ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬು, ಬಾಳೆದಿಂಡು, ಹೂವು-ಹಣ್ಣು, ತಳಿರು, ತೋರಣ ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ, ಗ್ರಾಹಕರ ಖರೀದಿಯಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. 5 ಕಬ್ಬಿಗೆ ₹70-80, ಎರಡು ಬಾಳೆದಿಂಡಿದೆ ₹50-80, ಬೂದು ಕುಂಬಳಕಾಯಿ-100, ಐದು ತರದ ಹಣ್ಣುಗಳಿಗೆ ₹60-70, ಚೆಂಡು ಹೂವು ಕೆಜಿಗೆ ₹150, ಸೇವಂತಿಗೆ ಕೆಜಿಗೆ ₹200, ಸೇಬಿಗೆ ಕೆಜಿಗೆ ₹100, ಬಾಳೆಹಣ್ಣು ಡಜನ್‌ಗೆ ₹50ಕ್ಕೆ ಮಾರಾಟವಾದವು.ಅಲಂಕಾರಿಕ ವಸ್ತುಗಳಾದ ಆಕಾಶ ಬುಟ್ಟಿ, ಪ್ಲಾಸ್ಟಿಕ್ ಮಾವಿನ ತೋರಣ, ಹಣತೆ, ಬಣ್ಣಬಣ್ಣದ ರಂಗೋಲಿ ಮತ್ತಿತರ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಪಟಾಕಿಗಳ ಖರೀದಿಯೂ ಜೋರಾಗಿತ್ತು. ಚಿನ್ನಾಭರಣ ಅಂಗಡಿಗಳು, ಹೋಟೆಲ್‌ಗಳು, ಇಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲೂ ಗ್ರಾಹಕರ ದಟ್ಟಣೆ ಕಂಡುಬಂತು. ವಾಹನಗಳು ಅದರಲ್ಲೂ ದ್ವಿಚಕ್ರವಾಹನಗಳ ಷೋ ರೂಂಗಳಲ್ಲಿ ಜನಜಾತ್ರೆ ಸೇರಿತ್ತು. ಶನಿವಾರ ಪಾಢ್ಯದ ದಿನ ಮನೆಗೆ ಹೊಸ ವಾಹನ ತೆಗೆದುಕೊಂಡು ಹೋಗಲು ಬುಕ್ಕಿಂಗ್ ಮಾಡುತ್ತಿರುವುದು ಕಂಡುಬಂತು. ಈ ಬಾರಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಪ್ರಮುಖವಾಗಿ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಮಾರುತಿ ಗಲ್ಲಿ, ಖಡೇಬಜಾರ್ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬಂತು. ಈ ಬಾರಿ ಮಾರುಕಟ್ಟೆಯಲ್ಲಿ ಮಹಿಳೆಯರು ಹೆಚ್ಚಾಗಿ ಕಂಡುಬಂದರು. ಆಕಾಶಬುಟ್ಟಿಗಳ ಖರೀಯೂ ಜೋರಾಗಿತ್ತು. ಚೀನಾದ ಪ್ಲಾಸ್ಟಿಕ್ ಹಣತೆಗಳು, ಆಕಾಶ ಬುಟ್ಟಿಗಳ ಭರಾಟೆಯ ಮಧ್ಯೆಯೂ ದರ ಹೆಚ್ಚಾಗಿದ್ದರೂ ಮಣ್ಣಿನ ಹಣತೆಗಳು, ಬಿದಿರು-ಬಣ್ಣದ ಕಾಗದ ಬಳಿಸಿ ತಯಾರಿಸಿದ ಸಾಂಪ್ರಾಯಿಕ ಆಕಾಶಬುಟ್ಟಿಗಳಿಗೂ ಬೇಡಿಕೆ ಕಂಡುಬಂತು.ಸಿಡಿಮದ್ದುಗಳ ಮಾರಾಟ ನಿಷೇಧ:ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು, ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಹಸಿರು ಪಟಾಕಿ ಬಿಟ್ಟು ಉಳಿದ ಯಾವುದೇ ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ.
ಟ್ರಾಫಿಕ್ ಕಿರಿಕಿರಿ: ಮಾರುಕಟ್ಟೆಯಲ್ಲಿ ಜನರು ನಡೆದಾಡಲಾಗದಷ್ಟು ಜನದಟ್ಟಣೆ ಇದ್ದರೂ ಪೊಲೀಸರು ಕಾರು ಹಾಗೂ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಯೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸದ್ದರಿಂದ ಸಂಜೆ ವೇಳೆ ಮಾರುಕಟ್ಟೆಯ ಪ್ರಮುಖ ರಸ್ತೆಗಳಲ್ಲಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಜನರು ಪರದಾಡುವಂತಾಯಿತು.