ಬೆಳಗಾವಿ : ಇ.ಡಿ. (ಜಾರಿ ನಿರ್ದೇಶನಾಲಯ) ಒಂದು ತನಿಖಾ ಸಂಸ್ಥೆಯಾಗಿದ್ದು, ಅದರ ಕಾರ್ಯವೈಖರಿಗೆ ಸವಾಲು ಹಾಕುವ ಪ್ರಶ್ನೆಯೇ ಇಲ್ಲ. ಆದರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೆಲವು ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಈ ಕುರಿತು ಸ್ಪಷ್ಟನೆ ನೀಡಿದ ಸಚಿವರು, ಇ.ಡಿ. ದಾಳಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಆದರೆ ತನಿಖಾ ಸಂಸ್ಥೆಯ ಕಾರ್ಯವೈಖರಿ ಪ್ರಶ್ನಿಸುವ ಉದ್ದೇಶ ನಮಗಿಲ್ಲ. ಇ.ಡಿ. ತನ್ನ ತನಿಖೆ ನಡೆಸುತ್ತಿದೆ. ಈ ನಡುವೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕೆಲವು ಮಾಹಿತಿಗಳು ವಾಸ್ತವಾಂಶಕ್ಕೆ ದೂರವಾಗಿವೆ ಎಂದರು.
ರಾಜ್ಯದಲ್ಲಿರುವ ಅನೇಕ ಪತ್ರಿಕೆಗಳು ನಾವು ನೀಡುವ ಹೇಳಿಕೆಗಳನ್ನು ಯಥಾವತ್ತಾಗಿ ರಾಜ್ಯದ ಜನರಿಗೆ ತಿಳಿಸಿದರೆ ಒಳ್ಳೆಯದು. ಅದನ್ನು ಬಿಟ್ಟು ಸತ್ಯಕ್ಕೆ ದೂರವಾದ ವಿಷಯಗಳನ್ನು ಪ್ರಕಟಿಸಿದರೆ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಸಚಿವರು ಮನವಿ ಮಾಡಿದ್ದಾರೆ.ನಾವು ಪದೇ ಪದೆ ಹೇಳಿದ್ದೇವೆ. ಇ.ಡಿ. ನೋಟಿಸ್ ನೀಡಿದ ಬಳಿಕ ನಾವು ಕೂಡ ದಾಖಲೆಗಳನ್ನು ನೀಡಿ ಅವರಿಗೆ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದೇವೆ. ಆದರೂ ಕೆಲವು ಪತ್ರಿಕೆಗಳು ನಾವು ಇ.ಡಿಗೆ ಸವಾಲು ಹಾಕಿದ್ದೇವೆ ಎಂದು ಮುಖಪುಟದಲ್ಲಿ ಪ್ರಕಟಿಸಿವೆ.
ಸವಾಲು ಎಂಬ ಪದವನ್ನು ನಾವು ಎಲ್ಲಿಯೂ ಬಳಸಿಲ್ಲ, ಬೇಕಿದ್ದರೆ ನಾವು ಮಾತನಾಡಿರುವ ವಿಡಿಯೋ ಒಂದು ಸಲ ನೋಡಿ ಎಂದವರು ಸ್ಪಷ್ಟಪಡಿಸಿದರು.ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಪತ್ರಿಕೆಗಳು ಪ್ರಕಟಿಸುವುದರಿಂದ ದೊಡ್ಡ ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಯಾವುದೇ ಅನಗತ್ಯ ಗೊಂದಲಕ್ಕೆ ಆಸ್ಪದ ನೀಡದೆ, ನಾವು ಏನು ಹೇಳುತ್ತೇವೆಯೋ ಅದನ್ನು ನೈಜವಾಗಿ ಹಾಗೂ ವಾಸ್ತವಾಂಶದೊಂದಿಗೆ ಪ್ರಕಟಿಸಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.