ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮ ದೇಸಿ ಸೊಗಡಿನಿಂದ ಗಮನ ಸೆಳೆಯಿತು.ನಗರದ ಬಿ.ಎಚ್.ರಸ್ತೆಯ ಸರ್ಕಾರಿ ಪಿಯು ಕಾಲೇಜು (ಸೈನ್ಸ್ ಮೈದಾನ) ನಿಂದ ಕುವೆಂಪು ರಂಗಮಂದಿರದವರೆಗೆ ಅಲಂಕೃತ ಎತ್ತಿನಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಹಸಿರೇ ಮೇಳೈಸಿತ್ತು. ಸುತ್ತಮುತ್ತಲಿನ ರೈತರು ಭಾಗಿಯಾಗಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎತ್ತಿನಗಾಡಿಗಳಿಗೆ ಮಾವಿನ ತೋರಣ, ಬಣ್ಣ, ಬಣ್ಣದ ಕಾಗದ, ಬೆಳೆಕಂದು, ಬಾಳೆಗೊನೆ, ಅಡಿಕೆ, ಹೂವುಗಳಿಂದ ಶೃಂಗರಿಸ ಲಾಗಿತ್ತು. ಎತ್ತುಗಳ ಕೊಂಬುಗಳಿಗೆ ಬಣ್ಣವನ್ನು ಲೇಪಿಸುವುದರ ಜೊತೆಗೆ ಚಿತ್ರಗಳನ್ನು ಬಿಡಿಸಿದ್ದ ಎಲ್ಲರ ಗಮನ ಸೆಳೆಯಿತು.ರೈತ ನಾಯಕರಾದ ಎಚ್.ಆರ್.ಬಸವರಾಜಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ ಗೋಪಾಲ್, ಪಾಲಿಕೆ ಮಾಜಿ ಸದಸ್ಯ ಎಚ್.ಸಿ. ಯೋಗೀಶ್ ಸೇರಿ ರೈತ ಮುಖಂಡರು ಎತ್ತಿನ ಗಾಡಿಯಲ್ಲಿ ಬಂದಿದ್ದು ವಿಶೇಷವಾಗಿತ್ತು.
ರೈತ ದಸರಾ ಜಾಥಾಕ್ಕೆ ಚಾಲನೆ ನೀಡಿದ ಪ್ರಗತಿಪರ ರೈತ ಎಲ್.ಸಿ.ಜಯಪ್ರಕಾಶ್ ಮಾತನಾಡಿ, ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ಇಲ್ಲಿ ದಲ್ಲಾಳಿ ಗಳ ಮೇಲೆ ರೈತರು ಅವಲಂಬಿತರಾಗಬಾರದು. ಪ್ರಸ್ತುತ ಎತ್ತಿನ ಗಾಡಿಗಳು ಕಣ್ಮರೆಯಾಗುತ್ತಿವೆ. ಇದು ನೋವಿನ ಸಂಗತಿ. ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು. ಕೃಷಿಗೆ ವಿಷ ಪೂರಿತ ಸರ್ಕಾರಿ ಗೊಬ್ಬರ ಬಳಸಲಾಗುತ್ತಿದೆ. ಕೃಷಿ ಪದ್ಧತಿಯಲ್ಲಿ ಬದಲಾವಣೆ ಆಗಬೇಕು ಎಂದು ಅಭಿಪ್ರಾಯಪಟ್ಟರು.ರೈತ ದಸರಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ರೈತ ಟಿ.ಎನ್.ರಮೇಶ್ ಮಾತನಾಡಿ, ಪಟ್ಟಣದಲ್ಲಿ ವಾಸವಿರುವ ಯುವ ಜನರು ಕೃಷಿಯ ಬಗ್ಗೆ ಒಲವು ತೋರಬೇಕು. ಪ್ರೌಢಶಾಲೆಯ ಹಂತದಲ್ಲಿ ಕೃಷಿಯ ಬಗ್ಗೆ ಮಕ್ಕಳಿಗೆ ವಾರದಲ್ಲಿ ಒಂದು ದಿನ ತರಬೇತಿ ನೀಡುವ ಕಾರ್ಯಕ್ರಮವನ್ನು ಸರ್ಕಾರ ರೂಪಿಸ ಬೇಕು. ಇದರಿಂದ, ಯುವಪೀಳಿಗೆ ಕೃಷಿಯಿಂದ ದೂರ ಸರಿಯುತ್ತಿರುವ ಆತಂಕ ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟರು.
ರೈತ ದಸರಾದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸನ್ಮಾನಿಸಲಾಯಿತು.ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ. ಜಗದೀಶ್, ಕೃಷಿ ವಿಜ್ಞಾನ ಕೇಂದ್ರ (ಬೇಸಾಯ ಶಾಸ್ತ್ರ) ವಿಜ್ಞಾನಿ ಡಾ. ರುದ್ರಗೌಡ .ಎಫ್.ಚನ್ನಗೌಡ, ಮಹಾನಗರ ಪಾಲಿಕೆ ನೌಕರರ ಸಂಘ ಜಿಲ್ಲಾಧ್ಯಕ್ಷ ಎನ್.ಗೋವಿಂದ ಇದ್ದರು.
ಅಡಕೆ ಬೆಳೆ ವಿಸ್ತರಣೆ ತಂದ ಆತಂಕ:ರೈತರು ಸಾವಯವ ಕೃಷಿಯತ್ತ ಮುಖಮಾಡಬೇಕು. ಮಲೆನಾಡಿನ ಅಡಕೆ ಬೆಳೆ, ಇತರ ಜಿಲ್ಲೆಗಳಿಗೂ ವ್ಯಾಪಕವಾಗಿ ವಿಸ್ತರಣೆಗೊಳ್ಳುತ್ತಿದೆ. ಇದರಿಂದ ಬೆಲೆ ಕುಸಿತ ಕಾಣುವ ಆತಂಕ ರೈತರಲ್ಲಿ ವ್ಯಕ್ತವಾಗುತ್ತಿದೆ. ರೈತರು ಸ್ವಾಭಿಮಾನದಿಂದ ಒಕ್ಕಲುತನ ಮಾಡಬೇಕು. ಅಂಗಡಿಯಲ್ಲಿ ಖರೀದಿಸುವ ಸಾಮಾಗ್ರಿಗಳು ಕಲಬೆರಿಕೆಯಿಂದ ಕೂಡಿವೆ. ಆದ್ದರಿಂದ, ಆಹಾರ ಕ್ರಮ ಬದಸಿಕೊಳ್ಳಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ, ಕಡಿದಾಳ ಗೋಪಾಲ್ ಮಾತನಾಡಿ, ರೈತರೇ ದೇಶದ ಬೆನ್ನೆಲುಬು ಎನ್ನುವ ಮಾತಿದೆ. ಆದರೆ, ಇಲ್ಲಿ ರೈತರ ಬೆನ್ನೆಲುಬು ವೀಕ್ ಆಗುತ್ತಿದೆ. ಅಡಿಕೆ ಬೆಳೆ ಹೆಚ್ಚಿದಷ್ಟು, ರೈತರು ಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ, ಪರ್ಯಾಯ ಬೆಳೆಗೂ ರೈತರು ಒತ್ತು ನೀಡಬೇಕು ಎಂದರು.ರೈತರಿಗೆ ಪ್ರೋತ್ಸಾಹಿಸಿ: ಚನ್ನಬಸಪ್ಪ
ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇದು ದುರಂತದ ಸಂಗತಿ. ನಮ್ಮ ದೇಶ ಉಳಿದಿದೆ ಎಂದರೆ, ಅದಕ್ಕೆ ರೈತರು ಕಾರಣ. ಆದ್ದರಿಂದ, ರೈತರನ್ನು ಸೌಜನ್ಯದಿಂದ ಕಾಣಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ರೈತರ ಏಳಿಗೆ ಸಾಧ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.ಇಂದು ಗಮಕ ದಸರಾ: ಟಿ.ಆರ್.ಅನುಪಮ
ಶಿವಮೊಗ್ಗ: ಶಿವಮೊಗ್ಗ ದಸರಾದಲ್ಲಿ ಮೊದಲ ಬಾರಿಗೆ ಗಮಕ ದಸರಾವನ್ನು ಆಚರಿಸಲಾಗುತ್ತಿದ್ದು, ಕರ್ನಾಟಕ ಗಮಕ ಕಲಾ ಪರಿಷತ್ ಶಿವಮೊಗ್ಗ ಇದರ ಸಹಕಾರ ದೊಂದಿಗೆ ಅ.6ರಂದು ಬೆಳಗ್ಗೆ 10ರಿಂದ ಸಂಜೆ 7ರವರೆಗೆ ನಗರದ ಕಮಲಾ ನೆಹರೂ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗಮಕ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಮಕ ದಸರಾ ಸಮಿತಿಯ ಸಹಕಾರ್ಯದರ್ಶಿ ಟಿ.ಆರ್.ಅನುಪಮ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ಗಮಕ ದಸರಾವನ್ನು ಉದ್ಘಾಟಿಸಲಿದ್ದಾರೆ. ಪರಿಷತ್‌ನ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಟಿ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಅಧ್ಯಕ್ಷ ಎಚ್.ಆರ್. ಸುಬ್ರಹ್ಮಣ್ಯಶಾಸ್ತ್ರಿ ಉಪಸ್ಥಿತರಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿದ್ದಾರೆ ಎಂದರು.
ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಗಮಕಿ ಮೈಸೂರಿನ ಡಾ.ಎನ್.ಕೆ.ರಾಮಶೇಷನ್ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಗಮಕ ಕಲಾ ಪರಿಷತ್ ಶಿವಮೊಗ್ಗ ಶಾಖೆಯ ಉಪಾಧ್ಯಕ್ಷ ಡಾ.ಕೃಷ್ಣ ಎಸ್.ಭಟ್ ವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗಮಕ ಕಲಾ ಪರಿಷತ್‌ನ ಶಿವಮೊಗ್ಗ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಟಿ.ಆರ್.ಅಶ್ವಥ್ ನಾರಾಯಣಶೆಟ್ಟಿ, ಅಧ್ಯಕ್ಷ ಹೆಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ, ಕಾರ್ಯದರ್ಶಿ ಕುಮಾರ ಶಾಸ್ತ್ರಿ, ಶ್ರೀಲಕ್ಷ್ಮೀ ಶಾಸ್ತ್ರಿ, ನಾಗರಾಜ್ ಉಪಸ್ಥಿತರಿರುವರು.
ಶಿವಮೊಗ್ಗಕ್ಕೆ ಆಗಮಿಸಿದ ಗಜಪಡೆ: ತಾಲೀಮು ಶುರುದಸರಾ ಹಬ್ಬದ ಹಿನ್ನೆಲೆ ಶಿವಮೊಗ್ಗ ನಗರಕ್ಕೆ ಸಕ್ರೆಬೈಲು ಆನೆ ಬಿಡಾರದ ಗಜೆಪಡೆ ಶುಕ್ರವಾರ ರಾತ್ರಿ ಆಗಮಿಸಿದ್ದು. ಶನಿವಾರ ಬೆಳಗ್ಗೆಯಿಂದಲೇ ಆನೆಗಳಿಗೆ ತಾಲೀಮು ನಡೆಯಿತು.
ಈ ಬಾರಿಯೂ ಸಾಗರ್ ಆನೆ ಅಂಬಾರಿ ಹೊರಲಿದ್ದಾನೆ. ಸಾಗರ್‌ಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. ದಸರಾದ ಕೊನೆ ದಿನದಂದು ಅದ್ಧೂರಿ ಜಂಬೂಸವಾರಿ ನಡೆಯಲಿದೆ. ಶನಿವಾರ ಸಾಗರ, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ವಾಸವಿ ಶಾಲೆಯಿಂದ ಹೊರಟ ಆನೆಗಳು ತಾಲೀಮು ಆರಂಭಿಸಿ ಕೋಟೆ ರಸ್ತೆ, ಗಾಂಧಿ ಬಜಾರ್, ಬಿ.ಎಚ್.ರಸ್ತೆ, ಎ.ಎ.ಸರ್ಕಲ್, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರೋಡ್ ಮೂಲಕ ಫ್ರೀಡಂ ಪಾರ್ಕ್‌ವರೆಗೆ ತೆರಳಿ ಅಲ್ಲಿಂದ ಮತ್ತೆ ವಾಸವಿ ಶಾಲೆಯತ್ತ ಹಿಂತಿರುಗಿದವು.ಸಾಗರ್ ಆನೆ ಸುಮಾರು 650 ಕೆ.ಜಿ ಬೆಳ್ಳಿಯ ಅಂಬಾರಿ ಹೊರಲಿದ್ದಾನೆ. ರಾಜ್ಯದಲ್ಲೇ ಶಿವಮೊಗ್ಗ ದಸರಾ ಎರಡನೇ ಅತಿದೊಡ್ಡ ದಸರಾ ಎಂದು ಖ್ಯಾತಿ ಹೊಂದಿದೆ. ಈ ಬಾರಿ ಶಿವಮೊಗ್ಗ ಮಹಾನಗರಪಾಲಿಕೆ ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿದೆ.