ಕಾಂಗ್ರೆಸ್ ಪಕ್ಷದ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ

KannadaprabhaNewsNetwork |  
Published : Jun 25, 2025, 01:18 AM IST
ಪೊಟೋ: 24ಎಸ್‌ಎಂಜಿಕೆಪಿ07ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಯುವ ಕಾಂಗ್ರೆಸ್ ಕಾರ್ಯಕರ್ತರ ಕೈಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯವಿದೆ ಎಂದು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.

ಶಿವಮೊಗ್ಗ: ಯುವ ಕಾಂಗ್ರೆಸ್ ಕಾರ್ಯಕರ್ತರ ಕೈಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯವಿದೆ ಎಂದು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್‌ಗಾಂಧಿಯವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆ ಮತ್ತು ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯ ಮೂಲಕ ಕಾಂಗ್ರೆಸ್ ನಿಚ್ಚಳ ಗೆಲುವನ್ನು ಸಾಧಿಸಲು ಸಹಕಾರಿಯಾದರೂ ಯುವ ಕಾಂಗ್ರೆಸ್ ಕಾರ್ಯಕರ್ತರ ಯೋಗದಾನವೂ ಅಷ್ಟೇ ಇದೆ ಎಂದ ಅವರು, ಬಡವರ ಕಲ್ಯಾಣಕ್ಕಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಕರೆ ನೀಡಿದರು.

ಸ್ವಪ್ರಯತ್ನ ಇಲ್ಲದಿದ್ದರೆ ಉನ್ನತ ಸ್ಥಾನಕ್ಕೇರುವುದು ಕಷ್ಟಸಾಧ್ಯ. ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದವರು ಅನೇಕರು ಉನ್ನತ ಸ್ಥಾನಕ್ಕೇರಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಂಎಲ್‌ಎ., ಎಂಎಲ್‌ಸಿ, ಮಂತ್ರಿ ಆಗುವುದು ಬಹಳ ಸುಲಭ. ಆದರೆ ನೇತಾರನಾಗುವುದು ಕಷ್ಟದ ಕೆಲಸ ಎಂದರು.

ರಾಜಕೀಯ ಇಚ್ಛಾಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತ ಜನರ ಮಧ್ಯೆ ಇರಬೇಕು. ಅವರ ಕಷ್ಟ-ಕಾರ್ಪಣ್ಯಗಳನ್ನು ಆಲಿಸಿ ಸರ್ಕಾರದ ಮೂಲಕ ಪರಿಹಾರ ಕೊಡಿಸುವ ಕೆಲಸವನ್ನು ಮಾಡಬೇಕು ಎಂದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಾರ್ಯಕರ್ತ ತೆಗೆದುಕೊಳ್ಳಬೇಕು ಎಂದರು.

ಪ್ರತಿ 15 ದಿನಕ್ಕೊಮ್ಮೆ ಕಾರ್ಯಕರ್ತರ ಸಭೆ ನಡೆಸಿ, ಜನರ ದುಃಖ-ದುಮ್ಮಾನಗಳ ಬಗ್ಗೆ ಪರಾಮರ್ಶಿಸಬೇಕು. ಹಗಲು-ರಾತ್ರಿ ಮತದಾರರ ಕಲ್ಯಾಣಕ್ಕೆ ಶ್ರಮಿಸಬೇಕು. ಪಕ್ಷದ ಸಂಘಟನೆಯ ಬಗ್ಗೆ ಚರ್ಚಿಸಬೇಕು. ಇದನ್ನು ಪ್ರತಿ ಬ್ಲಾಕ್, ತಾಲೂಕು, ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ನಡೆಸಬೇಕು. ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯಾಚರಣೆ ಹಮ್ಮಿಕೊಳ್ಳುವುದರ ಮೂಲಕ ಪಕ್ಷದ ವರ್ಚಸ್ಸನ್ನು ಇಮ್ಮಡಿಗೊಳಿಸಬೇಕು. ಗೆಲ್ಲುವ ಸಾಮರ್ಥ್ಯವಿರುವ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಲ್ಲಿ ವಿನಂತಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಬೆಳೆಯಲು ಅವಕಾಶ ಇರುವ ವೇದಿಕೆ ಯುವ ಕಾಂಗ್ರೆಸ್ ಆಗಿದೆ. ದಿವಂಗತ ಪ್ರಧಾನಿ ರಾಜೀವ್‌ಗಾಂಧಿಯವರು ಪ್ರಜಾ ಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು 18 ವರ್ಷಕ್ಕೆ ಮತದಾನ ಮಾಡುವ ಅಧಿಕಾರವನ್ನು ನೀಡಿದರು. ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುವುದರ ಮೂಲಕ ನಿಮ್ಮ ಅಸ್ಥಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಜನರ ಜೊತೆಗೆ ಇದ್ದಾಗ ಮಾತ್ರ ನಾಯಕತ್ವ ಪಡೆಯಲು ಸಾಧ್ಯ. ಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಗ್ರಾಪಂಯಿಂದ ಅಧಿಕಾರದ ಮೆಟ್ಟಿಲು ಹತ್ತಬೇಕು. ಕಾಂಗ್ರೆಸ್ಸನ್ನು ಶಕ್ತಿಯುತವಾಗಿಸುವ ಕೆಲಸ ಯುವ ಕಾಂಗ್ರೆಸ್‌ನಿಂದ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಬಲ್ಕೀಶ್‌ಬಾನು, ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ, ರಾಜ್ಯ ಉಪಾಧ್ಯಕ್ಷೆ ದಿವ್ಯಾ, ಪ್ರಮುಖರಾದ ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಮಧುಸೂದನ, ಶಿವಣ್ಣ, ಹರ್ಷಿತ್‌ಗೌಡ, ಅಕ್ಷಯ್ ಪಾಟೀಲ್, ಅಭಿಷೇಕ, ಜಿಲ್ಲಾ ಉಪಾಧ್ಯಕ್ಷ ಗಿರೀಶ್, ಚೇತನ್‌ಗೌಡ, ವಿಜಯಲಕ್ಷ್ಮೀ ಪಾಟೀಲ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಯೋಗೇಶ್ವರ್‌
ಕೋಗಿಲು ಕ್ರಾಸ್‌ ಸಂತ್ರಸ್ತರಲ್ಲಿ 26 ಮಂದಿ ಬಳಿಯಷ್ಟೇ ಸೂಕ್ತ ದಾಖಲೆ