ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ

KannadaprabhaNewsNetwork | Published : Mar 27, 2025 1:09 AM

ಸಾರಾಂಶ

ಹೊಸದುರ್ಗ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಬುಧವಾರ ಆಯೋಜಿಸಿದ್ದ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪಕನ್ನಡಪ್ರಭ ವಾರ್ತೆ ಹೊಸದುರ್ಗ:

ದೇಶದ ಭವಿಷ್ಯವನ್ನು ರೂಪಿಸಬೇಕಾದ ಹೊಣೆಗಾರಿಕೆ ಮತ್ತು ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹೊಸದುರ್ಗ ತಾಲೂಕು ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಒಂದು ಪಕ್ಷದ ಕೆಳಗೆ ಕೆಲಸ ಮಾಡುತ್ತಿದ್ದು, ಸಂಘಟನೆಯ ಮೂಲಕ ದೇಶಕ್ಕೆ ವಿಪತ್ತು ಬಂದಾಗ ಎದೆಗುಂದದೆ ಧೈರ್ಯವಾಗಿ ನಿಂತು ರಕ್ಷಣೆ ಮಾಡುವ ಕಾರ್ಯ ಮಾಡಬೇಕು. ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿರುವ ಹಿನ್ನೆಲೆ ಕಳೆದ 2 ತಿಂಗಳ ಹಿಂದೆಯೇ ರಾಜ್ಯ ಸರ್ಕಾರದಿಂದ ಗಾಂಧಿ ಭಾರತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರಂತೆಯೇ, ಹೊಸದುರ್ಗದಲ್ಲಿಯೂ ಎನ್ಎಸ್‌ಯುಐ ವತಿಯಿಂದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.

ನಾವು ಓದುತ್ತಿದ್ದಾಗ ಪಠ್ಯ ಪುಸ್ತಕದಲ್ಲಿ ಗಾಂಧಿ, ನೆಹರು, ಅಂಬೇಡ್ಕರ್ ಮತ್ತು ಇನ್ನಿತರ ಸಾಧಕರ ಜೀವನ ಮತ್ತು ಸಾಧನೆ ಬಗ್ಗೆ ತಿಳಿಸಲಾಗುತ್ತಿತ್ತು. ಇತ್ತೀಚೆಗೆ ಅವರೆಲ್ಲರೂ ಕಾಣೆಯಾಗುತ್ತಿದ್ದಾರೆ. ಗಾಂಧಿ ಎಂದರೆ ಯಾರು? ಅಂಬೇಡ್ಕರ್ ಎಂದರೆ ಯಾರು ಎನ್ನುವಂತಹ ಸ್ಥಿತಿ ಬಂದಿದೆ. ಮಹಾತ್ಮ ಗಾಂಧೀಜಿ ತಂದುಕೊಟ್ಟ ಸ್ವಾತಂತ್ರ್ಯ ಮತ್ತು ಸಂವಿಧಾನ ಬರೆದುಕೊಟ್ಟ ಅಂಬೇಡ್ಕರ್ ರವರನ್ನು ಎಂದಿಗೂ ಮರೆಯುವಂತಿಲ್ಲ. ಸಂವಿಧಾನದ ಆಶಯಗಳನ್ನು ನೆನಪಿಟ್ಟುಕೊಳ್ಳಲೆಂದು ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.

ಪಟ್ಟಣದ ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆಂದು ತಾಲೂಕಿನ ಮೂಲೆ-ಮೂಲೆಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಖಾಸಗಿ ಮತ್ತು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ವಸತಿ ನಿಲಯಗಳಿಂದ ಕಾಲೇಜುಗಳಿಗೆ ತೆರಳಬೇಕಾದರೆ, 2-3 ಕಿಮೀ ಕಾಲ್ನಡಿಗೆಯಲ್ಲಿ ಹೋಗಬೇಕಾದ ಅನಿವಾರ್ಯತೆಯಿದೆ. ಹೊಸದುರ್ಗ ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಹೊಸದುರ್ಗ ಪಟ್ಟಣದಲ್ಲಿ ನಿತ್ಯವೂ ಶಾಲಾ-ಕಾಲೇಜುಗಳ ಸಮಯಕ್ಕೆ ನಗರ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವ ಕುರಿತು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಉಪನ್ಯಾಸ ನೀಡಿದರು. ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವ ಮುಖಂಡ ಬಿ.ಜಿ.ಅರುಣ್, ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ಕಿರಣ್ ಯಾದವ್, ತಾಲೂಕು ಅಧ್ಯಕ್ಷ ಪವನ್ ಕುಮಾರ್, ಉಪಾಧ್ಯಕ್ಷ ಕೆ.ಲೋಹಿತ್, ಪದಾಧಿಕಾರಿಗಳಾದ ಮುದ್ದುರಾಜ್, ಪ್ರದೀಪ್, ಜಮೀರ್, ಮಂಜುನಾಥ್, ಸರ್ಪರಾಜ್, ದಿನೇಶ್, ರೂಪೇಶ್ ಮತ್ತು ಸಿದ್ದೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this article