ತಾನೇ ಸ್ಥಗಿತಗೊಳಿಸಿದ್ದ ತೆಪ್ಪಗಳ ಸಂಚಾರಕ್ಕೆ ಅರಣ್ಯ ಇಲಾಖೆ ಅನುಮತಿ

KannadaprabhaNewsNetwork |  
Published : Jan 17, 2024, 01:47 AM IST
ಫೋಟುಃ-16ಜಿಎನ್ಜಿ 1—ಗಂಗಾವತಿತಾಲೂಕಿನ ಸಾಣಾಪುರ ಸಮಾನಂತರ ಜಲಾಶಯದಲ್ಲಿ ತೆಪ್ಪಗಳ ಸಂಚಾರಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದ್ದಹಿನ್ನಲೆಯಲ್ಲಿ ತೆಪ್ಪಗಳ ಸಂಚಾರ | Kannada Prabha

ಸಾರಾಂಶ

ವಿರುಪಾಪುರ ಗಡ್ಡೆಯಲ್ಲಿರುವ ಟ್ರೀ ಪಾರ್ಕ್ (ಸಾಲು ಮರದ ತಿಮ್ಮಕ್ಕ ಉದ್ಯಾನವನ) ಯೋಜನೆಯ ವ್ಯಾಪ್ತಿಯಲ್ಲಿ ಸಾಣಾಪುರ ಸಮಾನಂತರ ಜಲಾಶಯ ಬರುತ್ತಿದ್ದರಿಂದ ಪ್ರವಾಸಿಗರಿಗೆ ಅನುಕೂಲವಾಗುವ ಉದ್ದೇಶಕ್ಕೆ ತೆಪ್ಪಗಳನ್ನು ಹಾಕಲು ಅರಣ್ಯ ಇಲಾಖೆ ಅನುಮತಿ ಕಲ್ಪಿಸಿದೆ

ರಾಮಮೂರ್ತಿ ನವಲಿ ಗಂಗಾವತಿ

ತಾಲೂಕಿನ ಸಾಣಾಪುರ ಹತ್ತಿರವಿರುವ ತುಂಗಭದ್ರಾ ಸಮಾನಂತರ ಜಲಾಶಯದಲ್ಲಿ ಮತ್ತೆ ತೆಪ್ಪಗಳ ಸಂಚಾರಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದ್ದು ಇದು ಚರ್ಚೆಗೆ ಕಾರಣವಾಗಿದೆ.

10 ದಿನಗಳ ಹಿಂದೆ ಅಕ್ರಮ ತೆಪ್ಪಗಳ ಸಂಚಾರದ ಹಿನ್ನೆಲೆ ಅರಣ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ದಾಳಿ ನಡೆಸಿ 16 ತೆಪ್ಪಗಳನ್ನು ಜಪ್ತಿ ಪಡೆದುಕೊಂಡಿತ್ತು. ಜಲಾಶಯದಲ್ಲಿ ನೀರು ನಾಯಿಗಳು ಇರುವುದರಿಂದ ಅವುಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನ್ಯಾಯಾಲಯ ಅಕ್ರಮ ತೆಪ್ಪ ಹಾಕಬಾರದು ಎಂದು ಆದೇಶ ನೀಡಿತ್ತು. ಅಲ್ಲದೇ 2019ರಲ್ಲಿ ಜಿಲ್ಲಾಧಿಕಾರಿಗಳು ಸಹ ಅಕ್ರಮ ತೆಪ್ಪ ಹಾಕದಂತೆ ಸೂಚನೆ ನೀಡಿದ್ದರು. ಪ್ರವಾಸಿಗರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ತೆಪ್ಪಗಳನ್ನು ಅರಣ್ಯ ಇಲಾಖೆ ಇತ್ತೀಚಿಗೆ ಜಪ್ತಿ ಮಾಡಿತ್ತು. ಈಗ ಅರಣ್ಯ ಇಲಾಖೆಯೇ ಮತ್ತೆ ಅನುಮತಿ ನೀಡಿದ್ದು ಅಕ್ರಮವನ್ನು ಸಕ್ರಮ ಮಾಡಿದ್ದೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಟ್ರೀ ಪಾರ್ಕ ಯೋಜನೆಯಡಿ ಅನುಮತಿ: ವಿರುಪಾಪುರ ಗಡ್ಡೆಯಲ್ಲಿರುವ ಟ್ರೀ ಪಾರ್ಕ್ (ಸಾಲು ಮರದ ತಿಮ್ಮಕ್ಕ ಉದ್ಯಾನವನ) ಯೋಜನೆಯ ವ್ಯಾಪ್ತಿಯಲ್ಲಿ ಸಾಣಾಪುರ ಸಮಾನಂತರ ಜಲಾಶಯ ಬರುತ್ತಿದ್ದರಿಂದ ಪ್ರವಾಸಿಗರಿಗೆ ಅನುಕೂಲವಾಗುವ ಉದ್ದೇಶಕ್ಕೆ ತೆಪ್ಪಗಳನ್ನು ಹಾಕಲು ಅರಣ್ಯ ಇಲಾಖೆ ಅನುಮತಿ ಕಲ್ಪಿಸಿದೆ. ವಿರುಪಾಪುರಗಡ್ಡೆಯಲ್ಲಿರು ಟ್ರೀಪಾರ್ಕ್ ವ್ಯಾಪ್ತಿಯನ್ನು ಸಾಣಾಪುರ ಜಲಾಶಯದವರಿಗೂ ವಿಸ್ತರಿಸಿ ತೆಪ್ಪಗಳ ಸಂಚಾರಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆ ಜಪ್ತಿ ಮಾಡಲಾದ 16 ತೆಪ್ಪಗಳನ್ನು ಬಿಡುಗಡೆ ಮಾಡಿದೆ.

₹ 150 ಶುಲ್ಕ ನಿಗದಿ: ಈ ಹಿಂದೆ ತೆಪ್ಪಗಳ ಮಾಲೀಕರು ಪ್ರವಾಸಿಗರಿಂದ ₹500 ರಿಂದ ಸಾವಿರದ ವರೆಗೆ ವಸೂಲಿ ಮಾಡುತ್ತಿದ್ದರು. ಪ್ರೀ ವೆಡ್ಡಿಂಗ್ ಚಿತ್ರೀಕರಣ ಮಾಡಲು ₹5 ರಿಂದ ₹10 ಸಾವಿರ ವಸೂಲಿ ಮಾಡುತ್ತಿದ್ದರು. ಈಗ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಪ್ರವಾಸಿಗರೊಬ್ಬರಿಗೆ ₹150 ಶುಲ್ಕ ನಿಗದಿ ಮಾಡಿದೆ. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿಗಳೇ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದೆ.

ತಪ್ಪಿದರೆ ಕಠಿಣ ಕ್ರಮ: ಜಲಾಶಯದಲ್ಲಿ ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡಿದರೆ ನಿರ್ಧಾಕ್ಷಣ್ಯವಾಗಿ ತೆಪ್ಪಗಳ ಮಾಲೀಕರ ವಿರುದ್ಧ ಕ್ರಮ ಕೈಗೊ‍‍ಳ್ಳುವುದಾಗಿ ಅರಣ್ಯ ಇಲಾಖೆ ಎಚ್ಚರಿಸಿದೆ. ಅರಣ್ಯ ಇಲಾಖೆಯವರು ನೀಡಿದ ಗುರುತಿನ ಚೀಟಿ ಮತ್ತು ರಕ್ಷಾ ಕವಚ ಧರಿಸಿ ತೆಪ್ಪಗಳಲ್ಲಿ ಪ್ರವಾಸಿಗರು ಸಂಚಾರ ಮಾಡಲು ಕೋರಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳುವದಾಗಿ ಸೂಚನೆ ನೀಡಿದ್ದಾರೆ.

ಜಲಾಶಯದಲ್ಲಿ ತೆಪ್ಪಗಳ ಸಂಚಾರಕ್ಕೆ ನ್ಯಾಯಾಲಯ ಮತ್ತು ಜಿಲ್ಲಾಡಳಿತ ಕಡಿವಾಣ ಹಾಕಿದ್ದರು ಸಹ ಅರಣ್ಯ ಇಲಾಖೆಯವರು ಅನುಮತಿ ನೀಡಿದ್ದರಿಂದ ಆಕ್ರಮ ತೆಪ್ಪಗಳ ಸಂಚಾರ ಸಕ್ರಮವಾದಂತಾಗಿದೆ.

ವಿರುಪಾಪುರಗಡ್ಡೆಯಲ್ಲಿ ಇರುವ ಟ್ರೀ ಪಾರ್ಕ್ (ಸಾಲುಮರದ ತಿಮ್ಮಕ್ಕ ಉದ್ಯಾನವನ) ವ್ಯಾಪ್ತಿಗೆ ಸಾಣಾಪುರ ಸಮಾನಂತರ ಜಲಾಶಯ ಬರುತ್ತಿದ್ದು, ಈ ಕಾರಣಕ್ಕೆ ತೆಪ್ಪಗಳ ಸಂಚಾರಕ್ಕೆ ಅನುಮತಿ ನೀಡಿದೆ. ಪ್ರವಾಸಿಗರಿಗೆ ₹150 ಶುಲ್ಕ ನಿಗದಿ ಮಾಡಿದೆ ಎಂದು ಅರಣ್ಯ ಇಲಾಖೆ ಆರ್ ಎಫ್ ಒ ಸುಭಾಸ್ ಚಂದ್ರ ಹೇಳಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ