ಸಂಭ್ರಮದ ಶಿರಹಟ್ಟಿ ಫಕೀರೇಶ್ವರ ರಥೋತ್ಸವ

KannadaprabhaNewsNetwork |  
Published : May 02, 2026, 02:30 AM IST
ಜನಸಾಗರದ ನಡುವೆ ಭಕ್ತಿ ಭಾವಗಳಿಂದ ಫಕೀರೇಶ್ವರರ ರಥವನ್ನು ಎಳೆಯಲಾಯಿತು. | Kannada Prabha

ಸಾರಾಂಶ

ಪೀಠಾಧಿಪತಿ ಸಿದ್ದರಾಮ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತವೃಂದ ಮುಗಿಲು ಮುಟ್ಟುವಂತೆ ಜಯಘೋಷ ಹಾಕುತ್ತಾ ರಥವನ್ನು ಎಳೆದು ಸಂಭ್ರಮಿಸಿದರು.

ಶಿರಹಟ್ಟಿ: ಪ್ರತಿವರ್ಷ ಬುದ್ಧ ಪೌರ್ಣಿಮೆಯಂದು ನಡೆಯುವ ಉತ್ತರ ಕರ್ನಾಟಕದ ಐತಿಹಾಸಿಕ ಪ್ರಸಿದ್ಧ ಜಾತ್ರೆಗಳಲ್ಲೊಂದಾದ, ಹಿಂದು ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿ ಫಕೀರೇಶ್ವರ ಮಠದ ಭವ್ಯ ರಥೋತ್ಸವ ಲಕ್ಷಾಂತರ ಜನರ ಮಧ್ಯೆ ಶುಕ್ರವಾರ ಸಂಜೆ ಸಂಭ್ರಮದಿಂದ ನೆರವೇರಿತು.

ಇಳಿಹೊತ್ತಿನ ವೇಳೆ ಫಕೀರೇಶ್ವರ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಳ್ಳುವ ಉತ್ಸುಕದಲ್ಲಿದ್ದರು. ಆಗ ಪೀಠಾಧಿಪತಿ ಸಿದ್ದರಾಮ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತವೃಂದ ಮುಗಿಲು ಮುಟ್ಟುವಂತೆ ಜಯಘೋಷ ಹಾಕುತ್ತಾ ರಥವನ್ನು ಎಳೆದು ಸಂಭ್ರಮಿಸಿದರು.

ಮಠದ ಸಂಪ್ರದಾಯದಂತೆ ಕಳಸಾರೋಹಣ ಮಾಡಿದ ದಿನದಂದೇ ಮಠದ ಪೀಠಾಧ್ಯಕ್ಷರಾದ ಫಕೀರ ಸಿದ್ದರಾಮ ಸ್ವಾಮೀಜಿ ಪಟ್ಟಣದ ಹೊರವಲಯದ ಶಿಕ್ಷಣ ಸಂಸ್ಥೆಗೆ ಬಂದು ನೆಲೆಸಿದ್ದರು. ನಂತರ ರಥೋತ್ಸವದ ದಿನ ಅವರನ್ನು ಮೆರವಣಿಗೆ ಮೂಲಕ ಪುನಃ ಮಠಕ್ಕೆ ಕರೆತರಲಾಯಿತು.ಶಿರಹಟ್ಟಿ ಸಂಸ್ಥಾನ ಮಠದ ಫಕೀರ ಸಿದ್ದರಾಮ ಸ್ವಾಮಿಗಳು ಅಲಂಕೃತ ರಥಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಶ್ರೀಗಳ ನೇತೃತ್ವದಲ್ಲಿ ರಥವನ್ನು ಸಂಜೆ ಭಕ್ತ ಸಮೂಹ ಒಂದು ಕಿಮೀ ದೂರದ ವರೆಗೆ ಎಳೆದು ಪಾದಸ್ಥಳ ತಲುಪಿ ಮತ್ತೆ ಮೊದಲಿನ ಸ್ಥಳಕ್ಕೆ ರಥವನ್ನು ತಂದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಝಾಂಜ್ ಮೇಳ, ಹೆಜ್ಜೆ ಮೇಳ, ನಂದಿಕೋಲು, ವಾದ್ಯ ಮೇಳ ಮನಸೂರೆಗೊಂಡವು.ರಥಕ್ಕೆ ನೆರೆದಿದ್ದ ಭಕ್ತ ಸಮೂಹ ಉತ್ತತ್ತಿ, ಪೇರಲ, ಬಾಳೆಹಣ್ಣು ಎಸೆದು ಫಕೀರೇಶ್ವರ ಮಹಾರಾಜ ಕೀ ಜೈ, ಫಕೀರೇಶ್ವರನ ಅಂಗಾರ ನಾಡಿಗೆಲ್ಲ ಬಂಗಾರ, ಫಕೀರೇಶ್ವರನ ಜೋಳಗಿ ನಾಡಿಗೆಲ್ಲ ಹೋಳಗಿ, ಹರಹರ ಮಹಾದೇವ ಎಂಭ ಜಯಘೋಷ ಕೂಗಿದರು.ಸಿದ್ದರಾಮ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದೇವಾಲಯಗಳು ಭಕ್ತರ ಜೀವನದ ಅವಿಭಾಜ್ಯ ಅಂಗ. ದೇವರ ಜಾತ್ರೆ, ಉತ್ಸವ ಸಾಂಸ್ಕೃತಿಕ ಪರಂಪರೆ. ತೇರು ಎಳೆಯುವುದೂ ಸಂಸ್ಕೃತಿಯ ಭಾಗವಾಗಿದೆ. ತೇರು ಎಂಬುದು ಸಂಚಾರಿ ದೇವಾಲಯ ಇದ್ದಂತೆ ಎಂದರು.ದೇಶದಲ್ಲಿ ದೇವಾಲಯಗಳಿಗೆ ಮಹತ್ವ ಇದೆ. ಪ್ರತಿ ಗ್ರಾಮದಲ್ಲಿಯೂ ದೇವಾಲಯಗಳಿವೆ. ಆದರೆ ದೇವಾಲಯದ ಗರ್ಭಗುಡಿಯಲ್ಲಿ ಎಲ್ಲರಿಗೂ ಅವಕಾಶ ಇಲ್ಲ. ಇದೊಂದು ನಾವು ಮಾಡಿಕೊಂಡ ಕೆಟ್ಟ ವ್ಯವಸ್ಥೆ. ಎಲ್ಲರೂ ದೇವರ ಮಕ್ಕಳೆಂದಾಗ ಅಲ್ಲಿ ಎಲ್ಲರಿಗೂ ಅವಕಾಶ ಇರಬೇಕು. ಈ ವ್ಯವಸ್ಥೆಯ ಬದಲಾವಣೆಯೇ ರಥದ ನಿರ್ಮಾಣ ಎಂದರು.ವ್ಯಾಪಕ ಪೊಲೀಸ್ ಬಂದೋಬಸ್ತ್: ರಥೋತ್ಸವದ ನಿಮಿತ್ತ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಅಪಾರ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಅಹಿತಕರ ಘಟನೆ ಆಗದಂತೆ, ರಥೋತ್ಸವ ಸುಸೂತ್ರವಾಗಿ ಸಾಗಲು ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಮಠದ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಎಲ್ಲೆಡೆ ತೀವ್ರ ನಿಗಾ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕಾರ್ಮಿಕ ಶ್ರಮ ಆಧಾರ
ಬಿಎಸ್‌ವೈ ಅಭಿಮಾನೋತ್ಸವ ಯಶಸ್ವಿಗೊಳಿಸಿ: ಜಿ.ಕರುಣಾಕರ ರೆಡ್ಡಿ