ಹಾವೇರಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಒಂದು ಪುಸ್ತಕ ಅವರ ಜೀವನವನ್ನು ರೂಪಿಸಬಹುದು. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದರೆ ಭವಿಷ್ಯವನ್ನು ಉಜ್ವಲಗೊಳಿಸಬಹುದು. ಮೊಬೈಲ್ ತಲೆ ಎತ್ತಲು ಬಿಡಲ್ಲ, ಪುಸ್ತಕ ತಲೆತಗ್ಗಿಸಲು ಬಿಡಲ್ಲ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ಸರ್ಕಾರಗಳು ಅಕ್ಷರ ದಾಸೋಹ ಆರಂಭಿಸುವ ಮುನ್ನ ಮಠಗಳು ತ್ರಿವಿಧ ದಾಸೋಹದ ಮೂಲಕ ಸೇವೆ ನೀಡಿದ ಶ್ರೇಯಸ್ಸು ನಮ್ಮ ನಾಡಿನಲ್ಲಿದೆ. ಈ ಪರಂಪರೆಯ ಮುಂದುವರೆದ ಭಾಗವಾಗಿ ಹಾವೇರಿ ಹುಕ್ಕೇರಿಮಠದ ಪ್ರಸಾದ ನಿಲಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದ ಶ್ರೀಮಠದ ತ್ಯಾಗ ಮತ್ತು ಸೇವೆಯ ಸಂಗಮವಾಗಿರುವ ಸದಾಶಿವ ಸ್ವಾಮೀಜಿಯವರ ರೂಪದಲ್ಲಿ ಶಿವಬಸವ ಹಾಗೂ ಶಿವಲಿಂಗ ಸ್ವಾಮೀಜಿಯವರು ದಾಸೋಹ ಪರಂಪರೆಗೆ ಅನನ್ಯ ಕೊಡುಗೆ ನೀಡಿರುವರು. ಇಂಥ ಸಂದರ್ಭದಲ್ಲಿ ಮಕ್ಕಳ ಗ್ರಂಥಾಲಯ ಉದ್ಘಾಟನೆಗೊಂಡು ಅರಿವಿನ ಮನೆಯಾಗಿ ಬೆಳಗಲಿ ಎಂದರು.ವಿದ್ಯಾರ್ಥಿಗಳ ಸಮುದಾಯ ಭವನ ಉದ್ಘಾಟಿಸಿದ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ದೇಶದ ಪಾರಂಪರಿಕ ಬಲವೇ ಭಕ್ತಿ. ದೇವರು ಮತ್ತು ಭಕ್ತರ ಮಧ್ಯೆ ಕರಾರುರಹಿತ ಸಂಬಂಧದಲ್ಲಿ ಅದು ಕಾಣುತ್ತದೆ. ಭಯ ಮತ್ತು ಭಕ್ತಿ ಏನೆಂಬುದನ್ನು ಗುರುಗಳು ತಿಳಿಸಿಕೊಡುವರು. ನಮ್ಮ ದೇಶದಲ್ಲಿ ನಡೆದ ಭಕ್ತಿ ಚಳವಳಿ ಹಾಗೂ ವೈಚಾರಿಕ ಚಳವಳಿಗಳು ಕಾಲಕಾಲಕ್ಕೂ ಅಂದಿನ ಸವಾಲುಗಳನ್ನು ಎದುರಿಸಿವೆ. ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ ಎಂಬುದನ್ನು ತೋರಿಸಿವೆ. ಎಲ್ಲಿ ದೈವ ಇದೆಯೋ ಅಲ್ಲಿ ದೇವರು ಇದ್ದಾನೆ ಎಂಬುದನ್ನು ಹುಕ್ಕೇರಿಮಠದ ಜಾತ್ರಾ ಮಹೋತ್ಸವದಲ್ಲಿ ಕಾಣಬಹುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಸಮಾಜದ ಪರಿವರ್ತನೆ ಹಾಗೂ ಜಾಗೃತಿಗೆ ಶ್ರಮಿಸಿದ ಸದಾಶಿವ ಸ್ವಾಮೀಜಿಯವರು ಬಡ ಮಕ್ಕಳಿಗಾಗಿ ಬೆಳ್ಳಿ ತುಲಾಭಾರ ನಡೆಯುತ್ತಿರುವುದು ಅಭಿಮಾನದ ಸಂಗತಿ. ಆ ಹಣದಿಂದ ಶಿಕ್ಷಣಕ್ಕಾಗಿ ಬಳಸಿಕೊಂಡು ಸಿದ್ಧಗಂಗಾ ಹಾಗೂ ಆದಿಚುಂಚನಗಿರಿ ಮಠಗಳ ಪ್ರೇರಣೆ ಪಡೆದು ಮುನ್ನಡೆಯಲಿ. ಶ್ರೀಮಠದ ಶಕ್ತಿಯಿಂದ ಭಕ್ತರು ಬರುತ್ತಾರೆ. ಭಕ್ತರ ಏಳ್ಗೆಯನ್ನು ಮುಂದುವರೆಸಲಿ ಎಂದರು.ಕಾರ್ಯಕ್ರಮದಲ್ಲಿ ಹಂದಿಗುಂದ ಸಿದ್ದೇಶ್ವರಮಠದ ಶಿವಾನಂದ ಸ್ವಾಮೀಜಿ, ನರಸೀಪುರದ ಅಂಬಿಗರ ಚೌಡಯ್ಯಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಮುಖಂಡರಾದ ಎಸ್.ಆರ್. ಪಾಟೀಲ, ಕೊಟ್ರೇಶಪ್ಪ ಬಸೇಗಣ್ಣಿ ಇದ್ದರು. ಇದೇ ಸಂದರ್ಭದಲ್ಲಿ ಕಾನೂನು ಆಯೋಗದ ಅಧ್ಯಕ್ಷ ಅಂಶೋಕ ಹಿಂಚಿಗೇರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸರಿಗಮಪ ಖ್ಯಾತಿಯ ಶಿವಾನಿ ಹಿರೇಮಠ ಅವರಿಂದ ಸಂಗೀತ ಸೇವೆ ಜರುಗಿತು. ರಾಜಣ್ಣ ಮಾಗನೂರು ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.ಸೇವೆ, ಭಕ್ತಿ ಮತ್ತು ಜ್ಞಾನ ಮುಕ್ತಿಯಡೆಗೆ ಸಾಗಿಸುತ್ತದೆ. ಸೇವೆಯ ಧರ್ಮವನ್ನು ಮಠ ಹೇಳಿಕೊಡುತ್ತದೆ. ವ್ಯಸನ ಬಿಡುವುದರಿಂದ ಕುಟುಂಬಗಳು ಸುಧಾರಿಸುತ್ತವೆ. ಜೊತೆಗೆ ಮನೆ ಮತ್ತು ದೇಶವೂ ಕೂಡ ಸುಧಾರಿಸುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಬಸವಣ್ಣನವರ ಸಂಕಲ್ಪದಂತೆ ಶೋಷಿತ ಸಮುದಾಯಗಳಿಗೆ ಆದ್ಯತೆ ನೀಡಲು ಮಠಗಳು ಶ್ರಮಿಸಿವೆ. ವೀರಶೈವ-ಲಿಂಗಾಯತ ಮಠಗಳು ತ್ರಿವಿಧ ದಾಸೋಹಕ್ಕೆ ಒತ್ತು ನೀಡಿದ ಪರಿಣಾಮ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಸಮಾನತೆಯ ಸಮಾಜವನ್ನು ಕಟ್ಟಲು ಕೈಜೋಡಿಸೋಣ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಪೀಠದ ಬಸವಮೂರ್ತಿ ಸ್ವಾಮೀಜಿ ಹೇಳಿದರು.