ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ಹೊನ್ನನಾಯಕನಹಳ್ಳಿ ರೈತ ಬಸವರಾಜಪ್ಪ ಎಂಬುವರು ಫಲಕ್ಕೆ ಬಂದಿದ್ದ ಅಡಕೆ ಮರ ಕಡಿದು ಹಾಕಿದ್ದಾರೆ. 10ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯದ ಕಾರಣಕ್ಕೆ ಕೊನೆಗೆ ಅಡಕೆ ಮರಗಳನ್ನು ಕಡಿದು ಹಾಕಿರುವುದು ಜಿಲ್ಲೆಯಲ್ಲಿನ ಮಳೆ, ಅಂತರ್ಜಲ ಮಟ್ಟದ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ.
ರೈತ ಬಸವರಾಜಪ್ಪ ತಾನು ಬೆಳೆದ ಅಡಕೆ ಗಿಡಗಳಿಗೆ ಮಳೆ ಇಲ್ಲದ ಹಿನ್ನೆಲೆ ನೀರು ಒದಗಿಸಲಾಗದೆ ಪರದಾಡಿ, ಇದರಿಂದ ರೋಸಿ ಹೋಗಿ ತನ್ನ ತೋಟದಲ್ಲಿ ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದ ಅಡಕೆ ಗಿಡಗಳನ್ನು ತಾನೇ ನಾಶ ಮಾಡಿದ್ದಾನೆ. ತನ್ನ ತೋಟದಲ್ಲಿ ನೀರಿಗಾಗಿ 10ಕ್ಕೂ ಹೆಚ್ಚು ಬೋರ್‌ವೆಲ್ ಕೊರೆಸಿದರೂ ಸಹಾ ಉಪಯೋಗವಾಗಿಲ್ಲ. ಅಂತರ್ಜಲ ಕುಗ್ಗಿದ ಹಿನ್ನೆಲೆ ಬೋರ್‌ವೆಲ್ ಕೊರೆಸಿದರೂ ಸಹಾ ನೀರು ಸಿಗದೇ ಲಕ್ಷಾಂತರ ರೂಪಾಯಿ ಹಣವನ್ನು ನಷ್ಟ ಮಾಡಿಕೊಂಡಿದ್ದಾನೆ.ರೈತ ಬಸವರಾಜಪ್ಪನವರಿಗೆ ಪರಿಹಾರ ನೀಡಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಕಳೆದ ವರ್ಷ ಮುಂಗಾರು, ಹಿಂಗಾರಿನಿಂದ ಅತೀ ಮಳೆ ಕೊರತೆಯಿಂದ ಬರದ ಸಂಕಷ್ಟಕ್ಕೆ ತುತ್ತಾಗಿದ್ದ ರೈತಾಪಿ ವರ್ಗ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಅರೇ ಮಲೆನಾಡು ಖ್ಯಾತಿಯ ದಾವಣಗೆರೆ ಜಿಲ್ಲೆ ಬರಕ್ಕೆ ತುತ್ತಾಗಿ, ಜಿಲ್ಲೆಯ ಜೀವ ಸೆಲೆ ಭದ್ರಾ ಜಲಾಶಯದಲ್ಲಿ ಪಾಳಿ ಪದ್ಧತಿಯಲ್ಲಿ ನಾಲೆಯಲ್ಲಿ ನೀರು ಹರಿಸಿದ್ದರ ಪರಿಣಾಮ ಮಳೆಗಾಲದ ಭತ್ತ ಕೈಗೆ ಸಿಕ್ಕಿತು. ಆದರೆ, ಅತೀ ಮುಖ್ಯವಾದ ಮೆಕ್ಕೆಜೋಳ, ಜೋಳ, ರಾಗಿ ಇತರೆ ಬೆಳೆಗಳು ಕೈಗೆ ಸಿಗಲೇ ಇಲ್ಲ.