11 ತಿಂಗಳ ಹಿಂದೆ ಚ.ರಾ.ಪಟ್ಟಣದಲ್ಲಿ ನಡೆದಿದ್ದ ಕೊಲೆ । 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ । ನಾಲ್ಕು ತಿಂಗಳಲ್ಲಿ ತೀರ್ಪು ನೀಡಿ ದಾಖಲೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಹನ್ನೊಂದು ತಿಂಗಳ ಹಿಂದೆ ಮಧ್ಯಾಹ್ನದ ವೇಳೆ ನಡುರಸ್ತೆಯಲ್ಲಿ ರೌಡಿಶೀಟರ್ ಮಾಸ್ತಿಗೌಡನ ಹತ್ಯೆ ಮಾಡಿದ ೧೧ ಮಂದಿ ಅಪರಾಧಿಗಳಿಗೆ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ತರ ತೀರ್ಪು ನೀಡಿದೆ.
೧೧ ಮಂದಿ ಅಪರಾಧಿಗಳಲ್ಲಿ ೯ ಅಪರಾಧಿಗಳಿಗೆ ಕಠಿಣ ಕಾರಾಗೃಹ ವಾಸ, ಜೀವಾವಧಿ ಶಿಕ್ಷೆ ಹಾಗೂ ತಲಾ ೨೫ ಸಾವಿರ ರು. ದಂಡವನ್ನು ವಿಧಿಸಿದೆ. ಇಬ್ಬರು ಆರೋಪಿಗಳಿಗೆ ಎರಡುವರೆ ವರ್ಷ ಕಾರಾಗೃಹವಾಸ ಹಾಗೂ ತಲಾ ೨೫ ಸಾವಿರ ರು. ದಂಡವನ್ನು ವಿಧಿಸುವ ಮೂಲಕ ಮಾಸ್ತಿಗೌಡನ ಕೊಲೆ ಪ್ರಕರಣದಲ್ಲಿ ಇದ್ದ ಎಲ್ಲಾ ಆರೋಪಿಗಳಿಗೆ ಶಿಕ್ಷೆಯಾಗಿದೆ.ಜೀವಾವಧಿ ಶಿಕ್ಷೆ:
ತಾಲೂಕಿನ ಯಾಚೇನಹಳ್ಳಿ ಗ್ರಾಮದ ಚೇತನ ಅಲಿಯಾಸ್ ಚೇತು, ಮಂಡ್ಯ ಜಿಲ್ಲೆ ಕೆರಗೋಡು ಹೋಬಳಿಯ ಬಿ.ಹುಸೂರು ಕಾಲೋನಿಯ ಶಿವಮೂರ್ತಿ ಅಲಿಯಾಸ್ ಶಿವು, ಹೊಳೆನರಸೀಪುರ ತಾಲೂಕು ಉಲಿವಾಲ ಗ್ರಾಮದ ಕುಮಾರಸ್ವಾಮಿ ಅಲಿಯಾಸ್ ಚೇತು, ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಆಲದಹಳ್ಳಿ ಗ್ರಾಮದ ರಾಕೇಶ್ ಅಲಿಯಾಸ್ ರಾಖಿ, ಹಾಸನ ತಾಲೂಕು ಸಾಲಗಾಮೆ ಹೋಬಳಿ ಅಣಿಗನ ಹಳ್ಳಿ ಗ್ರಾಮದ ಸುಮಂತ, ಹಾಸನದ ಹೊಯ್ಸಳ ನಗರದ ರಾಹುಲ್ ಅಲಿಯಾಸ್ ಮೊಟ್ಟೆ, ಹಾಸನ ತಾಲೂಕು ಮಂಚಿಗನಹಳ್ಳಿ ಗ್ರಾಮದ ಹೇಮಂತ ಅಲಿಯಾಸ್ ಹರೀಶ, ಮಲ್ಲೇನಹಳ್ಳಿ ಭರತ್ ಅಲಿಯಾಸ್ ಚಿಟ್ಟೆ, ಚನ್ನರಾಯಪಟ್ಟಣ ಕುವೆಂಪು ನಗರದ ರಾಘವೇಂದ್ರ ಅಲಿಯಾಸ್ ರಾಘು ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಎರಡುವರೆ ವರ್ಷ ಶಿಕ್ಷೆ:
ಶ್ರೀರಂಗಪಟ್ಟಣ ತಾಲೂಕು ಹೊಸ ಅನಂದೂರು ಗ್ರಾಮದ ಸಂದೇಶಗೌಡ ಅಲಿಯಾಸ್ ಸಂದೀಪ, ಬೆಂಗಳೂರಿನ ಸದಕುಂಟೆ ಪಾಳ್ಯದ ಗೋಪಿ ಇವರಿಗೆ ಎರಡುವರೆ ವರ್ಷ ಕಾರಾಗೃಹ ಶಿಕ್ಷ ಹಾಗೂ ತಲಾ ೨೫ ಸಾವಿರ ರು. ದಂಡವನ್ನು ನ್ಯಾಯಾಲಯ ವಿಧಿಸಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಎಲ್ಲಾ ೯ ಮಂದಿ ಅಪರಾಧಿಗಳನ್ನು ಎರಡು ತಿಂಗಳು ಒಂಟಿಯಾಗಿ ಜೈಲಿನಲ್ಲಿ ಇಡುವಂತೆ ತೀರ್ಪಿನಲ್ಲಿ ಹೇಳಲಾಗಿದೆ, ಕೊಲೆಯಾದ ೧೧ ತಿಂಗಳಲ್ಲಿ ಹಾಗೂ ವಿಚಾರಣೆ ಪ್ರಾರಂಭವಾಗಿ ಕೇವಲ ನಾಲ್ಕು ತಿಂಗಳಲ್ಲಿ ನ್ಯಾಯಾಲಯ ತೀರ್ಪು ನೀಡುವ ಮೂಲಕ ಜಿಲ್ಲೆಯಲ್ಲಿಯೇ ಇಂತಹ ತೀರ್ಪು ನೀಡಿದ ಕೀರ್ತಿಗೆ ಚನ್ನರಾಯಪಟ್ಟಣದ ೪ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪಾತ್ರವಾಗಿದೆ.ಘಟನೆ ವಿವರ:
ಚೇತು, ಮಾಸ್ತಿ ನಡುವೆ ವೈಮನಸ್ಸಿನ ವಿಷಯವಾಗಿ ಆಗಾಗಾ ಜಗಳವಾಗುತ್ತಿದ್ದು ಎರಡು ಸಲ ಚೇತು ಕಡೆಯವರು ಮಾಸ್ತಿ ಮೇಲೆ ಹಲ್ಲೆಗೆ ಮುಂದಾಗಿದ್ದು, ಮಾಸ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆದರೆ ಜು.೪ ರಂದು ಮಾಸ್ತಿ ತನ್ನ ಮನೆ ಕಟ್ಟುತ್ತಿದ್ದು ಟೈಲ್ಸ್ ತರಲು ಪಟ್ಟಣಕ್ಕೆ ಆಗಮಿಸಿದಾಗ ಚೇತು ಕಡೆಯ ಹುಡುಗರು ಮಾಸ್ತಿ ಮೇಲೆ ದಾಳಿ ಮಾಡಿ ಹಾಡಹಗಲೇ ಹತ್ಯೆ ಮಾಡಿದ್ದರು. ಮಂಡ್ಯ ಶಿವು, ಹೊಳೆನರಸೀಪುರ ತಾಲೂಕಿನ ಉಲಿವಾಲ ಚೇತು, ಹಾಸನ ಸಾಲುಗಾಮೆ ರಾಖಿ ಕೊಲೆ ಮಾಡಿದ ಐದು ದಿವಸದಲ್ಲಿ ನಗರ ಠಾಣೆಗೆ ಆಗಮಿಸಿ ಶರಣಾಗಿದ್ದಾರೆ. ನಗರ ಠಾಣೆ ಪಿಐ ವಸಂತ್ ದೋಷಾರೋಪಣೆ ಸಲ್ಲಿಸಿದ್ದರು, ಡಿವೈಎಸ್‌ಪಿ ರವಿಪ್ರಸಾದ್ ಮೇಲ್ವಿಚಾರಣೆ ನಡೆಸಿದ್ದರು.