8ನೇ ದಿನ ಮಂದಗತಿಯಲ್ಲಿ ಸಾಗಿದ ಬ್ಯಾಡಗಿ ಮುಖ್ಯರಸ್ತೆ ತೆರವು ಕಾರ್ಯಾಚರಣೆ

KannadaprabhaNewsNetwork |  
Published : May 17, 2026, 02:15 AM IST
ಬ್ಯಾಡಗಿಯಲ್ಲಿ ಎಂಟನೇ ದಿನದ ತೆರವು ಕಾರ್ಯಾಚರಣೆ ನಡೆಯಿತು. | Kannada Prabha

ಸಾರಾಂಶ

7 ದಿನಗಳಿಂದ ವೇಗವಾಗಿ ಸಾಗುತ್ತಿದ್ದ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಶನಿವಾರ ಮಂದಗತಿಯಲ್ಲಿ ಸಾಗಿತು. ಕೆಲವರು ಕಾಲವಕಾಶದ ನೆಪದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬ್ಯಾಡಗಿ: 7 ದಿನಗಳಿಂದ ವೇಗವಾಗಿ ಸಾಗುತ್ತಿದ್ದ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಶನಿವಾರ ಮಂದಗತಿಯಲ್ಲಿ ಸಾಗಿತು.

6 ದಿನಗಳ ಕಾರ್ಯಾಚರಣೆಯಿಂದ ಸೋಮವಾರದೊಳಗೆ ಮುಕ್ತಾಯವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಶನಿವಾರದ ಕಾರ್ಯಾಚರಣೆ ಸಾರ್ವಜನಿಕರಲ್ಲಿಯೂ ಹಲವು ಅನುಮಾನ ಮೂಡುವಂತೆ ಮಾಡಿದೆ.

12 ವರ್ಷಗಳಿಂದ ಕೋರ್ಟ್‌-ಕಚೇರಿ ಕಾರಣ ನೀಡಿ ವಿಳಂಬಕ್ಕೆ ಕಾರಣರಾದವರು ಇಂದಿಗೂ ತಮ್ಮ ಕಟ್ಟಡ ತೆರವುಗೊಳಿಸಿಲ್ಲ. ಅವರೇ ತೆರವಿಗೆ ಹೆಚ್ಚು ಕಾಲವಕಾಶ ಕೇಳಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡ ಅವರು ಅಧಿಕಾರಿಗಳ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಅವರಿಗಷ್ಟೇ ಏಕೆ ಕಾಲವಕಾಶ?: ಜಿಲ್ಲಾಡಳಿತ ಕಾರ್ಯಾಚರಣೆ ನಡೆಸುವ ವೇಳೆ ಕೆಲವರು ಕಾಲವಕಾಶ ಕೇಳಿದ್ದರು. ಆದರೆ ಅವರ ಮನವಿಗೆ ಒಪ್ಪದೇ ತೆರವು ಕಾರ್ಯ ಆರಂಭಿಸಲಾಯಿತು. ಆದರೆ ಕೋರ್ಟ್‌ ಮೆಟ್ಟಿಲೇರಿರುವ ಕೆಲವರು ಸಮಯಾವಕಾಶ ಕೇಳುತ್ತ, ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮಳೆಯಿಂದ ವಿಳಂಬ: ಇದರ ಜತೆಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆ ಕಾಮಗಾರಿಗೆ ತೊಂದರೆ ನೀಡಿತು. ಈಗಾಗಲೇ ಹಲವಾರು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಗುಡುಗು ಸಹಿತ ಜೋರಾದ ಮಳೆ ಬಂದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಅವಘಡ ಸಂಭವಿಸುವ ಭೀತಿ ಸಾರ್ವಜನಿಕರಲ್ಲಿ ಎದುರಾಗಿದೆ. ಮೇ 17, 18ರಂದು ಬಿರುಗಾಳಿ ಸಮೇತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಶನಿವಾರ ಸಂಜೆ ಸುರಿದ ಮಳೆಗೆ ಮುಖ್ಯರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಸರಿಯಾದ ಕ್ರಮವಲ್ಲ: ಮಳೆ ಆರಂಭವಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಚಾಲನೆ ನೀಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜಿಲ್ಲಾಡಳಿತ ಯಾವುದೇ ವಿಳಂಬ ಮಾಡದೇ ಕಾರ್ಯಾಚರಣೆ ಶೀಘ್ರ ಪೂರ್ಣಗೊಳಿಸಬೇಕು. ಕೆಲವರಿಗೆ ಕಾಲವಕಾಶ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಮುಖ್ಯರಸ್ತೆ ವರ್ತಕ ಸಂಜಯ ಜೈನ್ ಹೇಳಿದರು.

ಮಾನವೀಯತೆ ಆಧಾರದ ಮೇಲೆ ಕೆಲವರಿಗೆ ಶನಿವಾರದ ವರೆಗೆ ಅವಕಾಶ ನೀಡಿದ್ದೇವು. ಅವರೀಗ ನಮ್ಮ ಮೇಲೆ ಸವಾರಿ ಮಾಡಲು ಬಂದಿದ್ದಾರೆ. ನಾವು ಕೊಟ್ಟ ಸಮಯ ಮುಗಿದಿದೆ. ಭಾನುವಾರ ಬೆಳಗ್ಗೆ ಯಾವುದೇ ಕಾರಣಕ್ಕೂ ಮುಲಾಜಿಲ್ಲದೇ ನಾವೇ ಕಟ್ಟಡ ತೆರವು ಮಾಡಲಿದ್ದೇವೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ