ಕುತೂಹಲ ಕೆರಳಿಸಿದ ಜಟ್ಟಿಗಳ ಕಾಳಗ

KannadaprabhaNewsNetwork |  
Published : Jan 07, 2026, 02:30 AM IST
ಕೊಪ್ಪಳದ ಗವಿಮಠದ ಆವರಣದಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯದಲ್ಲಿ ಜಟ್ಟಿಗಳ ಕಾಳಗ ನೋಡುಗರ ಕುತೂಹಲ ಕೆರಳಿಸಿತು. | Kannada Prabha

ಸಾರಾಂಶ

ಕುಸ್ತಿ ಪಟುಗಳು ತಮ್ಮ ಕಟ್ಟುಮಸ್ತಾದ ಮೈಗೆ ಮಣ್ಣು ಸವರಿಕೊಂಡು ತೊಡೆ ತಟ್ಟಿ, ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಕೇಕೆ, ಸಿಳ್ಳೆ, ಚಪ್ಪಾಳೆ ಹಾಕಿ ಹುರಿದುಂಬಿಸಿದರು.

ಪಾಲಾಕ್ಷ ಬಿ.ತಿಪ್ಪಳ್ಳಿ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಗವಿಮಠದ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ನೋಡುಗರ ಮೈನವಿರೇಳಿತು. ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದ ಜಟ್ಟಿಗಳು ತಮ್ಮ ಪಟ್ಟುಗಳ ಚಾಕಚಕ್ಯತೆ ಪ್ರದರ್ಶಿಸಿದರು.

೩೨ಕ್ಕೂ ಅಧಿಕ ಜಟ್ಟಿಗಳು:ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಯಿಂದ ಆಗಮಿಸಿದ್ದ ಕುಸ್ತಿ ಪಟುಗಳು ತಮ್ಮ ಕಟ್ಟುಮಸ್ತಾದ ಮೈಗೆ ಮಣ್ಣು ಸವರಿಕೊಂಡು ತೊಡೆ ತಟ್ಟಿ, ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಕೇಕೆ, ಸಿಳ್ಳೆ, ಚಪ್ಪಾಳೆ ಹಾಕಿ ಹುರಿದುಂಬಿಸಿದರು. ವಾದ್ಯ ಮತ್ತು ಕಹಳೆ ಮೊಳಗಿಸಿ ಪ್ರೋತ್ಸಾಹಿಸಲಾಯಿತು.

ಮಹಾರಾಷ್ಟ್ರದ ಸಾಂಗ್ಲಿ, ಈಚಲಕರಂಜಿ, ರಾಜ್ಯದ ಬೆಳಗಾವಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಗದಗ, ಕಲಬುರಗಿ, ರಾಣೆಬೆನ್ನೂರು, ಕಂಪ್ಲಿ, ಮರಿಯಮ್ಮನಹಳ್ಳಿ, ಶಿವಮೊಗ್ಗ,‌ ಕಲಬುರಗಿ, ದಾವಣಗೆರೆ ಸೇರಿ ನಾನಾ ಕಡೆಯಿಂದ ಆಗಮಿಸಿದ್ದ ೩೨ಕ್ಕೂ ಅಧಿಕ ಜಟ್ಟಿಗಳು ಭಾಗವಹಿಸಿದ್ದರು.

ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯಗಳಲ್ಲಿ ಕುಸ್ತಿ ಪಟುಗಳು ಜಗಜಟ್ಟಿಗಳಂತೆ ಕಾದಾಡಿದರು. ಒಬ್ಬರಿಗಿಂತ ಇನ್ನೊಬ್ಬರು ಹಾಕುತ್ತಿದ್ದ ಪಟ್ಟು, ಹಿಡಿತಗಳ ಕಂಡು ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕೆಲ ಜಟ್ಟಿಗಳ ಕಾಳಗ ಸ್ವಲ್ಪ ‌ಹೊತ್ತಿನಲ್ಲಿ ಮುಗಿದರೆ, ಇನ್ನು ಕೆಲವರು ಬಿರುಸಿನಿಂದ ಕಾದಾಡಿದರು. ನೆರೆದಿದ್ದ ಸಾವಿರಾರು ಜನರು ನೋಡಿ ಕಣ್ತುಂಬಿಕೊಂಡರು.

ಮರಿಯಮ್ಮನಹಳ್ಳಿಯ ಕುಸ್ತಿಪಟು, ಹಂಪಿಕೇಸರಿ, ಹಂಪಿಕುಮಾರ ಪ್ರಶಸ್ತಿ ವಿಜೇತ ಎಲ್. ಹನುಮಂತ ಅವರು ರಾಜ್ಯದ ನಾನಾ ಕಡೆಯಿಂದ ಕುಸ್ತಿ ಪೈಲ್ವಾನರನ್ನು ಆಹ್ವಾನಿಸಿದ್ದರು. ೧೦ ಜೋಡಿ ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಎಲ್. ಸಣ್ಣ ಕುಂಟೆಪ್ಪ, ದುರಗಪ್ಪ, ಈರಣ್ಣ ಇಮ್ಮಡಿಗೌಡ್ರ ಕಾರ್ಯ ನಿರ್ವಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾಗಮಣಿ ಹೊಸ್ಮನಿ, ವ್ಯವಸ್ಥಾಪಕಿ ಸುಧಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ರಾಷ್ಟ್ರಮಟ್ಟದ ಕುಸ್ತಿ ಪಟುಗಳಾದ ಕಲಬುರ್ಗಿಯ ಶರಣಯ್ಯ, ಈಚಲಕರಂಜಿಯ ಸತೀಶ ನಡುವೆ ಇಡೀ ಒಂದು ತಾಸು ಸೆಣಸಾಟ ನಡೆಯಿತು. ಇಬ್ಬರಲ್ಲಿ ಒಬ್ಬರು ಗೆಲುವು ಸಾಧಿಸದ ಕಾರಣ ಸಮಬಲ ಸಾಧಿಸಿದರು.

ಕುಸ್ತಿ ಕ್ರೀಡಾ ಪೋಷಕನಾಗಿದ್ದೇನೆ. ನನ್ನ ಎರಡು ಹೆಣ್ಣು ಮಕ್ಕಳಾದ ವೈಷ್ಣವಿ ಮತ್ತು ಶ್ರೀಲಕ್ಷ್ಮೀ ಇಬ್ಬರು ಕುಸ್ತಿಪಟುಗಳಿದ್ದು ಅವರಿಗೆ ಪ್ರೋತ್ಸಾಹಿಸುತ್ತಿದ್ದೇನೆ. ದೆಹಲಿ, ಉತ್ತರಾಖಂಡ, ಉತ್ತರಪ್ರದೇಶದಲ್ಲಿ ಭಾಗವಹಿಸಿದ್ದಾರೆ ಎಂದು ಕುಸ್ತಿ ಕ್ರೀಡಾ ಪೋಷಕ ಈರಣ್ಣ ಇಮ್ಮಡಿಗೌಡ್ರ ತಿಳಿಸಿದ್ದಾರೆ.

ಕುಸ್ತಿಯಲ್ಲಿ ಭಾಗವಹಿಸಿ ೨೦೧೩-೧೪ರಲ್ಲಿ ಎರಡು ಸಲ ಕರ್ನಾಟಕ ಕೇಸರಿ, 2017ರಲ್ಲಿ ಕರ್ನಾಟಕ ಕಂಠೀರವ, ೨೦೧೫ರಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದಿದ್ದೇನೆ. ಗವಿಸಿದ್ದೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿರುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದು ಎರಡನೇ ಸಲ. ಈ ಹಿಂದೆ ಕೊಪ್ಪಳ ಕೇಸರಿ ಪ್ರಶಸ್ತಿ ಪಡೆದಿದ್ದೇನೆ ಎಂದು ರಾಷ್ಟ್ರ ಮಟ್ಟದಲ್ಲಿ ಕಂಚಿನ ಪದಕ ಗೆದ್ದ ರಾಣೆಬೆನ್ನೂರಿನ ಕುಸ್ತಿಪಟು ಕಾರ್ತಿಕ್ ಕಾಟಿ ತಿಳಿಸಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ಗದಗ ಜಿಲ್ಲೆಯ ಮುಳಗುಂದದ ನಾನು 15 ವರ್ಷದವಳಿದ್ದಾಗಿನಿಂದ ಕುಸ್ತಿ ಆಡುತ್ತಿದ್ದೇನೆ. ೨೩ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ೫ ಚಿನ್ನ, ೩ ಬೆಳ್ಳಿ ಮತ್ತು ೭ಕಂಚಿನ ಪದಕ ಗಳಿಸಿದ್ದೇನೆ. ಏಕಲವ್ಯ ಹಾಗೂ ಕ್ರೀಡಾರತ್ನ ಪ್ರಶಸ್ತಿ ಕೂಡ ಲಭಿಸಿದೆ ಎಂದು ಮುಳಗುಂದ ಮಹಿಳಾ ಕುಸ್ತಿಪಟು ಐಶ್ವರ್ಯ ಕರಿಗಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ