ಸಂಸ್ಕಾರ, ಅತಿಥಿ ಸತ್ಕಾರ ಕೆಎಸ್ಈ ಕಟುಂಬದಲ್ಲಿದೆ

KannadaprabhaNewsNetwork | Published : Mar 23, 2025 1:35 AM

ಸಾರಾಂಶ

ಶಿವಮೊಗ್ಗ: ದೇವರ ಪೂಜೆ-ಪುನಸ್ಕಾರ, ಸಂಸ್ಕಾರ, ಅತಿಥಿ ಸತ್ಕಾರ ಎಲ್ಲವೂ ಕೆ.ಎಸ್.ಈಶ್ವರಪ್ಪ ಅವರ ಕಟುಂಬದಲ್ಲಿದೆ. ಈ ಕುಟುಂಬ ಆದರ್ಶ ಕುಟುಂಬ ಎಂದು ಬೆಕ್ಕಿನ ಕಲ್ಮಠದ ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶಿವಮೊಗ್ಗ: ದೇವರ ಪೂಜೆ-ಪುನಸ್ಕಾರ, ಸಂಸ್ಕಾರ, ಅತಿಥಿ ಸತ್ಕಾರ ಎಲ್ಲವೂ ಕೆ.ಎಸ್.ಈಶ್ವರಪ್ಪ ಅವರ ಕಟುಂಬದಲ್ಲಿದೆ. ಈ ಕುಟುಂಬ ಆದರ್ಶ ಕುಟುಂಬ ಎಂದು ಬೆಕ್ಕಿನ ಕಲ್ಮಠದ ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ಅವರು ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಶನಿವಾರ ಯುವ ಮುಖಂಡ ಕೆ.ಈ.ಕಾಂತೇಶ್ ಅವರ 45ನೇ ಜನ್ಮದಿನದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕಾಂತೇಶ್ ಗೆಳೆಯರ ಬಳಗದಿಂದ ’ಶುಭಾಶೀರ್ವಾದ’ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ಶ್ರೀಗಳ ಪಾದಪೂಜೆ ಮತ್ತು 50 ವರ್ಷ ವೈವಾಹಿಕ ಜೀವನ ಪೂರೈಸಿದ ಹಿರಿಯ ದಂಪತಿಗಳಿಂದ ಕೆ.ಈ.ಕಾಂತೇಶ್ ಅವರಿಗೆ ಶುಭಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂದರ್ಭವನ್ನು ನೋಡಿದಾಗ ಮಹಾರಾಜರ ಪಟ್ಟಾಭಿಷೇಕ ನೆನಪಾಗುತ್ತದೆ ಎಂದರು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಮಾತನಾಡಿ, ಕೆ.ಎಸ್.ಈಶ್ವರಪ್ಪ ಅವರು ಗೆಲುವು ಸೋಲುಗಳನ್ನು ಅನುಭವಿಸಿ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಒಂದು ಮಾವಿನ ಹಣ್ಣು ಸಮೃದ್ಧ ಹಣ್ಣುಗಳಿಂದ ಕಂಗೊಳಿಸುತ್ತಿದ್ದರೆ. ಅದನ್ನು ನೋಡಿದ ಮನುಷ್ಯ ಪದೇ ಪದೇ ಕಲ್ಲು ಹೊಡೆದು ಹಣ್ಣು ಪಡೆದುಕೊಳ್ಳುತ್ತಿರುತ್ತಾನೆ. ಹಾಗೆಯೇ ಎಲ್ಲಿ ಒಳ್ಳೆಯತನ ಇರುತ್ತದೆಯೋ ಅಲ್ಲಿ ಪೆಟ್ಟು ಬೀಳುವುದು ಸಹಜ. ಅದನ್ನು ಎದುರಿಸುವ ನಾವು ಮುಂದೆ ಬೆಳೆಯಬೇಕು ಎಂದು ಹೇಳಿದರು.

ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕೆ.ಎಸ್.ಈಶ್ವರಪ್ಪ ಅವರ ಯಾವುದೇ ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ. ಕೆ.ಎಸ್.ಈಶ್ವರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದ ವೇಳೆ ಮಠಗಳಿಗೆ ಕಾಯಕಲ್ಪ ಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ಅವರು ನೆನೆಪುಳಿಯುವ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನೂ ಒದಗಿಸುವ ಕಾರ್ಯಕ್ರಮ ಮಾಡಿದ್ದಾರೆ ಎಂದರು.ಚಿಕ್ಕಮಗಳೂರು ಬಸವ ತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಡಾ.ಶ್ರೀಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಕಾಂತೇಶ್ ಹುಟ್ಟುಹಬ್ಬ ಕೇವಲ ನೆಪ ಮಾತ್ರ. ಎಲ್ಲಾ ಹಿರಿಯರ ಆಶೀರ್ವಾದ ಪಡೆಯುವುದು ಬಹಳ ವಿಶೇಷವಾದ ಕಾರ್ಯಕ್ರಮ. ೫೦ ವರ್ಷ ಪೂರೈಸಿದ ಹಿರಿಯ ದಂಪತಿಗಳಿಗೆ ಗೌರವಿಸಿದ್ದಾರೆ. ತಂದೆ ಹಾದಿಯಲ್ಲಿ ಹೋಗುತ್ತಿರುವ ಕಾಂತೇಶ್ ಅವರು ತಂದೆಗೆ ತಕ್ಕ ಮಗ ಎಂದು ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಚೇತನ್ ಹಾಗೂ ಪ್ರಾಸ್ತಾವಿಕ ಮಾತನಾಡಿದ ಮಹಾಲಿಂಗಯ್ಯ ಶಾಸ್ತ್ರಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ 45ರ ಸಂಭ್ರಮದಲ್ಲಿರುವ ಕೆ.ಈ.ಕಾಂತೇಶ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಕೆ.ಈ.ಕಾಂತೇಶ್ ದಂಪತಿಗಳು ಶ್ರೀಗಳಿಗೆ ಪಾದ ಪೂಜೆ ನೆರವೇರಿಸಿದರು. 50 ವರ್ಷ ಪೂರೈಸಿದ ಹಿರಿಯರಿಂದ ಶುಭಾಶೀರ್ವಾದ ಪಡೆದರು. ರಾಷ್ಟ್ರೀಯ ಸ್ವಯಂಸೇವಕರಾದ ಲೋಕೇಶ್, ಚೇತನ್ ಅವರಿಗೆ ಗೌರವಿಸಲಾಯಿತು.ದಾಸೋಹ ಟ್ರಸ್ಟ್ ವತಿಯಿಂದ ಪುಸ್ತಕ ಬಿಡುಗಡೆ ನೆರವೇರಿತು. ಆಗಮಿಸಿದ ಎಲ್ಲ ದಂಪತಿಗಳಿಗೆ ಪುಸ್ತಕ ಮತ್ತು ಶ್ರೀ ರಾಮ ರಕ್ಷೆಯನ್ನು ವಿತರಿಸಲಾಯಿತು.ವೇದಿಕೆಯಲ್ಲಿ ಹೊಸದುರ್ಗ ಶಾಖಾ ಮಠದ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಹಿರೇಮಠ ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಕುಮಾರಿ ಸಂಸ್ಥೆಯ ಬ್ರಹ್ಮಕುಮಾರಿ ಅನಸೂಯ ಅಕ್ಕನವರು, ಆರ್.ಎಸ್.ಎಸ್.ನ ವಿಭಾಗ ಕಾರ್ಯವಾಹಕ ಗಿರೀಶ್ ಕಾರಂತ್, ಚೇತನ್.ಜಿ, ಲೋಕೇಶ್, ಕೆ.ಎಸ್.ಈಶ್ವರಪ್ಪ ಅವರ ಕುಟುಂಬದವರು ಹಾಗೂ ಗುರು ಹಿರಿಯರು, 50 ವರ್ಷ ಪೂರೈಸಿದ ದಂಪತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ.ಈ.ಕಾಂತೇಶ್ ಪುತ್ರಿ ಸಿಂಧು ಪ್ರಾರ್ಥನೆ ಮಾಡಿದರು. ಈ.ವಿಶ್ವಾಸ್ ಸ್ವಾಗತಿಸಿದರು.

ಕಾಂತೇಶ್ ತಂದೆಯ ರೀತಿಯಲ್ಲಿಯೇ

ಮುಂದುವರೆಯಲಿ: ಶಂಕರ ಭಾರತಿ ಶ್ರೀ

ಸೃಷ್ಟಿಕರ್ತರಿಗೆ ಮಾತ್ರ ದೇವರು ಎನ್ನುವುದಿಲ್ಲ. ನಾವು ಯಾರನ್ನು ಬೇಕಾದರೂ ಪೂಜಿಸಬೇಕು. ಯಾರು ಪೂಜ್ಯರು ಯಾರು ಅಪೂಜ್ಯರು ಎಂದು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಯಾರು ಗೌರವನ್ನು ಪಡೆದುಕೊಂಡಿರುತ್ತಾರೋ ಅವರನ್ನು ಅನುಸರಿಸುವುದು ಸಮಾಜದ ಸಹಜ ಸ್ವಭಾವ. ನಾಯಕರಾದ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್ ಕೂಡಾ ಅವರ ತಂದೆಯ ರೀತಿಯಲ್ಲಿಯೇ ಮುಂದುವರೆಯಲಿ ಎಂದು ಕೂಡ್ಲಿ ಶ್ರೀ ಶೃಂಗೇರಿ ಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಆಶಿಸಿದರು.

Share this article