ಅಡಿಕೆ ಕದಿಯಲು ಬಂದಿದ್ದ ನಾಲ್ಕೈದು ಕಳ್ಳರನ್ನು ರೈತನೋರ್ವ ಪ್ರಾಣದ ಹಂಗು ತೊರೆದು ಅವರನ್ನು ಬಡಿದೋಡಿಸಿದ ಘಟನೆ ಸಮೀಪದ ಹೊಣಕೆರೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಮುಗಳೂರು ಗ್ರಾಮದ ರಂಗಸ್ವಾಮಿಯವರಿಗೆ ಸೇರಿದ ಅಡಿಕೆ ತೋಟದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಅಡಿಕೆ ಗೊನೆಗಳನ್ನು ಕಳ್ಳರು ಕಿತ್ತು ಪರಾರಿಯಾಗಿದ್ದರು. ಅಡಿಕೆ ಬೆಳೆಯನ್ನು ಚೇಣಿಗೆ ಪಡೆದಿದ್ದವರು ತೋಟದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಅಡಿಕೆ ಗೊನೆಗಳನ್ನು ಕೀಳಲಾಗಿದೆ ಎಂದು ಹೇಳಿದ್ದರು. ಮಾಲೀಕ ರಂಗಸ್ವಾಮಿ ಬಂದು ನೋಡಲಾಗಿ ಅಡಿಕೆ ಗೊನೆ ಕಳವು ಮಾಡಿರುವುದು ಗೊತ್ತಾಗಿತ್ತು. ಸೋಮವಾರ ರಾತ್ರಿ ರಂಗಸ್ವಾಮಿಯವರು ಇಂದೂ ಸಹ ಕಳ್ಳರು ತಮ್ಮ ಅಡಿಕೆ ತೋಟಕ್ಕೆ ಬರಬಹುದೆಂಬ ಅನುಮಾನದಿಂದ ತೋಟಕ್ಕೆ ರಾತ್ರಿ ಸುಮಾರು ೧೧ ಗಂಟೆಯ ವೇಳೆಗೆ ಅವರೊಬ್ಬರೇ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ತಮ್ಮ ತೋಟದಲ್ಲೇ ಯಾರಿಗೂ ಕಾಣದಂತೆ ರಂಗಸ್ವಾಮಿ ಅವಿತು ಕುಳಿತಿದ್ದರು. ಅವರ ಊಹೆಯಂತೆ ಕಳ್ಳರು ಮಹೇಂದ್ರ ಕ್ವಾಂಟೋ ವಾಹನದಲ್ಲಿ ಬಂದ ಮೂರ್‍ನಾಲ್ಕು ಮಂದಿ ಕಳ್ಳರು ಕೆಲ ಸಮಯದ ನಂತರ ಅಡಿಕೆ ತೋಟಕ್ಕೆ ಪ್ರವೇಶಿಸಿ ಅಡಿಕೆ ಗೊನೆ ಕೀಳತೊಡಗಿದರು. ಇದನ್ನು ಗಮನಿಸಿದ ತಮ್ಮ ಸಹಾಯಕ್ಕಾಗಿ ಗ್ರಾಮದ ಹಲವರ ಹೆಸರನ್ನು ಬೇಕೆಂದೆ ಹೇಳಿ ಕಿರುಚಾಡಿದರು. ಈ ವೇಳೆ ಕಳ್ಳನೋರ್ವ ರಂಗಸ್ವಾಮಿಯವರ ಮೇಲೆ ಮಚ್ಚಿನಿಂದ ಹೊಡೆಯಲು ಮುಂದಾದಾಗ ರಂಗಸ್ವಾಮಿಯವರ ಕೈಗೆ ಗಾಯವಾಗಿದೆ. ಕೂಡಲೇ ರಂಗಸ್ವಾಮಿ ಮಚ್ಚನ್ನು ಕಿತ್ತುಕೊಳ್ಳುತ್ತಿದ್ದಂತೆ ವಾಹನದಲ್ಲಿ ಕುಳಿತಿದ್ದ ಚಾಲಕ ರಂಗಸ್ವಾಮಿಯವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ರಂಗಸ್ವಾಮಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಮಾಡಿದ್ದಾರೆ. ಆ ವೇಳೆ ಭಯಗೊಂಡ ನಾಲ್ಕೈದು ಮಂದಿ ಕಳ್ಳರು ಪರಾರಿಯಾಗಿದ್ದಾರೆ. ಪುನಃ ವಾಪಸ್ಸು ಬಂದು ವಾಹನವನ್ನು ತೆಗೆದುಕೊಂಡು ಹೋದಾರು ಎಂಬ ಆತಂಕದಿಂದ ರೈತ ರಂಗಸ್ವಾಮಿ ವಾಹನದ ಗಾಜು, ಟೈರ್‌ಗಳನ್ನು ಧ್ವಂಸ ಮಾಡಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ಆದ ಬಳಿಕ ವಾಹನದ ಮಾಲೀಕ ಬೆಳಗ್ಗೆ ತಮ್ಮ ವಾಹನ ನಿನ್ನೆ ರಾತ್ರಿಯಿಂದ ಕಾಣೆಯಾಗಿದೆ. ಯಾರಿಗಾದರೂ ಈ ವಾಹನ ಕಂಡು ಬಂದಲ್ಲಿ ದಯಮಾಡಿ ತಮಗೆ ಮಾಹಿತಿ ನೀಡಬೇಕೆಂದು ತಮ್ಮ ವಾಟ್ಸಪ್ ಸ್ಟೇಟಸ್ ಮತ್ತು ಇತರೆ ಗ್ರುಪ್‌ಗಳಿಗೆ ಮಂಗಳವಾರ ಬೆಳಗ್ಗೆ ಹಾಕಿದ್ದರು. ಕಳ್ಳರು ಬಳಸಿದ್ದ ವಾಹನದ ಸಂಖ್ಯೆ ಮತ್ತು ವಾಹನ ಕಳವಾಗಿದೆ ಎಂದು ಹಾಕಿರುವ ಸ್ಟೇಟಸ್‌ನಲ್ಲಿನ ವಾಹನದ ಸಂಖ್ಯೆಯೂ ಸಹ ಒಂದೇ ಆಗಿದ್ದರಿಂದ ಪೋಲಿಸರು ವಾಹನದ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಾಹನದ ಮಾಲೀಕರು ತಾವು ಮಾಯಸಂದ್ರ ರಸ್ತೆಯಲ್ಲಿರುವ ಬಸವೇಶ್ವರ ದೇವಾಲಯದ ಬಳಿ ಶೌಚಕ್ಕೆ ತೆರಳಿದ್ದ ವೇಳೆ ಯಾರೋ ತಮ್ಮ ವಾಹನವನ್ನು ಅಪಹರಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ರೈತ ರಂಗಸ್ವಾಮಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ದಂಡಿನಶಿವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ತನ್ನ ಪ್ರಾಣದ ಹಂಗನ್ನೂ ತೊರೆದು ನಾಲ್ಕೈದು ಮಂದಿ ಕಳ್ಳರನ್ನು ಹೊಡೆದೋಡಿಸಿದ ರೈತ ರಂಗಸ್ವಾಮಿಯವರ ಹೋರಾಟಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗೆ ಅಡಿಕೆಯ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲವೆಡೆ ಅಡಿಕೆ ಕಳವು ಹೆಚ್ಚಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.