ಲಕ್ಷ್ಮೇಶ್ವರ: ಹಬ್ಬ ಹರಿದಿನಗಳಲ್ಲಿ ನಮ್ಮ ದೇಶದ ಸಾಂಸ್ಕೃತಿಕ ವೈಭವವನ್ನು ಕಾಣಬಹುದು. ನಮ್ಮ ದೇವಾಲಯಗಳು ನಮ್ಮ ಒಗ್ಗಟ್ಟಿಗೆ ಕಾರಣವಾಗಿದೆ ಎಂದು ಕನ್ಹೇರಿಮಠದ ಕಾಡಸಿದ್ದೇಶ್ವರ ಮಹಾಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಎಂದು ಹೇಳಿದರು.
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ದೀಪ ಸಮಾಜದ ಕತ್ತಲೆಯನ್ನು ಹೊಡೆದೊಡಿಸಿದರೆ, ಜ್ಞಾನದ ದೀಪವನ್ನು ಹಚ್ಚುವ ಮೂಲಕ ಸಮಾಜಕ್ಕೆ ಬೆಳಕು ನೀಡುವ ಕಾರ್ಯವನ್ನು ಹಬ್ಬ ಹರಿದಿನಗಳು ಮಾಡಬೇಕು. ನಮ್ಮ ಮಾತುಗಳು ಪ್ರೀತಿಯ ದ್ಯೋತಕವಾಗಬೇಕು. ನಮ್ಮ ದೇಶದ ಆಂತರಿಕ ಶೈಕ್ಷಣಿಕ ವ್ಯವಸ್ಥೆ ಇಂದು ಹಾಳಾಗಿ ಹೋಗಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಶಿಕ್ಷಣದ ಅವಶ್ಯಕತೆ ಇದೆ. ನಮ್ಮ ಪುರಾತನ ಸಂಸ್ಕೃತಿಯನ್ನು ಮರೆತಿದ್ದೇವೆ. ಹಬ್ಬ ಹರಿದಿನಗಳಲ್ಲಿ ಬಹು ದೊಡ್ಡ ಸಂಸ್ಕಾರ ಬಿತ್ತುವ ಕಾರ್ಯ ನಡೆಯಬೇಕು. ಪರಸ್ಪರರನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದು ಹೇಳಿದರು.
ಹಬ್ಬಗಳು ದೇಶದ ಇತಿಹಾಸ ಹಾಗೂ ಸಂಸ್ಕೃತಿಯ ಪಾಠವನ್ನು ತಿಳಿಸಿಕೊಡುತ್ತಿದ್ದವು. ನಮ್ಮ ಸಂಸ್ಕೃತಿಯನ್ನು, ಹಬ್ಬಗಳನ್ನು ಸರಿಯಾಗಿ ತಿಳಿದುಕೊಳ್ಳದ ಮೂರ್ಖರು ಟೀಕೆ ಮಾಡುತ್ತಿದ್ದಾರೆ. ದೇವಸ್ಥಾನಗಳು ನಮ್ಮ ಊರಿನ ಬೆಳವಣಿಗೆ ಹಾಗೂ ಉದ್ಯೋಗ ನೀಡುವ ಕಾರ್ಯ ಮಾಡುತ್ತಿದ್ದವು. ಅವು ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಬೆಳವಣಿಗೆಗೆ ಕಾರಣವಾಗಿವೆ. ದೇವಾಲಯಗಳು ಜಾತಿ-ಬೇಧ ತೊಡೆದುಹಾಕುವ ಕಾರ್ಯ ಮಾಡುತ್ತವೆ. ಕಲಾವಿದರಿಗೆ, ಸಾಹಿತಿಗಳಿಗೆ, ಸಾಂಸ್ಕೃತಿಕ ರಾಯಭಾರಿಗಳಿಗೆ ದೇವಾಲಯ ಆಶ್ರಯವಾಗಿವೆ. ಮುರಿದು ಮನಸ್ಸುಗಳನ್ನು ಹಬ್ಬ ಹರಿದಿನಗಳು ಒಂದು ಮಾಡುತ್ತವೆ. ಭಾರತವನ್ನು ಹೊರತುಪಡಿಸಿ ಜಗತ್ತಿನ ಯಾವ ದೇಶದಲ್ಲಿ ಹಬ್ಬಗಳು ಸಮಾಜ ಕಟ್ಟುವ ಕಾರ್ಯ ಮಾಡುವುದಿಲ್ಲ ಎಂದು ತಿಳಿಸಿದರು.ರೈತರು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಗೋವುಗಳು ಸಾಕಬೇಕು. ಗೋವಿನ ಹಾಲು ಹಾಗೂ ಅದರಿಂದ ದೊರೆಯುವ ಉತ್ಪನ್ನಗಳು ಅನೇಕ ರೋಗಿಗಳಿಗೆ ರಾಮಬಾಣ ಎಂದು ಹೇಳಿದರು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಗಂಗಣ್ಣ ಮಹಾಂತಶೆಟ್ಟರ ಹಾಗೂ ಡಿ.ಆರ್. ಪಾಟೀಲ ಮಾತನಾಡಿದರು.ಈ ವೇಳೆ ಮುಕ್ತಿ ಮಂದಿರದ ವಿಮಲ ರೇಣುಕ ವೀರ ಮುಕ್ತಿಮುನಿ ಮಹಾಸ್ವಾಮಿಗಳು, ಪುರಸಭೆಯ
ಅಧ್ಯಕ್ಷ ಯಲ್ಲವ್ವ ದುರಗಣ್ಣವರ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ. ಹನುಮ ಹಳ್ಳಿಯ ಸಿದ್ದಲಿಂಗ ಸ್ವಾಮೀಜಿಗಳು, ಶಿಗ್ಲಿಯ ಬಸವ ಸ್ವಾಮಿಗಳು ಇದ್ದರು. ಪ್ರಾಸ್ತಾವಿಕವಾಗಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ನಮ್ಮ ಪರಂಪರೆ, ಸಂಸ್ಕೃತಿಯನ್ನು ಯಾರೂ ಮರೆಯಬಾರದು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವಕಾರ್ಯವನ್ನು ಕನ್ಹೇರಿಮಠದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಈ ವೇಳೆ ಪಟ್ಟಣದ ಆದಿ ಕುಟುಂಬದವರು ಕನ್ಹೇರಿಮಠಕ್ಕೆ ಗೋವನ್ನು ದಾನವಾಗಿ ನೀಡಿದರು. ಶಂಕರ್ ಬಾಳಿಕಾಯಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.