ಮಲೆನಾಡ ಹೆಬ್ಬಾಗಿಲು ತರೀಕೆರೆಯಲ್ಲಿ ಮೊದಲ ವರ್ಷಧಾರೆ

KannadaprabhaNewsNetwork | Published : Apr 14, 2024 1:48 AM

ಸಾರಾಂಶ

ಕಳೆದ ಮೂರು ತಿಂಗಳಿಗೂ ಹೆಚ್ಚು ಅವಧಿ ಕಡು ಬೇಸಿಗೆಯಲ್ಲಿ ಬಳಲಿದ್ದ ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದಲ್ಲಿಶನಿವಾರ ಧರೆಗಿಳಿದ ಮೊದಲ ವರ್ಷಧಾರೆ ಜನರಲ್ಲಿ ಸಂತಸ ಮೂಡಿಸಿದೆ.

ತಂಪಾದ ವಾತಾವರಣ । ಜನತೆಯಲ್ಲಿ ಸಂತಸ । ರಸ್ತೆ ಮೇಲೆ ತುಂಬಿ ಹರಿದ ನೀರು

ಕನ್ನಡಪ್ರಭ ವಾರ್ತೆ, ತರೀಕೆರೆ

ಕಳೆದ ಮೂರು ತಿಂಗಳಿಗೂ ಹೆಚ್ಚು ಅವಧಿ ಕಡು ಬೇಸಿಗೆಯಲ್ಲಿ ಬಳಲಿದ್ದ ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದಲ್ಲಿಶನಿವಾರ ಧರೆಗಿಳಿದ ಮೊದಲ ವರ್ಷಧಾರೆ ಜನರಲ್ಲಿ ಸಂತಸ ಮೂಡಿಸಿದೆ.ಹೆಚ್ಚು ಕಡಿಮೆ ಜನವರಿಯಿಂದಲೇ ಪ್ರಾರಂಭವಾದ ಬೇಸಿಗೆ ಫೆಬ್ರವರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವರೆಗೂ ಪಟ್ಟಣದಲ್ಲಿ ವಿಪರೀತ ತಾಪಮಾನವಿದ್ದು ಹೆಚ್ಚಿದ ಬೇಸಿಗೆ ಉಷ್ಣಾಂಶದಿಂದ ಜನ ತಲ್ಲಣಿಸಿದ್ದರು. ಸುಡು ಬಿಸಿಲಲ್ಲಿ ನೆರಳನ್ನು ಹುಡುಕ ಬೇಕಾದಂತಹ ಸ್ಥಿತಿಯಿಂದ ತಲ್ಲಣಿಸುವಂತಾಗಿತ್ತು.

ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿರಲಿಲ್ಲ. ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರವಾಗಿತ್ತು, ಪ್ರಾಣಿ ಪಕ್ಷಿಗಳು ಕೂಡ ನೀರಿಗಾಗಿ ಹುಡುಕಾಟ ನಡೆಸುವಂತಾಗಿತ್ತು. ಕೆಲವು ಕಡೆ ಅಂತರ್ಜಲ ಕ್ಷೀಣಿಸಿದ್ದು, ಮಳೆ ಎಂದು ಬರುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದರು.ಮೊದಲ ವರ್ಷಧಾರೆ:

ಜನರ ನಿರೀಕ್ಷೆಯಂತೆ ಮಲೆನಾಡು ಹೆಬ್ಬಾಗಿಲು ಎನ್ನುವ ಹೆಸರಿಗೆ ಸರಿಯಾಗಿ ತರೀಕೆರೆ ಪಟ್ಟಣದಲ್ಲಿ ಮೊದಲ ವರ್ಷಧಾರೆ ತುಸು ಹದವಾಗಿಯೇ ಸುರಿದಿದೆ. ಶನಿವಾರ ಬೆಳಗಿನಿಂದಲೇ ಎಂದಿನಂತೆ ಬಿಸಿಲ ಹೆಚ್ಚು ತಾಪಮಾನವಿತ್ತು, ಮಧ್ಯಾನ್ಹದ ನಂತರ ದಟ್ಟ ಮೋಡ ಕವಿಯ ತೊಡಗಿತು, ಕೆಲವೇ ನಿಮಿಶಗಳಲ್ಲಿ ಮಿಂಚು ಗುಡುಗಿನಿಂದ ಕೂಡಿದ ಹದವಾದ ಮಳೆ ಸಿಂಚನವಾಗಿ ಸುಮಾರು 25 ನಿಮಿಷಗಳ ಕಾಲ ಸುರಿಯಿತು.ತುಂಬಿ ಹರಿದ ರಸ್ತೆ ಚರಂಡಿಗಳುಃ

ದಪ್ಪ ದಪ್ಪ ಹನಿಗಳಿಂದ ಶುರುವಾದ ಮಳೆ ಸುಮಾರು ಅರ್ಧಗಂಟೆ ಬಂದಿದ್ದು, ಮಳೆಯ ರಭಸಕ್ಕೆ ಪಟ್ಟಣದ ರಸ್ತೆಯಲ್ಲಿ ಯಥೇಚ್ಚವಾಗಿ ನೀರು ತುಂಬಿ ಹರಿಯಿತು. ಅನೇಕ ತಗ್ಗು ಪ್ರದೇಶಗಳಲ್ಲೂ ನೀರು ಕೋಡಿ ಹರಿಯಿತು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನೀರು ನಿಂತು ವಾಹನಗಳು ಪ್ರಕಾಶಮಾವಾದ ಹೆಡ್ ಲೈಟುಗಳ ಬೆಳಕಿನಲ್ಲಿ ರಸ್ತೆಯಲ್ಲಿ ನಿಧಾನಗತಿಯಲ್ಲಿ ಚಲಿಸಿದವು, ಗಣಪತಿ ಪೆಂಡಾಲಿನ ಮುಂಭಾಗದ ರಸ್ತೆಯಲ್ಲಿ ಒಂದು ಅಡಿಗೂ ಎತ್ತರದಲ್ಲಿ ಮಳೆ ನೀರು ನಿಂಇತದ್ದರಿಂದ ಕೆಲವು ವಾಹನಗಳನ್ನು ಜನರೆ ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದರು.ಸಂತಸ:

ಕಡು ಬೇಸಿಗೆ ಮತ್ತು ಬರಗಾಲದಿಂದ ತತ್ತರಿಸಿಹೋಗಿದ್ದಲ್ಲದೆ, ಅಂತರ್ಜಲ ಕ್ಷೀಣಿಸಿದ್ದ ತರೀಕೆರೆ ಪಟ್ಟಣದಲ್ಲಿ ಶನಿವಾರ ಸುರಿದ ತುಸು ಹದವಾದ ಮಳೆಯಿಂದ ಜನರು ಸಂತಸ ಪಡುವಂತೆ ಆಗಿದೆ. ತರೀಕೆರೆ ಪಟ್ಟಣದ ನಿಟ್ಟುಸಿರು ಬಿಡುವಂತಾಗಿದೆ. ಪಟ್ಟಣದಲ್ಲಿ ಇದ್ದ ಬಿಸಿಲ ವಾತಾವರಣ ಇದೀಗ ತಂಪಾಗಿದೆ. ಮಳೆ ರೈತರಿಗೆ ಆಶಾಕಿರಣವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ, ಅಡಿಕೆ ಬೆಳೆಗಾರ ಟಿ.ಎಲ್.ರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

--

ಮುಂದುವರಿದ ಮಳೆ: ಗುಡುಗು,ಮಿಂಚು, ಸಿಡಿಲಿನ ಅಬ್ಬರ

ನರಸಿಂಹರಾಜಪುರ: ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ 5 ಗಂಟೆಗೆ ಗುಡುಗು, ಮಿಂಚಿ ನೊಂದಿಗೆ ಬಾರೀ ಮಳೆ ಸುರಿದಿದೆ. ಮಳೆಗೆ ಪಟ್ಟಣದ ಬಹುತೇಕ ರಸ್ತೆಗಳ ಚರಂಡಿ ಮೇಲೆ ನೀರು ಉಕ್ಕಿ ಹರಿಯಿತು. ಇದರಿಂದ ವಾಹನ ಸವಾರರು ಪರದಾಡಬೇಕಾಯಿತು. ಗ್ರಾಮೀಣ ಭಾಗದಲ್ಲೂ ಗುಡುಗು, ಮಿಂಚಿನ ಸಹಿತ ಮಳೆ ಸುರಿಯಿತು. ಶುಕ್ರವಾರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿತ್ತು.ಶನಿವಾರವೂ ಮಳೆ ಮುಂದುವರಿದಿರುವುದರಿಂದ ಅಡಕೆ ತೋಟ, ಕಾಫಿ ತೋಟಗಳಿಗೆ ಅನುಕೂಲವಾಗಿದೆ. ಅನೇಕ ಅಡಕೆ ತೋಟಗಳಲ್ಲಿ ನೀರಿಲ್ಲದೆ ತೊಂದರೆಯಾಗಿತ್ತು. ಕೊಳವೆ ಬಾವಿಗಳಲ್ಲೂ ಅಂತರ್ಜಲ ಕಡಿಮೆಯಾಗಿತ್ತು. ಈಗ ಕಾಫಿ ತೋಟಕ್ಕೂ ಸಹ ಮಳೆಯಿಂದ ಅನುಕೂಲವಾಗಿದ್ದು ಮುಂದಿನ 8-10 ದಿನ ತೋಟಗಳಿಗೆ ನೀರು ನೀಡುವುದು ತಪ್ಪಿದಂತಾಗಿದೆ. 2 ದಿನಗಳ ಸತತ ಮಳೆಯಿಂದಾಗಿ ವಾತಾವರಣ ತಂಪಾಗಿದೆ.

--

ಗುಡುಗು ಸಹಿತ ಮಳೆ: ಸಿಡಿಲಿಗೆ ಓರ್ವ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಓರ್ವ ಬಲಿಯಾಗಿದ್ದಾರೆ.ಎನ್‌.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಸಾಲೂರು ನಿವಾಸಿ ಶಂಕರ್‌ (50) ಮೃತ ದುರ್ದೈವಿ.

ಅಡಕೆ ತೋಟದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಶಂಕರ್ ಅವರಿಗೆ ಸಿಡಿಲು ಹೊಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ತರೀಕೆರೆ, ಕಡೂರು, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಮೂಡಿಗೆರೆ, ಕಳಸ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಕೊಪ್ಪ ತಾಲೂಕಿನಾದ್ಯಂತ ಗುಡುಗು ಸಹಿತ ಮಳೆ ಬಂದಿದೆ.

ತರೀಕೆರೆ ಪಟ್ಟಣದಲ್ಲಿ ಮಧ್ಯಾಹ್ನ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ತತ್ತರಿಸಿದ ಜನರಿಗೆ ಮಳೆ ತಂಪೆರೆಯಿತು. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಭಾರಿ ಮಳೆ ಯಾಗಿದ್ದರಿಂದ ಹಲವೆಡೆ ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತುಕೊಂಡಿದ್ದರೆ, ರಸ್ತೆಯ ತುಂಬೆಲ್ಲಾ ತೆರೆದ ಚರಂಡಿಯಲ್ಲಿ ಹರಿಯುವಂತೆ ನೀರು ಹರಿಯುತ್ತಿತ್ತು. ಕೆಲ ಹೊತ್ತು ಜನ ಜೀವನ ಅಸ್ತವ್ಯಸ್ತವಾಗಿತ್ತು.ಬೀರೂರು ಪಟ್ಟಣದಲ್ಲಿ 10 ನಿಮಿಷ ಮಳೆಯಾಗಿದ್ದರೆ, ಕಡೂರು ತಾಲೂಕಿನ ಸಖರಾಯಪಟ್ಟಣ, ದೇವನೂರು ಹೋಬಳಿಯಲ್ಲೂ ಮಳೆ ಬಂದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ ಬಂದಿತು.

ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದರೆ, ಶೃಂಗೇರಿ, ಕೊಪ್ಪ ತಾಲೂಕುಗಳ ಹಲವೆಡೆ ಸುಮಾರು ಒಂದು ಗಂಟೆಗೂ ಕಾಲ ಗುಡುಗು ಸಹಿತ ಮಳೆ ಬಂದಿದೆ. ಎನ್‌.ಆರ್‌.ಪುರ ಪಟ್ಟಣದಲ್ಲಿ ಸಂಜೆ 5 ಗಂಟೆಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಜೋರಾಗಿತ್ತು. ಗಾಳಿಯ ಪ್ರಮಾಣ ಕಡಿಮೆ ಇದ್ದರಿಂದ ಹೆಚ್ಚು ಮಳೆ ಆಗಿದೆ.

--

ಶೃಂಗೇರಿ: ಆರ್ಭಟಿಸಿದ ಮಳೆರಾಯ

ಶೃಂಗೇರಿ: ತಾಲೂಕಿನಾದ್ಯಂತ ಶನಿವಾರವೂ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿಯಿತು. ಮದ್ಯಾಹ್ನ ದಟ್ಟ ಮೋಡ ಕವಿದು ಗುಡುಗು ಸಿಡಿಲಿನ ಆರ್ಭಟ ಆರಂಭವಾಗಿ, ಗಾಳಿ ಸಹಿತ ವರುಣ ಧರೆಗಿಳಿದು ಹರ್ಷ ಹೆಚ್ಚಿಸಿತು.ಶೃಂಗೇರಿ ಪಟ್ಟಣದಲ್ಲಿ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ಸುಮಾರು ಒಂದೆರೆಡು ಗಂಟೆಗಳ ಕಾಲ ಎಡಬಿಡದೆ ಸುರಿಯಿತು. ಶುಕ್ರವಾರವೂ ದಾರಾಕಾರ ಮಳೆ ಸುರಿದಿತ್ತು. ತಾಲೂಕಿನ ಮೆಣಸೆ, ಬೇಗಾರು, ಅಡ್ಡಗೆದ್ದೆ, ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.

ನೆಮ್ಮಾರು, ಕೆರೆಕಟ್ಟೆಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ಸಂಜೆಯವರೆಗೂ ಮುಂದುವರೆದಿತ್ತು. ಕೆಲ ದಿನಗಳಿಂದ ಸುಡುಬಿಸಿಲ ವಾತಾವರಣದಿಂದ ಕಂಗೆಟ್ಟಿದ್ದ ಜನರಿಗೆ ಶುಕ್ರವಾರದಿಂದ ಸುರಿದ ಮಳೆಯಿಂದ ಇಡೀ ವಾತಾವರಣವೇ ತಂಪಾಗಿ ನೆಮ್ಮದಿ ತಂದಿದೆ.13 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನಲ್ಲಿ ಶನಿವಾರ ಧಾರಾಕಾರ ಮಳೆ ಸುರಿಯಿತು.13ಕೆಟಿಆರ್.ಕೆ.16, 17ಃ

ತರೀಕೆರೆಯಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹರಿಯಿತು.

Share this article