ನಿಲ್ಲದ ಕಬ್ಬಿನ ದರ ಸಮರ!

KannadaprabhaNewsNetwork |  
Published : Nov 07, 2025, 03:15 AM IST
ಕಬ್ಬಿಗೆ ದರ ನಿಗದಿಗೊಳಿಸುವಂತೆ ಆಗ್ರಹಿಸಿ ಮುಂದುವರೆದ ರೈತರ ಹೋರಾಟ | Kannada Prabha

ಸಾರಾಂಶ

ಪ್ರತಿ ಟನ್‌ ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ನಗರದ ಗಗನಮಹಲ್‌ ಬಳಿ ಸೋಮವಾರದಿಂದ ನಡೆಯುತ್ತಿರುವ ರೈತರ ಅಹೋರಾತ್ರಿ ಹೋರಾಟ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿ ಟನ್‌ ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ನಗರದ ಗಗನಮಹಲ್‌ ಬಳಿ ಸೋಮವಾರದಿಂದ ನಡೆಯುತ್ತಿರುವ ರೈತರ ಅಹೋರಾತ್ರಿ ಹೋರಾಟ ಮುಂದುವರಿದಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ. ಕಬ್ಬಿನ ದರಕ್ಕಾಗಿ ನಡೆಯುತ್ತಿರುವ ಧರಣಿಯನ್ನು ಬೆಂಬಲಿಸಿದ ಸ್ವಾಮೀಜಿಗಳು ಹಾಗೂ ಮಠಾಧೀಶರು ಸಹ ಧರಣಿಯಲ್ಲಿ ಪಾಲ್ಗೊಂಡಿದ್ದು, ಹುಲಜಂತಿ ಮಾಳಿಂಗರಾಯ ಸ್ವಾಮೀಜಿ, ಬಂಥನಾಳ ಸಂಗನಬಸವ ಸ್ವಾಮೀಜಿಗಳು ಕೂಡ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ರೈತ ಮುಖಂಡರು, ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಯಾಗಬೇಕು ಅನ್ನೋದು ನಮ್ಮ ಬೇಡಿಕೆ. ₹3500 ದರ ನಿಗದಿಯಾಗದೆ ಹೋದರೆ ಹೆದ್ದಾರಿಗಳನ್ನು ಬಂದ್ ಮಾಡಬೇಕಾಗುತ್ತದೆ. ಜೊತೆಗೆ ವಿಜಯಪುರದ ಟೋಲ್ ನಾಕಾಗಳನ್ನು ಸಹ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶುಕ್ರವಾರದಿಂದ ಉಗ್ರವಾದ ಹೋರಾಟ ಪ್ರಾರಂಭವಾಗುತ್ತದೆ. ಹೆದ್ದಾರಿ ಜೊತೆಗೆ ಜನಪ್ರತಿನಿಧಿಗಳ ಮನೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಮುಂದಾಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಹೋರಾಟಗಾರರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ಹುಲಜಂತಿ ಮಾಳಿಂಗರಾಯ ಸ್ವಾಮೀಜಿ ಮಾತನಾಡಿ, ಗುರ್ಲಾಪುರದಲ್ಲಿ ನಡೆದ ಹೋರಾಟದಲ್ಲಿ ಸಚಿವ ಎಚ್.ಕೆ.ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಆಗ ರೈತರು ಖುಷಿಯಾಗಿದ್ದರು. ಆದರೆ ಬೇಡಿಕೆ ಲಿಸ್ಟ್ ಪಡೆದು ಬೆಂಗಳೂರಿಗೆ ಬರೋಕೆ ಹೇಳಿದ್ದು, ರೈತರ ಆಕ್ರೋಶಕ್ಕೆ ಕಾರಣವಾಯಿತು. ರೈತರು ಬೀದಿಯಲ್ಲಿ ಕೂತಿದ್ರೆ, ಇವರು ಬೆಂಗಳೂರಿಗೆ ಕರೆದಿದ್ದಾರೆ. ಆಗಾಗ್ಗೆ ಬೆಂಗಳೂರಿಗೆ ಕರೆಸಿ ರೈತರಿಗೆ ಮೋಸ ಮಾಡಲಾಗಿದೆ. ಭಾರತದ ಬೆನ್ನೆಲುಬು ರೈತ ಎನ್ನುತ್ತಾರೆ, ಆದರೆ ರಾಜಕಾರಣಿಗಳು ರೈತನ ಬೆನ್ನನ್ನೇ ಮುರಿಯುತ್ತಿದ್ದಾರೆ. ರೈತರು ನಮ್ಮ ಬೆಳೆ ನಮಗಷ್ಟೆ ಎಂದಿದ್ದರೇ ಏನಾಗ್ತಿತ್ತು? ನಮ್ಮೆಲ್ಲರ ಬಾಯಿಗೆ ಮಣ್ಣು ಬೀಳ್ತಿತ್ತು ಎಂದು ಆಕ್ರೋಶ ಹೊರಹಾಕಿದರು. ಕಾರ್ಖಾನೆ ಮಾಲೀಕರು ಡಿಸಿ ಕಡೆಯಿಂದ ₹3200 ಕೊಡ್ತೀವಿ ಎಂದು ಹೇಳಿ ಕಳಿಸಿದರು. ಆದರೆ ರೈತರು ಒಪ್ಪದೇ ಗಟ್ಟಿ ಹೋರಾಟಕ್ಕೆ ನಿಂತಿದ್ದಾರೆ. ರೈತರು ಹೋರಾಟದಿಂದ ಹಿಂದೆ ಸರಿಯಬಾರದು ಎಂದು ಶ್ರೀಗಳು ಕರೆ ನೀಡಿದರು.

ಹುಲಜಂತಿಯಲ್ಲಿ ರೈತನ ಬಾಳೆ ಬಂಗಾರಾದಿತು ಎಂದು ಕಾರ್ಣಿಕ ಆಗಿದೆ. ಈ ಕಾರ್ಣಿಕ ಸತ್ಯವಾಗಲಿದೆ ಎಂದು ಹುಲಜಂತಿ ಶ್ರೀಗಳು ಹೇಳಿದರು. ರೈತರು ₹3500 ಎಂದು ಹೇಳಿ ಇನ್ನು ಸ್ವಲ್ಪ ಇಳಿಯುತ್ತೇವೆ ಎಂದಿದ್ದಾರೆ. ಆದರೆ ಸರ್ಕಾರ ಬೇಡಿಕೆ ಈಡೇರಿಸಲಿ. ರೈತನ ಶಕ್ತಿ ಗಟ್ಟಿಯಾಗಿದೆ. ರೈತನಿಗೆ ಅನ್ಯಾಯವಾಗಬಾರದು, ಸಂಕಟ ಬಂದರೇ ಮಹಾತ್ಮರೆಲ್ಲ ಬೀದಿಗೆ ಇಳಿಯುತ್ತೇವೆ ಎಂದು ಶ್ರೀಶೈಲ ಜಗದ್ಗುರುಗಳು ಎಚ್ಚರಿಕೆ ನೀಡಿದ್ದಾರೆ. ಎಲ್ಲ ಮಠಾಧೀಶರು ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ. ಸರ್ಕಾರ ಇನ್ನೂ ತಿಳಿದುಕೊಳ್ಳಬೇಕು. ಸಕ್ಕರೆ ಸಚಿವರು, ಸಿಎಂ, ರೈತರ ಅನ್ಯಾಯವನ್ನು ಅರಿತು ನ್ಯಾಯ ಕೊಡಬೇಕು. ಇಲ್ಲದೆ ಹೋದರೆ ರೈತರೂ ಬಿಡಲ್ಲ, ನಾವು ಸ್ವಾಮೀಜಿಗಳು, ಮಠಾಧೀಶರು ರೈತರ ಬೆನ್ನಿಗೆ ನಿಲ್ಲುತ್ತೇವೆ ಎಂದು ಮಾಳಿಂಗರಾಯ ಗುರುಗಳು ಹೇಳಿದರು.

ಧರಣಿ ಸತ್ಯಾಗ್ರಹದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಭಾಗವಹಿಸಿ ಮಾತನಾಡಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯಾವ್ಯಾವ ಮಳೆ ಇವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಲಿ ನೋಡೋಣ. ಕ್ಯಾಬಿನೆಟ್ ಇದೆ, ಸಿಎಂ, ಡಿಸಿಎಂ, ಸಚಿವರಿದ್ದಾರೆ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಬಂದು ಹೋಗಿದ್ದಾರೆ. ಸಕ್ಕರೆ ಮಂತ್ರಿಗೆ ಏನು ದಾಡಿಯಾಗಿದೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬರಲು ಎಂದು ಹೇಳಿದರು.ಈ ಹಿಂದೆ ₹5 ಲಕ್ಷ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ ಎಂದು ಆರೋಪಿಸಿದ ಅವರು, ₹10 ಕೋಟಿ ಕೊಡ್ತೀವಿ ಶಿವಾನಂದ ಪಾಟೀಲ ಆತ್ಮಹತ್ಯೆ (ನೇಣು) ಮಾಡಿಕೋ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ರೈತರು ಪ್ರತಿ ಟನ್‌ಗೆ ₹3500 ಕೇಳುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರತಿ ಟನ್‌ಗೆ ₹1 ಸಾವಿರ ತೆರಿಗೆ ಹೋಗುತ್ತೆ. ಈಗ ಜಿಲ್ಲಾಧಿಕಾರಿಗಳು ₹3200 ಕೊಡ್ತೀವಿ ಅಂತಿದ್ದಾರೆ. ಇನ್ನು ಮುನ್ನೂರು ಸರ್ಕಾರ ಕೊಡಲಿ. ಕ್ಯಾಬಿನೆಟ್‌ನಲ್ಲಿ ಸರ್ಕಾರ ದರ ಘೋಷಣೆ ಮಾಡಲಿ. ಕಬ್ಬಿನಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ಟನ್‌ಗೆ ಒಂದು ಸಾವಿರ ಟ್ಯಾಕ್ಸ್ ಬರ್ತಿಲ್ಲ ಎಂದು ಹೇಳಲಿ, ನಾನೇ ಕ್ಷಮೆ ಕೇಳ್ತೀನಿ ಎಂದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ