ಕನ್ನಡಪ್ರಭ ವಾರ್ತೆ ಮೈಸೂರು
ಸಿದ್ದರಾಮಯ್ಯ ದೇಶ ಕಂಡ ಅಪರೂಪದ ಅಹಿಂದ ನಾಯಕ, ಬದುಕಿರುವವರೆಗೂ ಅವರ ಸದ್ದಡಗಿಸೋಕಾಗಲ್ಲ. ಅವರ ವರ್ಚಸ್ಸು ಕುಗ್ಗಿಸೋಗಾಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಹೇಳಿದ್ದಾರೆ.ಎಂಡಿಎ ಹಗರಣ ಬೆಳಕಿಗೆ ಬಂದ ನಂತರ ಸಿಎಂ ಮೆತ್ತಗಾಗಿದ್ದಾರೆ. 10-12 ಸೈಟಿಗಾಗಿ ತನ್ನ ತನವನ್ನ ಬಿಟ್ಟುಕೊಟ್ಟಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ವಿ. ಸೋಮಣ್ಣ, ಶಾಸಕ ಟಿ.ಎಸ್. ಶ್ರೀವತ್ಸ ಸೇರಿದಂತೆ ಇತರ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿವುದು ಶೋಭೆಯಲ್ಲ. ಸಿಎಂ ಬದುಕಿರೋವರೆಗೂ ಅವರ ಸದ್ದಡಗಿಸೋಕಾಗಲ್ಲ. ನಿಮಗೆ ಧೈರ್ಯವಿದ್ದರೆ ಈ ರಾಜ್ಯಕ್ಕೆ ಅನ್ಯಾಯವಾದ ಬಗ್ಗೆ ಕೇಂದ್ರ ನಾಯಕರ ವಿರುದ್ಧ ದನಿ ಎತ್ತಿ ಎಂದು ಹೇಳಿದ್ದಾರೆ.ಎಂಡಿಎ ಸೈಟನ್ನು ಮಲ್ಲಿಕಾರ್ಜುನ ಅವರು ಖರೀದಿಸಿ 2004ರಲ್ಲಿ ಕ್ರಯ ಮಾಡಿಕೊಂಡಿದ್ದು, ಬಳಿಕ ತಮ್ಮ ತಂಗಿ ಹೆಸರಿಗೆ ದಾನಪತ್ರ ಮಾಡಿಕೊಟ್ಟರು. ಆದರೆ ಎಂಡಿಎದವರು ಹೇಳದೆ ಕೇಳದೆ ಸೈಟು ಮಾಡಿ ಜಮೀನನ್ನು ಹಂಚಿಬಿಟ್ಟರು. ಇದೇ ವೇಳೆ ಸುಂದ್ರಮ್ಮ ಎಂಬರಿಗೆ ಸೇರಿದ್ದ ಸರ್ವೇ ನಂ.128/1 ರಲ್ಲಿ 2 ಎಕರೆ 17 ಗುಂಟೆ ಜಮೀನನ್ನು ಎಂಡಿಎನವರು ಸೈಟು ಮಾಡಿದ್ದಾಗಿ ಅವರು ತಿಳಿಸಿದರು.
ಆದರೆ ಅವರು ಜಮೀನನ್ನೇ ಬಿಡಿಸಿಕೊಂಡರು. ಅಷ್ಟರಲ್ಲಾಗಲೇ ಸಿದ್ದರಾಮಯ್ಯ ಅವರ ಜಮೀನನ್ನು ಸೈಟು ಮಾಡಿ ಹಂಚಿಬಿಟ್ಟಿದ್ದರು. ಕೊನೆಗೆ ಬೇರೆಕಡೆ ಸೈಟು ಕೊಡೋದಾಗಿ ಎಂಡಿಎದವರೇ ಹೇಳಿದರು.ಸಿಎಂ ಇಂತಹ ಕಡೆಯೇ ಸೈಟು ಕೊಡಿ ಅಂತ ಕೇಳಿರಲಿಲ್ಲ. ಅಷ್ಟರಲ್ಲಿ ಬಿಜೆಪಿ ಸರ್ಕಾರವೇ ಮಾಡಿದ್ದ 50:50 ಅನುಪಾತದಲ್ಲೇ ಸೈಟು ಹಂಚಿಕೆ ಮಾಡಲಾಗಿದೆ. ಅಲ್ಲದೇ ಜಮೀನು ಕಳೆದುಕೊಂಡವರಿಗೆ ಭೂಮಿ ಕೊಡಬೇಕು ಅಂತ ಎಂಡಿಎ ಬೈಲಾದಲ್ಲೇ ಇದೆ. ಆಗ ಬಾಯಿ ಮುಚ್ಚಿಕೊಂಡಿದ್ದವರು, ರಾಜ್ಯದಲ್ಲಿ ಸರ್ಕಾರ ಬರಲಿಲ್ಲ ಅಂತ ಈಗ ಬುಸುಗುಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಸಿಎಂ ತಪ್ಪು ಮಾಡದಿದ್ದರೂ ತನಿಖೆಗೆ ಆಯೋಗ ರಚಿಸಿದ್ದಾರೆ. 6 ತಿಂಗಳಲ್ಲಿ ವರದಿ ಬರಲಿದೆ. ಇದೇ ಸದನದಲ್ಲಿ ಎದುರಾಳಿಗಳ ಸದ್ದಡಗಿಸುವುದನ್ನು ಇಡೀ ರಾಜ್ಯ ನೋಡುತ್ತದೆ. ಬಿಜೆಪಿ ನಾಯಕರು ಕಾನೂನಿನಂತೆ ಮಾತನಾಡಲಿ, ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.