ಶಿವಮೊಗ್ಗ: ತಿಲಕ್ ನಗರದ ಡಿಸಿ ಕಚೇರಿ ಎದುರಿರುವ ಜಾಗ ಆಟದ ಮೈದಾನವೇ ಹೊರತು ಈದ್ಗಾ ಮೈದಾನವಲ್ಲ. ಅದು ಆಟದ ಮೈದಾನ ಎನ್ನುವುದಕ್ಕೆ ಹಲವು ದಾಖಲೆಗಳು ನಮ್ಮಲ್ಲಿವೆ, "ಆ ಬ್ರಹ್ಮ ಬಂದರೂ ಈ ಜಾಗವನ್ನು ಮುಸ್ಲಿಂರಿಗೆ ಬಿಟ್ಟುಕೊಡುವುದಿಲ್ಲ " ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಅಲ್ಲದೇ ಮತ್ತೊಂದು ದಾಖಲೆಯನ್ನು ಬಿಡುಗಡೆ ಮಾಡಿದ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಯ 2018ರಲ್ಲಿ ಆಯುಕ್ತರಾಗಿದ್ದವರು ಜಿಲ್ಲಾಧಿಕಾರಿಗಳಿಗೆಯೇ ಅಂದು ಪತ್ರ ಬರೆದಿರುತ್ತಾರೆ. ಜಿಲ್ಲಾ ವಕ್ಫ್ ಕಚೇರಿಯಿಂದ ಪಾಲಿಕೆಗೆ ಪತ್ರ ಬಂದಿದ್ದು, ಆ ಪತ್ರದ ಪ್ರಕಾರ ವಕ್ಫ್ ಸ್ವತ್ತು ಎಂದು ದಾಖಲಿಸಲು ಹೇಳಿರುತ್ತಾರೆ. ಆದರೆ ತನಿಖೆ ನಡೆಸಿದಾಗ ಅದು ವಕ್ಫ್ ಆಸ್ತಿಯಲ್ಲ ಎಂದು ಗೊತ್ತಾಗುತ್ತದೆ ಎಂದು ಆಯುಕ್ತರು ಅಂದೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ತಿಳಿಸಿದರು.ಸರ್ವೆ ನಕ್ಷೆ 2015ನ್ನು ಪರಿಶೀಲಿಸಲಾಗಿ, ತಿಲಕ್‍ನಗರ ಮಹಾವೀರ ವೃತ್ತದಲ್ಲಿರುವ ಸೈಯ್ಯದ್‍ಶಾ, ಆಲೀಂ ದಿವಾನ್, ದರ್ಗಾದ ಸ್ಕೆಚ್ ಎಂದು ಇದ್ದು, ಇದರಲ್ಲಿ ಈದ್ಗಾ ಮೈದಾನ 0.36 ಗುಂಟೆ ಎಂದು ಇರುತ್ತದೆ. ಆದರೆ ಈ ನಕ್ಷೆಯಲ್ಲಿ ಭೂ ಮಾಪಕರ ಸಹಿ ಇದ್ದು, ಸದರಿ ಇಲಾಖೆಯ ಮುಖ್ಯಸ್ಥರ ಸಹಿಯೇ ಇಲ್ಲ. ಅಲ್ಲದೇ ಈ ಜಾಗದ ರಸ್ತೆ ಮಾರ್ಜಿನ್‍ಗೆ ಹಾಗೂ ಇತರೆ ಕಾಮಗಾರಿಗಳಿಗಾಗಿ ಸರಿಯಾದ ಮಾಹಿತಿಯೇ ಇರುವುದಿಲ್ಲ ಎಂದರು.ಗೆಜೆಟ್ ನೋಟಿಫೀಕೇಷನ್‍ನಲ್ಲಿ 7, 8, 12 ಮತ್ತು 16ರಲ್ಲಿ ಈದ್ಗಾ ಸುನ್ನಿ ಶಿವಮೊಗ್ಗ ನಗರ ಎಂದು ಇದ್ದು, 1.20 ಗುಂಟೆ ಅಳತೆ ಇರುತ್ತದೆ. ಆದರೆ ಸ್ಥಳದ ವಿಳಾಸದ ವಿವರ ಗೆಜೆಟ್ ನೋಟಿಫೀಕೆಷನ್‍ನಲ್ಲಿ ಇರುವುದಿಲ್ಲ. ಕೇವಲ ರಾಜಸ್ವ ನಿರೀಕ್ಷಕರ ಸ್ಥಳ ತನಿಖೆ ವರದಿ ಮೇರೆಗೆ ಹಾಗೂ ಗೆಜೆಟ್ ನೋಟಿಫೀಕೇಷನ್ ಆಧಾರದ ಮೇರೆಗೆ ಮನವಿದಾರರ ಕೋರಿಕೆಯಂತೆ ಈ ಜಾಗವನ್ನು ಅಳತೆ ದಾಖಲಿಸಲು ಸೂಕ್ತವಾಗಿರುವುದಿಲ್ಲ ಎಂದು ಆಯುಕ್ತರೇ ಹೇಳಿದ್ದಲ್ಲದೇ ವಕ್ಫ್ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಅಪ್ಪ, ಅಮ್ಮನೇ ಇಲ್ಲದ ಗೆಜೆಟ್ ನೋಟಿಫಿಕೇಷನ್, ಮಹಾನಗರ ಪಾಲಿಕೆ ಆಯುಕ್ತರು ಬರೆದಿರುವ ಪತ್ರ, ಸೂಡಾದ ನಕ್ಷೆ ಮುಂತಾದವುಗಳನ್ನು ನೋಡಿದರೆ ಇದು ಆಟದ ಮೈದಾನವೇ ಹೊರತು ವಕ್ಫ್ ಆಸ್ತಿ ಅಲ್ಲ ಎಂದು ಸ್ಪಷ್ಟವಾಗುತ್ತದೆ. ಜಿಲ್ಲಾಧಿಕಾರಿ, ಜಿಲ್ಲಾರಕ್ಷಣಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು, ಈ ಸೂಕ್ಷ್ಮ ವಿಚಾರದ ಬಗ್ಗೆ ಸತ್ಯ ದಾಖಲೆಗಳನ್ನು ಪರಿಶೀಲಿಸಬೇಕು. ಮತ್ತು ಮೂಲದಾಖಲೆಗಳನ್ನು ಪರಿಶೀಲಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.ಈ ವಿಷಯ ಈಗಿದ್ದು, ಕೂಡ ಕೆಲವು ಮುಸ್ಲಿಂ ಕಿಡಿಗೇಡಿಗಳು ಈ ಜಾಗ ತಮ್ಮದೇ ಎಂದು ಬೇಲಿ ಹಾಕಿರುವುದು ಸರಿಯಲ್ಲ. ಅದರಲ್ಲೂ ರೈಲ್ವೆ ಹಳಿಗಳನ್ನು ಬಳಸಿದ್ದಾರೆ. ಈ ಹಳಿಗಳನ್ನು ಬಳಸುವಂತಿಲ್ಲ. ಯಾರು ರೈಲ್ವೆ ಹಳಿ ಬಳಸಿದ್ದಾರೋ ಅಂತವರನ್ನು ಹುಡುಕಿ ಕೇಸ್ ಹಾಕಬೇಕು. ಇದುವರೆಗೂ ಹೇಗೇಗೋ ಏನೇನೋ ಮಾಡಿ ಈ ಜಾಗವನ್ನು ತಮ್ಮದೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇದೆಲ್ಲ ಸಾಧ್ಯವಿಲ್ಲ ಎಂದು ಹೇಳಿದರು.
ಈ ಎಲ್ಲಾ ಘಟನೆಗಳನ್ನು ಇಟ್ಟುಕೊಂಡು ರಾಷ್ಟ್ರಭಕ್ತ ಬಳಗವು ಏ.5ರಂದು ಡಿ.ಸಿ. ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ. ಎಲ್ಲಾ ಜಾಗೃತ ಹಿಂದೂಗಳು ಈ ಪ್ರತಿಭಟನೆಗೆ ಆಗಮಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಈ.ವಿಶ್ವಾಸ್, ವಕೀಲ ವಾಗೀಶ್, ಶ್ರೀಕಾಂತ್, ಮಹಾಲಿಂಗಶಾಸ್ತ್ರಿ, ಮೋಹನ್ ಜಾಧವ್, ರಾಜು, ಕಾಚಿನಕಟ್ಟೆ ಸತ್ಯನಾರಾಯಣ, ರವಿ, ಬಾಲು ಮುಂತಾದವರು ಇದ್ದರು.