ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀಬಿಸಿಲು ಮಾರಮ್ಮನ ದೇವಸ್ಥಾನದಲ್ಲಿ ಸೇರಿದ ಗ್ರಾಮಸ್ಥರು ಯಜಮಾನರ ಸಮ್ಮುಖದಲ್ಲಿ ಶ್ರೀಬಿಸಿಲು ಮಾರಮ್ಮ ದೇವಸ್ಥಾನದ ಬಸಪ್ಪನ ಮೆರವಣಿಗೆಯಲ್ಲಿ ತಂಬಿಟ್ಟಿನ ಆರತಿಯೊಂದಿಗೆ ತಮಟೆ, ನಗಾರಿ ಸದ್ದಿನ ಮೇಳದಲ್ಲಿ ಮೂರು ದೇವಸ್ಥಾನಗಳಿಗೂ ತಂಬಿಟ್ಟಿನ ತಂಪು ತೋರಿ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ಮುಖಂಡ ಹೊಸಹಳ್ಳಿ ಶಿವು ಮಾತನಾಡಿ, ನಮ್ಮ ಪೂರ್ವಿಕರ ಕಾಲದಿಂದಲೂ ಶ್ರೀಮಾರಮ್ಮ ದೇವತೆಗಳ ಪೂಜೆ ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ, ಹಿಂದೆ ತೀವ್ರ ಬೇಸಿಗೆಯ ಬಿಸಿಲಿನಿಂದಾಗಿ ಜನ ಮತ್ತು ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾದಾಗ, ಹಿರಿಯರು ದೇವಿಗೆ ತಂಪು ತೋರುವ ವಿಶಿಷ್ಟ ಆಚರಣೆಯನ್ನು ಆರಂಭಿಸಿದರು. ಬಿಸಿಲಿನ ತಾಪವನ್ನು ತಗ್ಗಿಸಲು ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಲು ಈ ಪೂಜೆ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದರು.ಈ ಹಬ್ಬವನ್ನು ಐದು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಕುಟುಂಬದವರು, ಅಕ್ಕ-ತಂಗಿ ಅತ್ತಿಗೆ ನಾದಿನಿಯರು ಜೊತೆಗೂಡಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಕಳೆದ ಎರಡು-ಮೂರು ವರ್ಷದಿಂದ ಮಾತ್ರ ಸರಳವಾಗಿ ಆಚರಿಸಿ ಬಂಧು-ಬಳಗ ಕರೆದು ಸಂಭ್ರಮಿಸುತ್ತೇವೆ ಎಂದು ಹಬ್ಬದ ಕುರಿತಂತೆ ಮಾಹಿತಿ ನೀಡಿದರು.
ಇದೇ ವೇಳೆ ದೇವಾಲಯಗಳ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಶ್ರೀಬಿಸಿಲು ಮಾರಮ್ಮ ಬಸಪ್ಪ ಅವರಿಗೆ ಅಲಂಕಾರ ಮಾಡಲಾಗಿತ್ತು. ಹೊಸಹಳ್ಳಿ ರಾಮನಹಳ್ಳಿ ಯಜಮಾನರಾದ ಎಚ್.ಎಂ.ಸುರೇಶ್, ನಿಂಗೇಗೌಡ, ಸ್ವಾಮಿ, ಜೋಗಪ್ಪ ಮುಖಂಡರಾದ ನಾಗೇಶ್, ಶೇಖರ್ ಸೇರಿದಂತೆ ಹಲವರು ಹಾಜರಿದ್ದರು.