ತಾರ್ಕಿಕ ಅಂತ್ಯ ಕಾಣದ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಪ್ರಕರಣ!

KannadaprabhaNewsNetwork |  
Published : May 28, 2025, 12:10 AM IST
ಬಳ್ಳಾರಿ ವಿವಿಯ ಲೋಗೋ  | Kannada Prabha

ಸಾರಾಂಶ

ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ನಕಲಿ ಪ್ರಮಾಣಪತ್ರ ಪ್ರಕರಣ ನಡೆದು ಮೂರು ತಿಂಗಳು ಕಳೆದರೂ ಈವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ನಾನಾ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ಪ್ರಕರಣ ನಡೆದು ಮೂರುವರೆ ತಿಂಗಳಾದರೂ ಆರೋಪಿಗಳ ವಿರುದ್ಧ ಕ್ರಮವಿಲ್ಲ ಯಾಕೆ?

ಕಳೆದ ಸಿಂಡಿಕೇಟ್ ಸಭೆಯಲ್ಲಿ ಆರೋಪಿಗಳ ವಿರುದ್ಧ ಶಿಸ್ತುಕ್ರಮದ ನಿರ್ಧಾರವಾಗಬೇಕಿತ್ತು

ತನಿಖಾ ಸಮಿತಿ ವರದಿ ನೀಡಿದರೂ ಮೀನಾಮೇಷ ಏಕೆ ಪ್ರಶ್ನೆಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ನಕಲಿ ಪ್ರಮಾಣಪತ್ರ ಪ್ರಕರಣ ನಡೆದು ಮೂರು ತಿಂಗಳು ಕಳೆದರೂ ಈವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ನಾನಾ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ವಿವಿಯ ಹೊರಗುತ್ತಿಗೆ ಸಿಬ್ಬಂದಿಯೊಬ್ಬ ಸುಮಾರು 3 ಸಾವಿರಕ್ಕೂ ಅಧಿಕ ನಕಲಿ ಪ್ರಮಾಣಪತ್ರಗಳನ್ನು ನೀಡಿ ಎರಡೂವರೆ ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡರೂ ವಿಶ್ವವಿದ್ಯಾಲಯ ಈ ಬಗ್ಗೆ ಈವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ? ತನಿಖಾ ಸಮಿತಿ ರಚಿಸಿ ವರದಿ ನೀಡಲು ಇಷ್ಟು ದಿನ ತಡವಾದದ್ದು ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕಾಡಲಾರಂಭಿಸಿವೆ.

ಏನಿದು ಪ್ರಕರಣ?:

ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರನೊಬ್ಬ ಘಟಿಕೋತ್ಸವದ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಸಾವಿರಾರು ಜನರಿಗೆ ವಿತರಣೆ ಮಾಡಿದ್ದ. ವಿವಿ ವಿದ್ಯಾರ್ಥಿಗಳಿಂದ ₹2900ಗಳಿಂದ ₹15 ಸಾವಿರ ವರೆಗೆ ಹಣ ಪಡೆದು ವಿಶ್ವವಿದ್ಯಾಲಯಕ್ಕೆ ವಂಚಿಸಿದ್ದ. ಗಮನಾರ್ಹ ಸಂಗತಿ ಎಂದರೆ ವಿವಿಯಲ್ಲಿಯೇ ನಡೆಯುವ ವಂಚನೆಯ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಹೀಗಾಗಿ ಹೊರಗುತ್ತಿಗೆ ನೌಕರರ ಘಟಿಕೋತ್ಸವದ ನಕಲಿ ಆಟ ಮುಂದುವರಿದಿತ್ತು. ಕಳೆದ ಫೆ.16ರಂದು ಘಟಿಕೋತ್ಸವ ಪ್ರಮಾಣಪತ್ರ ಪಡೆದಿದ್ದ ವಿದ್ಯಾರ್ಥಿನಿಯೊಬ್ಬರು ಶುಲ್ಕ ಪಾವತಿಸಿದ ರಸೀದಿ ಕೇಳಲು ವಿವಿಗೆ ಬಂದಿದ್ದಾಗ ವಂಚಕನ ನಕಲಿ ಆಟ ಹೊರಬಿದ್ದಿತ್ತು. ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಎಚ್ಚೆತ್ತ ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ನೇತೃತ್ವದಲ್ಲಿ ಫೆ.20ರಂದು ತನಿಖಾ ಸಮಿತಿ ರಚನೆ ಮಾಡಿತು.

ತನಿಖಾ ಸಮಿತಿ ಪರಿಶೀಲನೆ ನಡೆಸಿ ವಿವಿಯಲ್ಲಿ 3335 ನಕಲಿ ಘಟಿಕೋತ್ಸವ ಪ್ರಮಾಣಪತ್ರ ನೀಡಲಾಗಿದೆ. 2 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ವರದಿ ನೀಡಲಾಗಿದೆ ಎಂದು ಗೊತ್ತಾಗಿದೆ. ಆದರೆ, ಈವರೆಗೆ ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ. ವಿಶ್ವವಿದ್ಯಾಲಯದಲ್ಲಾಗಿರುವ ಈ ಬೆಳವಣಿಗೆ ನಾನಾ ಅನುಮಾನಗಳಿಗೆ ಆಸ್ಪದ ಒದಗಿಸಿದೆ.

ತಪ್ಪಿತಸ್ಥರಿಗೆ ಶಿಕ್ಷೆ:

ಪ್ರಕರಣ ಕುರಿತು ಕನ್ನಡಪ್ರಭ ಜೊತೆ ಮಾತನಾಡಿದ ವಿವಿ ಕುಲಪತಿ ಪ್ರೊ. ಮುನಿರಾಜು, ಪ್ರಕರಣದಲ್ಲಿ ಭಾಗಿಯಾಗಿರುವ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಯಾವ ಅನುಮಾನವಿಲ್ಲ. ಜೂನ್‌ ಮೊದಲ ವಾರದಲ್ಲಿ ಸಿಂಡಿಕೇಟ್ ಸಭೆ ನಡೆಯಲಿದ್ದು ಈ ಬಗ್ಗೆ ಪೂರಕ ಕ್ರಮ ವಹಿಸಲಾಗುವುದು. ಪ್ರಕರಣದಲ್ಲಿ ಯಾರ್ಯಾರು ತಪ್ಪಿತಸ್ಥರಿದ್ದಾರೆ? ಎಲ್ಲರಿಗೂ ಶಿಕ್ಷೆಯಾಗುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಪ್ಪು ಮಾಡಿದವರು ಜೈಲಿಗೆ ಹಾಕಿಸುವ ತನಕ ನಾವು ಬಿಡುವುದಿಲ್ಲ ಎಂದು ಖಚಿತಪಡಿಸಿದರು.

ಬಳ್ಳಾರಿ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯ ಮಾಡುವ ಕನಸು ಹೊತ್ತಿರುವೆ. ನನಗಿನ್ನು ಮೂರುವರ್ಷ ಮೂರು ತಿಂಗಳು ಸೇವಾವಧಿಯಿದೆ. ಅಷ್ಟರೊಳಗೆ ಬಳ್ಳಾರಿ ವಿವಿಯನ್ನು ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯುತ್ತಮ ವಿವಿಯನ್ನಾಗಿ ಬದಲಾಯಿಸಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ