ಕನ್ನಡಪ್ರಭ ವಾರ್ತೆ ಧಾರವಾಡ
ಧಾರವಾಡ ಮಲೆನಾಡು ಭಾಗದ ಮಣ್ಣು, ನೀರು, ಹವಾಗುಣ ಹಾಗೂ ಇತರ ಸಂಪನ್ಮೂಲಗಳ ಫಲವಾಗಿ ಮಾವು ಹೇಳಿ ಮಾಡಿಸಿದ ಬೆಳೆ. ಪಾರಂಪರಿಕವಾಗಿ ಮಾವನ್ನು ಧಾರವಾಡ, ಕಲಘಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಏಪ್ರಿಲ್ ತಿಂಗಳಿಗೆ ಶುರುವಾಗಿ ಜೂನ್ ತಿಂಗಳ ಆರಂಭಕ್ಕೆ ಮುಕ್ತಾಯವಾಗುವ ವಾಣಿಜ್ಯ ಬೆಳೆಯೂ ಈ ಮಾವು.
ದುಬಾರಿ ಮಾವುಕಳೆದ ಐದಾರು ವರ್ಷಗಳ ಹಿಂದೆ ಮಾವು ಬಂಗಾರದ ಬೆಳೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಈ ವರ್ಷವೂ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಹೀಗಾಗಿ ಮಾವಿನ ಕಾಯಿ ಹಾಗೂ ಹಣ್ಣಿನ ದರ ತುಸು ಹೆಚ್ಚಾಗಿಯೇ ಇದೆ. ಸದ್ಯ ಪ್ರತಿ ಟ್ರೇ ಆಪೂಸ್ (ಅಂದಾಜು 100 ಕಾಯಿಗಳು) ₹ 2000-2500 ವರೆಗೆ ಮಾರಾಟವಾಗುತ್ತಿದೆ. ಹಾಗೆಯೇ, ಹಣ್ಣು ಒಂದು ಡಜನ್ (12 ಹಣ್ಣುಗಳು) ₹500-600 ವರೆಗೆ ಮಾರಾಟವಾಗುತ್ತಿದೆ. ಮಾವಿನ ಸುಗ್ಗಿ ಬಂದಂತೆಲ್ಲ ದರ ಕಡಿಮೆ ಆಗುವ ಸಾಧ್ಯತೆಯೂ ಇದೆ. ಇಳುವರಿ ತೀರಾ ಕಡಿಮೆಯಾದರೆ ದರ ಇನ್ನೂ ಹೆಚ್ಚಾದರೂ ಅಚ್ಚರಿ ಏನಿಲ್ಲ.
ಪ್ರತಿ ಬಾರಿ ಧಾರವಾಡದಲ್ಲಿ ಬೆಳೆಗಾರರಿಂದ ತೋಟ ಅಥವಾ ಕಾಯಿ ಪಡೆದ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆಯೇ ಹೊರತು ಮಾವು ಬೆಳೆದ ರೈತನಿಗೆ ಅಷ್ಟೇನೂ ಲಾಭವಾಗುತ್ತಿಲ್ಲ. ವರ್ಷಪೂರ್ತಿ ಮಾವಿನ ಮರಗಳನ್ನು ಎಷ್ಟೇ ಜೋಪಾನ ಮಾಡಿದರೂ ಡಿಸೆಂಬರ್ ವೇಳೆ ಹೂ ಬಿಡುವಾಗ, ಜನವರಿ-ಫೆಬ್ರುವರಿ ತಿಂಗಳಲ್ಲಿ ಕಾಯಿ ಆಗುವಾಗ ಹಾಗೂ ಆದ ನಂತರದಲ್ಲಿ ವಾತಾವರಣ ವೈಪರೀತ್ಯದಿಂದ ಮಾವು ಬೆಳೆ ನಷ್ಟಕ್ಕೆ ಒಳಗಾಗಿ ಬೆಳೆಗಾರರು ಕೈ ಸುಟ್ಟುಕೊಂಡಿರುವ ಹಲವು ಉದಾಹರಣೆಗಳಿವೆ. ಈ ಬೆಳೆಗೆ ಸಾವಿರಾರು ರುಪಾಯಿ ಬೆಳೆಹಾನಿ ತುಂಬಿದಿದ್ದರೂ ಈ ವರ್ಷ ತುಂಬಿದಷ್ಟು ಪರಿಹಾರ ಬರದೇ ಇರುವುದು ಬೆಳೆಗಾರರ ದುರದೃಷ್ಟವೇ ಸರಿ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಾವು ಬೆಳೆಗಾರರು ಮಾವಿನ ಗಿಡಗಳನ್ನು ಕಟಾವು ಮಾಡಿ ಅದೇ ಜಾಗದಲ್ಲಿ ಗೋಡಂಬಿ, ಅಡಕೆ ಹಾಗೂ ಬಾಳೆ ಬೆಳೆಯುತ್ತಿರುವ ಉದಾಹರಣೆಗಳೂ ಇವೆ.
ಪೇಢೆ ತರಾ ಮಾವು ಪ್ರಸಿದ್ಧಿ ಪಡೆಯಲಿ
ಆಪೂಸ್ ಮಾವಿನ ಹಣ್ಣಿನ ಭರಾಟೆಯಲ್ಲಿ ಧಾರವಾಡ ಸುತ್ತಲು ಬೆಳೆಯುತ್ತಿದ್ದ ಜವಾರಿ ಮಾವು ಕಾಣೆಯಾಗಿದೆ. ಬಾಳಮಾವು, ಕಲಮಿ, ಸಣ್ಣೇರಿ, ಬೆಂಕಿ ಮಾವು, ಜೀರಗಿ ಮಾವು, ಪುಚ್ಚದ ಮಾವು, ವಿಭೂತಿ ಮಾವು, ಕಂಚಿ ಮಾವು, ಮಗಿ ಮಾವು, ಚೈತ್ರಾಪೈರಿ, ಸುಂದರಶಾ, ಮಾಂಕೂರ ಅಂತಹ ತರಹೇವಾರಿ ತಳಿಗಳಿದ್ದವು. ದುರಾದೃಷ್ಟವಶಾತ್ ಕಲಮಿ ಬಿಟ್ಟು ಉಳಿದ ತಳಿಗಳು ಧಾರವಾಡ ಭಾಗದಲ್ಲಿ ವಿರಳವಾಗಿವೆ. ಈ ಹಣ್ಣುಗಳು ಒಂದೊಂದು ಗುಣ ವಿಶೇಷತೆಗಳನ್ನು ಹೊಂದಿದ್ದು, ಬೇಸಿಗೆಯಲ್ಲಿ ದೇಹಕ್ಕೆ ಆಹ್ಲಾದ ನೀಡುವ ಹಣ್ಣುಗಳಾಗಿದ್ದವು.