ಚಿತ್ರದುರ್ಗ: ವೈಯುಕ್ತಿಕ ಸಮಸ್ಯೆಗಳ ಬದಿಗೆ ಸರಿಸಿ ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಹಂತೇಶ್ ಹೇಳಿದರು.
ನಗರದ ತರಾಸು ರಂಗಮಂದಿರಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಇಲಾಖೆಯ ಸಹಕಾರದೊಂದಿಗೆ ಸ್ಪಂದಿಸಲಾಗುವುದು. ಪ್ರತಿ ಶಾಲಾ ಶಿಕ್ಷಕರ ಬೌದ್ಧಿಕ ಮಟ್ಟ ಹೆಚ್ಚಳಕ್ಕೆ ಸಂಘವು ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಣ ವ್ಯಕ್ತಿಯೋರ್ವನ ಬದುಕಿನಲ್ಲಿ ಅತ್ಯಂತ ಮಹತ್ವದ್ದು. ಶಿಕ್ಷಕರಾದ ನಾವು ಹೇಳಿಕೊಟ್ಟ ಶಿಕ್ಷಣವೇ ಮುಖ್ಯವಾಗುತ್ತದೆ. ಮುಂದೆ ನಮ್ಮ ಮಕ್ಕಳು ಉನ್ನತ ಶಿಕ್ಷಣದಲ್ಲಿ ಉತ್ತಮ ಶ್ರೇಣಿಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಬದ್ಧತೆ. ಹಾಗಾಗಿ ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ನಾಗಭೂಷಣ್, ಮಾಜಿ ಜಿಲ್ಲಾಧ್ಯಕ್ಷ ಕೆ.ವೀರಣ್ಣ ಮತ್ತು ಆರ್.ಮಾರುತೇಶ್ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ಬಿ ಮಹಂತೇಶ್, ಉಪಾಧ್ಯಕ್ಷರಾಗಿ ರಮೇಶ್ ನಾಯ್ಕ, ಜಯಮ್ಮ, ಕೋಶಾಧ್ಯಕ್ಷರಾಗಿ ಎ.ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಂತರೆಡ್ಡಿ ಎಂ.ಬಿ.ವಾಸಂತಿ ಮತ್ತು ತಾಲೂಕು ಅಧ್ಯಕ್ಷರಾಗಿ ಎಸ್.ಕೆಂಚಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎನ್.ರೂಪ ಪದಗ್ರಹಣ ಮಾಡಿದರು. ಜಿಲ್ಲಾ ಸಂಘಕ್ಕೆ ಗೌರವಾಧ್ಯಕ್ಷರಾಗಿ ಕೆ.ವೀರಣ್ಣ, ಕಾರ್ಯಾಧ್ಯಕ್ಷರಾಗಿ ಆರ್.ಕೃಷ್ಣಪ್ಪ ಹಾಗೂ ತಾಲೂಕು ಸಂಘಕ್ಕೆ ಗೌರವಾಧ್ಯಕ್ಷರಾಗಿ ಎಸ್.ವೀರಣ್ಣ, ಕಾರ್ಯಾಧ್ಯಕ್ಷರಾಗಿ ಟಿ.ಎಸ್.ರವಿಶಂಕರ್ ಅವರನ್ನು ನಾಮನಿರ್ದೇಶನರಾಗಿ ಆಯ್ಕೆ ಮಾಡಲಾಯಿತು.ಬಿಆಸ್ಪಿ ಸಂಪತ್ ಕುಮಾರ್ ಈ, ಅಕ್ಷರ ದಾಸೋಹ ಎಡಿಎಂ ಹುಲಿಕುಂಟರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಹನುಮಂತಪ್ಪ, ಶಿವಮೂರ್ತಿ, ಜಿ.ಬಿ ಮಮತ ಮತ್ತು ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.