ಕನ್ನಡಪ್ರಭ ವಾರ್ತೆ ಮೈಸೂರುಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಉರುಳಿ ಬಿದ್ದು ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತರಳಬಾಳು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಭರಿಸಲಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಹೊನ್ನಾವರ ಬಳಿ ಅಪಘಾತಕ್ಕೀಡಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಕೆಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ತರಳಬಾಳು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರೊಂದಿಗೆ ಶಾಸಕರಾದ ಟಿ.ಎಸ್. ಶ್ರೀವತ್ಸ ಮತ್ತು ಕೆ. ಹರೀಶ್‌ಗೌಡ ಅವರು ಸೋಮವಾರ ಸಭೆ ನಡೆಸಿದರು.ನಂತರ ಟಿ.ಎಸ್. ಶ್ರೀವತ್ಸ ಮಾತನಾಡಿ, ಪವನ್ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದು, ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ಪೋಷಕರಿಗೆ ಶಾಲಾ ಆಡಳಿತ ಮಂಡಳಿ 30 ಲಕ್ಷ ಪರಿಹಾರ ನೀಡಲಿದೆ. ಜೊತೆಗೆ ಜನವರಿಯಲ್ಲಿ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ಅಥವಾ ನಿವೇಶನ ನೀಡಲಾಗುವುದು. ನಾವು ಏನೇ ಕೊಟ್ಟರೂ ಆ ತಂದೆ- ತಾಯಿಗೆ ಮಗನ್ನು ಕೊಡಲು ಸಾದ್ಯವಿಲ್ಲ ಎಂದು ಸಂತಾಪ ಸೂಚಿಸಿದರು. ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಈ ಘಟನೆಗೆ ಚಾಲಕನ ಅಜಾಗರೂಕತೆ ಕಾರಣವಾಗಿದೆ. ಶಾಲಾ ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೇವೆ. ಮಂಡಳಿ ಉತ್ತಮ ಸ್ಪಂದನೆ ನೀಡಿದ್ದಾರೆ. ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಶಾಸಕ ಶ್ರೀವತ್ಸ ಮಾನವೀಯತೆಯಿಂದ ಆಶ್ರಯ ಯೋಜನೆಯಡಿ ಮನೆ ನೀಡುವ ಭರವಸೆ ನೀಡಿದ್ದಾರೆ ಎಂದರು. ಹೊನ್ನಾವರದ ಬಳಿ ಅಪಘಾತವಾಗಿದೆ ಅಲ್ಲಿನ ಶಾಸಕ ಹಾಗೂ ಸಚಿವರಾದ ಮಂಕಾಳ್ ವೈದ್ಯ ಅವರ ಜೊತೆ ದೂರವಾಣಿ ಮೂಲಕ ಕೂಡ ಮಾತನಾಡಿದ್ದೇನೆ. ಪ್ರವಾಸ ತೆರಳಿದ್ದ ಮಕ್ಕಳನ್ನು ವಾಪಸ್ ಕರೆಸುವ ವಿಚಾರವನ್ನು ನಾನು ಸಿಎಂ ಗಮನಕ್ಕೂ ತಂದಿದ್ದೆ. ಅಲ್ಲಿ ಏನೆಲ್ಲಾ ವ್ಯವಸ್ಥೆ ಮಾಡಬೇಕೊ ಎಲ್ಲವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ನಗರ ಪಾಲಿಕೆ ಮಾಜಿ ಸದಸ್ಯ ಜೆ. ಗೋಪಿ, ಶ್ರೀಕಂಠಸ್ವಾಮಿ ಮೊದಲಾದವರು ಇದ್ದರು.ಹುಟ್ಟಹಬ್ಬ ದಿನವೇ ವಿದ್ಯಾರ್ಥಿ ಸಾವುಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾಗಿ ಮೈಸೂರಿನ ತರಳಬಾಳು ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿ ಪವನ್ (15) ಮೃತಪಟ್ಟಿದ್ದಾರೆ. ಹುಟ್ಟುಹಬ್ಬದ ದಿನವೇ ಪವನ್ ದುರಂತ ಸಾವೀಗೀಡಾಗಿದ್ದಾರೆ.ತರಳಬಾಳು ಪ್ರೌಢಶಾಲೆಯ 10ನೇ ತರಗತಿಯ 43 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 48 ಮಂದಿ ಖಾಸಗಿ ಬಸ್ ನಲ್ಲಿ ಶೈಕ್ಷಣಿಕ ಪ್ರಯಾಣಕ್ಕೆ ತೆರಳಿದ್ದರು. ಕಾರವಾರ ಜಿಲ್ಲೆಯ ಹೊನ್ನಾವರ ಬಳಿ ಭಾನುವಾರ ಸಂಜೆ ಬಸ್ ಅಪಘಾತಕ್ಕೀಡಾಯಿತು.ಬಸ್ ಪಲ್ಟಿಯಾಗಿ ಗಾಯಗೊಂಡಿರುವ ತಮ್ಮ ಮಕ್ಕಳನ್ನು ನೋಡುವ ತವಕದಲ್ಲಿರುವ ಪೋಷಕರು, ಶಾಲೆಯ ಮುಂಭಾಗ ಕಣ್ಣೀರು ಹಾಕುತ್ತಿದ್ದರು.-----ಕೋಟ್...ವಿದ್ಯಾರ್ಥಿಗಳನ್ನು ನಿಯಮಾನುಸಾರ ಪ್ರವಾಸಕ್ಕೆ ಕರೆದೊಯ್ದಿಲ್ಲ. ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ಮುನ್ನಾ ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳಬೇಕು. ಕೆಎಸ್ಆರ್ ಟಿಸಿ ಬಸ್ ಗಳಲ್ಲೇ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯಬೇಕು ಎಂಬುದು ಸೇರಿದಂತೆ ಹಲವಾರು ನಿಯಮಗಳನ್ನು ಪಾಲಿಸಬೇಕು. ಆದರೆ ವಿದ್ಯಾರ್ಥಿ ಮೃತಪಟ್ಟ ಪ್ರಕರಣದಲ್ಲಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ನಿಯಮಗಳನ್ನು ಮೀರಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ದರೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.- ಉದಯಕುಮಾರ್, ಡಿಡಿಪಿಐ, ಮೈಸೂರು