ಗದಗ: ಗಾನಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜೂನ್ 12ರಿಂದ 16 ರವರೆಗೆ ನಡೆಯಲಿದೆ. ಜೂ. 16ರಂದು ಉಭಯ ಗುರುಗಳ ಮಹಾರಥೋತ್ಸವ ಧರ್ಮೊತ್ತೇಜಕ ಮಹಾಸಭೆ ಹಾಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ.ಕಲ್ಲಯ್ಯಜ್ಜನವರು ಹೇಳಿದರು.
ಅವರು ಸೋಮವಾರ ಗದಗ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೂನ್ 12ರಿಂದ 16ರ ವರೆಗೆ ಪ್ರತಿದಿನ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಸಿದ್ಧಾರೂಢ ಮಠದ ಕೃಷ್ಣೇಗೌಡರು ಹಾಗೂ ವೇದಮೂರ್ತಿ ಕುಮಾರಸ್ವಾಮಿ ಹಿರೇಮಠ ಅವರಿಂದ ನಡೆಯಲಿವೆ. ಜೂ. 12ರಂದು ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ ನಡೆಯಲಿದ್ದು, ಗುರು ಮಹಾಂತಯ್ಯ ಶಾಸ್ತ್ರಿ ರಚಿಸಿರುವ ಗೀತ ಮಂದಾರ ಗ್ರಂಥ ಬಿಡುಗಡೆ ನಡೆಯಲಿದ್ದು, ಅದೇ ದಿನ ರಾತ್ರಿ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಂದ ಸೊನ್ನಲಗಿ ಶ್ರೀ ಸಿದ್ದರಾಮೇಶ್ವರ ನಾಟಕ ಪ್ರದರ್ಶನ ಜರುಗಲಿದೆ.ಜೂ. 13ರಂದು ಶಿರಹಟ್ಟಿ ಮಹಾಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ಕೀರ್ತನ ಸಮ್ಮೇಳನ ಹಾಗೂ ಅಂಧರಗೋಷ್ಠಿ ನಡೆಯಲಿದೆ. ಜತೆಗೆ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ರಾತ್ರಿ 10.30ಕ್ಕೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಬಂದರ ನೋಡ ಬಂಗಾರಿ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸಾನಿಧ್ಯವನ್ನು ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ಅಧ್ಯಕ್ಷತೆಯನ್ನು ಡಾ. ಕಲ್ಲಯ್ಯಜ್ಜನವರು ವಹಿಸುವರು.
ಜೂ. 14ರಂದು ಮುಂಡರಗಿ ಸಂಸ್ಥಾನ ಮಠದ ಅನ್ನದಾನೀಶ್ವರ ಶಿವಯೋಗಿಗಳವರ ಸಾನಿಧ್ಯದಲ್ಲಿ ಕೀರ್ತನ ಸಮ್ಮೇಳನ ನಡೆಯಲಿದೆ. ಇದೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಕೂಡಾ ನಡೆಯಲಿದೆ. ಜೂ. 15ರಂದು ಶಿವಾನುಭವಗೋಷ್ಠಿ ನಡೆಯಲಿದ್ದು, ಸಂಗೀತ ಸಭೆ ಜರುಗಲಿದ್ದು, ಸಂಗೀತ ಸಭೆಯಲ್ಲಿ ವೀರೇಶ ಕಿತ್ತೂರು, ವೀರಭದ್ರಯ್ಯ ಯರಗಲ್ ಮೈಸೂರು, ಹನುಮಂತಪ್ಪ ಗೋನವಾರ, ಸದಾಶಿವ ಪಾಟೀಲ ಕೊಪ್ಪಳ ಸೇರಿದಂತೆ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ.ಜೂ. 16ರಂದು ವಿಶೇಷ ಕಾರ್ಯಕ್ರಮ, ಧರ್ಮೋತ್ತೇಜಕ ಮಹಾಸಭೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ವಹಿಸುವರು. ಗಂಗಾವತಿಯ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ನೇತೃತ್ವವನ್ನು ವಹಿಸುವರು. ಜೂ. 17ರಂದು ರಾತ್ರಿ 10.30ಕ್ಕೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದಿಂದ ಸುಂದರ ಸಾಮಾಜಿಕ ನಾಟಕ ಗಡಗಿ ಜ್ವಾಕಿ ತಂಗಿ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸ್ತ್ರೀ ಪಾತ್ರದಲ್ಲಿ ನಟನೆಯ ಮೂಲಕ ಹೆಸರುವಾಸಿಯಾಗಿರುವ ಮಹಾದೇವ ಗುಡ್ಲಿ ಹೊಸೂರು ಇವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಶ್ರೀ ವೀರಭದ್ರೇಶ್ವರ ಡ್ರಾಮಾ ಸೀನ್ಸ್ ಇವರು ರಂಗ ಸಜ್ಜಿಕೆಯ ಸೇವೆ ಮಾಡಿದ್ದಾರೆ. ನಂತರ ಪೂಜ್ಯರ ಮಂಗಳ ಗೀತೆಯೊಂದಿಗೆ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳಲಿವೆ ಅಂತ ಕಲ್ಲಯ್ಯಜ್ಜನವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಪ್ರಕಾಶ ಬಸರಿಗಿಡದ, ವಸಂತಗೌಡ ಪೋಲಿಪಾಟೀಲ, ಚನ್ನವೀರಸ್ವಾಮಿ ಬಾಳಿಹಳ್ಳಿಮಠ, ಪರಶುರಾಮ ಕಟ್ಟಿಮನಿ, ಪ್ರಭುಲಿಂಗಯ್ಯ ಹಿರೇಮಠ, ಚನ್ನಬಸಯ್ಯ ಬಂಕಾಪೂರಮಠ, ಮುರುಘಯ್ಯ ಹಿರೇಮಠ, ಶಿವರುದ್ರಪ್ಪ ಇಟಗಿ, ಸಂಗಮೇಶ ದುಂದೂರ ಮುಂತಾದವರು ಹಾಜರಿದ್ದರು.ಪ್ರಶಸ್ತಿ ಪ್ರದಾನ: ಈ ಬಾರಿಯ ಕುಮಾರಶ್ರೀ ಪ್ರಶಸ್ತಿಯನ್ನು ವೇ. ವಿರೂಪಾಕ್ಷಯ್ಯ ಶಾಸ್ತ್ರಿ ಹಿರೇಮಠ, (ಪ್ರವಚನ ಕ್ಷೇತ್ರ), ರಾಜು ಎಮ್ಮಿಗನೂರ, (ಗಾಯನ ಕ್ಷೇತ್ರ), ಪ್ರಕಾಶ ಚನ್ನಪ್ಪ ಬಸರಿಗಿಡದ, ಗದಗ (ಭೂದಾನ ಕ್ಷೇತ್ರ). ಮತ್ತು ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿಯನ್ನು 2025ನೇ ಸಾಲಿನ ಪಂ. ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೋತ್ಸವದಲ್ಲಿ ಶ್ರೀ ರಾಮಣ್ಣ ನಸಬಿ (ಸಂಗೀತ ಕ್ಷೇತ್ರ) ನೀಡಲಾಗುವುದು ಎಂದು ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಹೇಳಿದರು.