ವಾಸಸ್ಥಳ ಬೇರೆ ಆಗಿದ್ದಕ್ಕೆ ವಂಶವೃಕ್ಷ ನಿರಾಕರಿಸಂಗಿಲ್ಲ

KannadaprabhaNewsNetwork |  
Published : Sep 21, 2026, 02:00 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಕುಟುಂಬದ ಮೃತ ವಂಶಸ್ಥರು ಅಥವಾ ಜೀವಂತವಾಗಿರುವ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ವಂಶವೃಕ್ಷ ಪ್ರಮಾಣಪತ್ರ ನೀಡಲು ನಿರಾಕರಿಸುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಟುಂಬದ ಮೃತ ವಂಶಸ್ಥರು ಅಥವಾ ಜೀವಂತವಾಗಿರುವ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ವಂಶವೃಕ್ಷ ಪ್ರಮಾಣಪತ್ರ ನೀಡಲು ನಿರಾಕರಿಸುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಕುಟುಂಬದ ಪೂರ್ವಜರು ಮತ್ತು ಇತರೆ ಸದಸ್ಯರ ವಿಳಾಸದ ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆ ತಮ್ಮ ಕುಟುಂಬ ಸದಸ್ಯರ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಲು ನಿರಾಕರಿಸಿ ಬೆಂಗಳೂರು ನಗರ ದಕ್ಷಿಣ ತಾಲೂಕಿನ ತಾವರೆಕರೆಯ ಉಪ ವಲಯದ ತಹಸೀಲ್ದಾರ್‌ 2021ರ ಡಿ.27ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಿ.ಎಸ್‌.ಅಭಿನಂದನ ಕುಮಾರ್‌ ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ.ಎಸ್‌.ಕಮಲ್‌ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಪ್ರಶ್ನೆ ಮಾಡಿದ ಹೊರತಾಗಿಯೂ ಕುಟುಂಬದ ವಂಶಾವಳಿ, ವಂಶವೃಕ್ಷ ಅಥವಾ ಬದುಕುಳಿದಿರುವವರ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸುವ ಮತ್ತು ಈ ವಿಷಯ ನಿಯಂತ್ರಿಸುವ ಯಾವುದೇ ನಿರ್ದಿಷ್ಟ ಕಾನೂನು ನಿಬಂಧನೆ ಜಾರಿಯಿರುವ ಬಗ್ಗೆ ಸರ್ಕಾರಿ ವಕೀಲರು ಮಾಹಿತಿ ನೀಡಿಲ್ಲ. ಆದಾಗ್ಯೂ ರಾಜ್ಯ ಸರ್ಕಾರ ಅಂತಹ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ 2014ರ ಮಾ.20, ಆ.6 ಮತ್ತು 2018ರ ಸೆ.10 ಮತ್ತು 2026ರ ಜು.17ರಂದು ಮಾರ್ಗಸೂಚಿ ಒಳಗೊಂಡ ಸುತ್ತೋಲೆ ಹೊರಡಿಸಿದೆ. ಇನ್ನೂ ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ-2011ರಲ್ಲಿ ಕಂದಾಯ ಇಲಾಖೆ ಶೀರ್ಷಿಕೆಯಡಿಯ ಕ್ರಮ ಸಂಖ್ಯೆ 16ರಲ್ಲಿ ಉಲ್ಲೇಖಿಸಿರುವಂತೆ ಬದುಕುಳಿದ ಕುಟುಂಬ ಸದಸ್ಯರ ಪ್ರಮಾಣ ಪತ್ರ ವಿತರಿಸಲು ತಹಸೀಲ್ದಾರ್ ಸಕ್ಷಮ ಅಧಿಕಾರಿಯಾಗಿದ್ದಾರೆ. ಅದು ಬಿಟ್ಟು ಕುಟುಂಬ ವೃಕ್ಷ ಅಥವಾ ಬದುಕುಳಿದಿರುವವರ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸುವ ಯಾವುದೇ ಶಾಸನದ ಉಲ್ಲೇಖವಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ನಿವಾಸ ಪ್ರಮಾಣ ಪತ್ರಕ್ಕೆ ಹೋಲಿಕೆ ಸರಿಯಲ್ಲ:

ಅಲ್ಲದೆ, ಅರ್ಜಿದಾರರು ಹೆಸರಿಸಿರುವ ಕುಟುಂಬದ ಸದಸ್ಯರು ಸಂಬಂಧಪಟ್ಟ ಕಂದಾಯ ಅಧಿಕಾರಿಯ (ತಹಸೀಲ್ದಾರ್‌) ಅಧಿಕಾರ ವ್ಯಾಪ್ತಿ ಪ್ರದೇಶದೊಳಗೆ ವಾಸಿಸುತ್ತಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು, ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವುದು ಸಮರ್ಥನೀಯವಾಗಿಲ್ಲ. ವಂಶವೃಕ್ಷ ಪ್ರಮಾಣಪತ್ರ ನೀಡುವುದನ್ನು ನಿವಾಸ ಪ್ರಮಾಣಪತ್ರ ನೀಡುವುದಕ್ಕೆ ಸಮೀಕರಿಸಲಾಗುವುದಿಲ್ಲ. ಏಕೆಂದರೆ ನಿವಾಸ ಪ್ರಮಾಣಪತ್ರ ಕೋರುವ ವ್ಯಕ್ತಿ ಸಂಬಂಧಪಟ್ಟ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಗದಿತ ಅವಧಿಯವರೆಗೆ ವಾಸವಾಗಿರುವುದು ಕಡ್ಡಾಯವಾಗಿರಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಂಶವೃಕ್ಷದ ಮೂಲ ಪೂರ್ವಜರಿಂದಲೇ ಆರಂಭವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗೆಯೇ, ನಿಧನಕ್ಕೂ ಮುನ್ನ ಅವರು ಶಾಶ್ವತವಾಗಿ ನೆಲೆಸಿದ್ದ ಸ್ಥಳವೇ ನಿರ್ಣಾಯಕ ಅಂಶವಾಗಿರುತ್ತದೆ. ವಂಶವೃಕ್ಷ ಅಥವಾ ಬದುಕುಳಿದಿರುವವರ ಪ್ರಮಾಣಪತ್ರ ನೀಡಲು, ಸಂಬಂಧಪಟ್ಟ ಕಂದಾಯ ಅಧಿಕಾರಿಯ ಅಧಿಕಾರದ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮೃತ ಪೂರ್ವಜರು ಅಥವಾ ಕುಟುಂಬ ಸದಸ್ಯರ ವಂಶಸ್ಥರು ಅಥವಾ ಕಾನೂನುಬದ್ಧ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ವ್ಯಕ್ತಿಗಳೇ (ಅಗತ್ಯ ದಾಖಲೆ ಒದಗಿಸುವುದು) ಸಾಕಾಗುತ್ತದೆ. ಹಾಗಾಗಿ, ತಹಸೀಲ್ದಾರ್‌ ಅವರು 2026ರ ಜು.17ರಂದು ಪ್ರಕಟವಾಗಿರುವ ಸುತ್ತೋಲೆ ಅನುಸಾರ ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ:

ತನ್ನ ಕುಟುಂಬದ 11 ಸದಸ್ಯರನ್ನೊಳಗೊಂಡ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಲು ಕೋರಿ ಅರ್ಜಿದಾರರು, ತಾವರೆಕರೆಯ ಉಪ ವಲಯದ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕುಟುಂಬದ ಎಲ್ಲ ಸದಸ್ಯರ ವಿಳಾಸ ದಾಖಲೆ ಮತ್ತು ಮೃತಪಟ್ಟಿರುವ ಸದಸ್ಯರ ಮರಣ ಪ್ರಮಾಣಪತ್ರ ಒದಗಿಸಿಲ್ಲವೆಂದು ತಹಸೀಲ್ದಾರ್‌ ಅರ್ಜಿ ತಿರಸ್ಕರಿಸಿದ್ದರು. ಈ ಆದೇಶವನ್ನು ಉಪ ವಿಭಾಗಾಧಿಕಾರಿ ಸಹ ಪುರಸ್ಕರಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟ ತಯಾರಕರ ಬಾಕಿ ವೇತನ ನೀಡುವಂತೆ ಆಗ್ರಹ
ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ನೀಡಿ