ಗಜೇಂದ್ರಗಡ: ಪ್ರತಿಯೊಂದು ಬರಹವೂ ಸಮಾಜ ಕಟ್ಟುವಂತಹ ಬರಹವಾಗಬೇಕೇ ಹೊರತು ಸಮಾಜ ಒಡೆಯುವ ಬರಹ ಆಗಬಾರದು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬರಹಗಳಾಗಬೇಕು. ಸಾಹಿತ್ಯಕ್ಕೆ ವಿಶೇಷವಾದ ಶಕ್ತಿಯಿದ್ದು, ಯಾವುದೇ ಹೋರಾಟ, ವಿಚಾರ ಹಾಗೂ ಕ್ರಾಂತಿ ಇರಲಿ ಸಾಹಿತ್ಯದಿಂದ ನಡೆದು ಬಂದಿವೆ. ಪಾಲಕರು ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಇತರ ಕಾರ್ಯಕ್ರಮಗಳಿಗೆ ಉತ್ಸಾಹದಿಂದ ತೆರಳುತ್ತಾರೆಯೇ ಹೊರತು ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಚರ್ಚೆಗಳಿಗೆ, ಕನ್ನಡ ಸಾಹಿತ್ಯ ಪರಿಷತ್ ಸೇರಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳಿಗೆ ತೆರಳುವ ಆಸಕ್ತಿ ತೋರುವುದಿಲ್ಲ. ಶಿಕ್ಷಣದ ಜತೆಗೆ ಸಾಹಿತ್ಯಕ್ಕೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಸ್ಯೆಯನ್ನೇ ಮೊದಲು ಮಾಡಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರತಿಜ್ಞೆ ಮಾಡಿ. ದೇಶದ ಉತ್ತಮ ಪ್ರಜೆಯನ್ನಾಗಿಸಲು ಶಿಕ್ಷಣ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಒಲವು ಮೂಡಿಸಲು ಮಕ್ಕಳಿಗೆ ಪ್ರೋತ್ಸಾಹವನ್ನು ಪಾಲಕರು ನೀಡಬೇಕು ಎಂದು ಹೇಳಿದರು.
ದೇಶ, ಸಮಾಜ ಬೆಸೆಯಲು, ಪೂರಕವಾಗಿ ಬರೆಯಲು ಮತ್ತು ಮಾತನಾಡಲು ಸಂವಿಧಾನ ಅಧಿಕಾರ ನೀಡಿದೆ. ಆದರೆ ಸಮಾಜ ಹಾಗೂ ದೇಶಕ್ಕೆ ಮಾರಕವಾಗಿ, ವಿರುದ್ಧವಾಗಿ ಮತ್ತು ಸಮಸ್ಯೆ ಸೃಷ್ಟಿಸಲು ಎಲ್ಲಿಯೂ ಸಂವಿಧಾನ ಅವಕಾಶ ನೀಡಿಲ್ಲ. ದೇಶಕ್ಕೆ ಪೂರಕವಾಗಿ ಮಾತನಾಡುವವರು ಹಾಗೂ ಪೂರಕವಾಗಿ ಕೆಲಸ ಮಾಡುವವರು ನಿಜವಾದ ದೇಶಪ್ರೇಮಿಗಳು ಎಂದರು.ಪ್ರಶಸ್ತಿ ಪುರಸ್ಕೃತ ಡಾ. ಐ.ಜೆ. ಮ್ಯಾಗೇರಿ ಮಾತನಾಡಿ, ಭಾರತದಲ್ಲಿನ ಸೌಹಾರ್ದತೆ ಜಗತ್ತಿನಲ್ಲಿ ಎಲ್ಲಿಯೂ ಕಾಣಲು ಸಿಗಲ್ಲ. ಬಡತನದ ರೋಗಕ್ಕೆ ಮದ್ದು ಎಂದರೆ ಅಕ್ಷರ ಎಂದರು.
ಎ.ಕೆ. ಕುಕ್ಕಿಲ ಮಾತನಾಡಿ, ಮುಸ್ಲಿಂ ಲೇಖಕರ ಸಂಘವು ಕಳೆದ ನಾಲ್ಕು ದಶಕಗಳಿಂದ ಕವಿಗೋಷ್ಠಿ, ಪ್ರಬಂಧ ಸೇರಿ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಅನೇಕ ಸಾಹಿತಿಗಳನ್ನು ಗುರುತಿಸಿದೆ ಎಂದರು.
ಕನ್ನಡ ಮತ್ತು ಉರ್ದು ಕವಿಗೋಷ್ಠಿ ನಡೆದ ಬಳಿಕ ಗಜೇಂದ್ರಗಡ ಸೇರಿ ಸುತ್ತಮತ್ತಲಿನ ವಿವಿಧ ಸಂಘಟನೆ ಹಾಗೂ ಸಮುದಾಯಗಳಿಂದ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸನ್ಮಾನಿಸಿದರು.