ಕನ್ನಡಪ್ರಭ ವಾರ್ತೆ ತುಮಕೂರು
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಹಾಗೂ ಸಮಿತಿ ಮುಖಂಡರು ಗೋ ಪೂಜೆ ಹಾಗೂ ಧ್ವಜ ಪೂಜೆ ನೆರವೇರಿಸಿ ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗಣೇಶ ಚತುರ್ಥಿಯಂದು ಇಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಆರಂಭವಾಗಲಿವೆ.
ಈ ವೇಳೆ ಮಾತನಾಡಿದ ಹಿರೇಮಠ ಸ್ವಾಮೀಜಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರ ಸಂಘಟನೆಗಾಗಿ ಲೋಕಮಾನ್ಯ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆ ಆರಂಭಿಸಿದರು. ಆಗಿನಿಂದ ದೇಶದೆಲ್ಲೆಡೆ ಸಂಘಸಂಸ್ಥೆಗಳು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಆರಂಭಿಸಿದವು. ಗಣೇಶೋತ್ಸವಗಳಲ್ಲಿ ತಿಲಕ್ ಅವರ ಹೆಸರು ಅನಿನಾಭಾವವಾಗಿ ಸೇರಿಕೊಳ್ಳುತ್ತದೆ ಎಂದರು.ತುಮಕೂರು ನಗರ ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಪ್ರಸಿದ್ಧವಾಗಿದೆ. ಗುರುಪರಂಪರೆ ಹೊಂದಿರುವ ತುಮಕೂರು ಡಾ. ಶಿವಕುಮಾರ ಸ್ವಾಮೀಜಿಗಳು ಸ್ಪರ್ಶ ಮಾಡಿದ ಕ್ಷೇತ್ರ. ಇಲ್ಲಿ ಯಾವುದೇ ಆಚರಣೆ ಮಾಡಿದರೂ ದಾಸೋಹದ ವ್ಯವಸ್ಥೆ ಮಾಡಲಾಗುತ್ತದೆ. ಹಾಗಾಗಿ ತುಮಕೂರು ನಗರ ದಾಸೋಹದ ಯೂನಿವರ್ಸಿಟಿ ಎಂದು ಸ್ವಾಮೀಜಿ ಬಣ್ಣಿಸಿದರು.
ಗಣೇಶೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮೀಕಾಂತ್, ಉಪಾಧ್ಯಕ್ಷರಾದ ಮಹೇಂದ್ರ ವೈಷ್ಣವ್, ಅಂಬಿಕಾ ಹುಲಿನಾಯ್ಕರ್, ವಾಸವಿ ಗುಪ್ತ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಪ್ರದೀಪ್, ಉತ್ಸವ ಸಮಿತಿ ಅಧ್ಯಕ್ಷಕೋರಿ ಮಂಜುನಾಥ್, ಕಾರ್ಯದರ್ಶಿಗಳಾದ ಕೆ. ವೇದಮೂರ್ತಿ, ಶಂಕರ್ ಕುರಿಪಾಳ್ಯ, ಸುರೇಶ್‌ರಾವ್, ಶರತ್, ಓಂಕಾರೇಶ್ವರಿ, ರವೀಶ್‌ಯಜಮಾನ್, ಪ್ರಮುಖರಾದ ವೈ.ಹೆಚ್. ಹುಚ್ಚಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷಎಚ್.ಎಸ್. ರವಿಶಂಕರ್ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ನಗರ ಅಧ್ಯಕ್ಷ ಧನುಷ್, ಜೀವನ್, ಮೃದುಲ್ ಸೇರಿದಂತೆ ವಿಶ್ವ ಹಿಂದೂ ಪರಿಷದ್, ಭಜರಂಗದಳ ಹಾಗೂ ಬಿಜೆಪಿಯ ಹಲವಾರು ಮುಖಂಡರು ಭಾಗವಹಿಸಿದ್ದರು.