ಅವರು, ಪತ್ರಕರ್ತರಾಗಿದ್ದರೂ ಪತ್ರಿಕೋದ್ಯಮಕ್ಕಿಂತ ಹೆಚ್ಚಿನ ಆಸಕ್ತಿ ಮೈಸೂರಿನ ಇತಿಹಾಸ, ಇಲ್ಲಿನ ಕಟ್ಟಡ, ರಾಜಮನೆತನದ ಬಗ್ಗೆ ಹೊಂದಿದ್ದರು. ಇವರ ಬಗೆಗಿನ ಈ ಪುಸ್ತಕ ಸಹಾ ಮೈಸೂರು ಇತಿಹಾಸದ ಬಗೆಗಿನ ದೊಡ್ಡ ಕೊಡುಗೆ ಆಗಿದೆ ಎಂದರು.ಮೈಸೂರು ಸುತ್ತಮುತ್ತಲೂ ಇತಿಹಾಸ ಹೊಂದಿರುವ ಅನೇಕ ಜಾಗಗಳಿವೆ. ಅವುಗಳ ಬಗೆಗೂ ಹೆಚ್ಚಿನ ಗಮನ ಅಗತ್ಯವಾಗಿದೆ. ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುವುದಲ್ಲ, ಮೊದಲಿಗೆ ನಮ್ಮ ಬೇರು ಇರುವ ಮೈಸೂರಿನ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿನ ಇತಿಹಾಸ ತೆಗೆದು, ಅಧ್ಯಯನ ಮಾಡಿ ಹೊರ ತೆಗೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಚನೂರು ಕುಮಾರ್ ಹೆಚ್ಚಿನ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಈಚನೂರು ಕುಮಾರ್ ಅವರ ಮಕ್ಕಳಾದ ಅಕ್ಷರಾ, ಅಜಿತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ