ಆನವಟ್ಟಿ: ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಿಮ್ಮಾಪುರ ಗ್ರಾಮದ ಶಿಬಾರದಿಂದ ರಾಜ್ಯ ಹೆದ್ದಾರಿ ವರೆಗಿನ ರಸ್ತೆ ತುಂಬ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ಕಷ್ಟಸಾಧ್ಯವಾಗಿದೆ, ಕೂಡಲೇ ಗುಂಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿ ತಿಮ್ಮಾಪುರ ಗ್ರಾಮದ ನಿವಾಸಿಗಳು ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ರಸ್ತೆಯಲ್ಲಿ ಶಾಲಾ –ಕಾಲೇಜು ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ಹೋಗುವವರು, ಗೂಡ್ಸ್ ವಾಹನ, ದ್ವಿಚಕ್ರ ವಾಹನ, ಆಟೋಗಳಲ್ಲಿ ಸಂಚಾರ ಮಾಡಲು ವಾಹನ ಸವಾರರು ಜೀವಭಯದಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪಾದಚಾರಿಗಳು, ಸೈಕಲ್, ದ್ವಿಚಕ್ರ ವಾಹನದಲ್ಲಿ ಹೋಗುವವರು ಈ ರಸ್ತೆಯಲ್ಲಿ ಬಿದ್ದು, ಎದ್ದು ಹೋಗುತ್ತಿದ್ದಾರೆ. ಸಾಕಾಷ್ಟು ಅಪಘಾತಗಳು ಸಂಭವಿಸಿವೆ. ನಿತ್ಯ ಪರದಾಡಿಕೊಂಡು ತಮ್ಮ ಕೆಲಸ ಕಾರ್ಯಗಳಿಗೆ ಆನವಟ್ಟಿಗೆ ಹೋಗುವ ತಿಮ್ಮಾಪುರ ನಿವಾಸಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತಕ್ಷಣವೇ ಗುಂಡಿಗಳನ್ನು ಮುಚ್ಚಿ, ನಂತರ ಡಾಂಬರು ರಸ್ತೆಯನ್ನು ನಿರ್ಮಿಸಿ ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮದ ನಿವಾಸಿಗಳಾದ ಅಮಿತ್, ಸುಮಂತ್, ನಂದೀಶ್, ಇಬ್ರಾಹಿಂ, ಅರುಣ, ಮಾಲತೇಶ್, ಸಹಿಮ್, ಆದಿತ್ಯ, ವೇಣುಗೋಪಾಲ, ಶಬರೀಶ್, ರಬ್ಬಾನಿ ಇತರರಿದ್ದರು.