ಕನ್ನಡಪ್ರಭ ವಾರ್ತೆ ಮಾಗಡಿ
ವಿದ್ಯೆ ಎನ್ನುವುದು ತಪಸ್ಸು. ಯಾವ ವಿದ್ಯಾರ್ಥಿ ಇದನ್ನು ಶ್ರದ್ಧಾಭಕ್ತಿಯಿಂದ ಸ್ವೀಕರಿಸುತ್ತಾನೆಯೋ ಆತನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಶ್ರೀಬಾಲಾಜಿ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ರಂಗನಾಥ್ ಹೇಳಿದರು.ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ವಿದ್ಯಾಚೇತನ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಓದುವ ಇಚ್ಚೆಯಿದ್ದರೂ ನಮಗೆ ಸೌಲಭ್ಯಗಳಿಲ್ಲ ಎಂದು ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸೂಕ್ತಕಾಲದಲ್ಲಿ ಅವರಿಗೆ ಅವಕಾಶಗಳನ್ನು ನೀಡಿದ್ದೇ ಆದರೆ ಅವರೊಳಗಿರುವ ದಿವ್ಯಪ್ರಭೆ ಹೊರಗೆ ಬರುತ್ತದೆ ಎಂದರು.50 ಸಾವಿರ ರು. ಬಹುಮಾನ:ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದು ಕಾಲೇಜು ಮತ್ತು ಮಾಗಡಿ ತಾಲೂಕಿಗೆ ಕೀರ್ತಿ ತಂದ ಕಾವ್ಯಶ್ರೀ ಎಂಬ ವಿದ್ಯಾರ್ಥಿನಿಗೆ ಕಾಲೇಜು ಪ್ರಾಚಾರ್‍ಯ ರವಿಕುಮಾರ್ ಅವರು ಆಕೆಯ ಎರಡೂ ವರ್ಷದ ಶುಲ್ಕವನ್ನು ವಾಪಸ್ ಕೊಡುವುದರ ಜೊತೆಗೆ ಐವತ್ತು ಸಾವಿರ ನಗದು ಬಹುಮಾನವನ್ನು ನೀಡಿ ಸತ್ಕರಿಸಿದರು.ಮಾಗಡಿ ಪಟ್ಟಣದಲ್ಲಿಯೇ ಅತ್ಯಂತ ಕಡಿಮೆ ಶುಲ್ಕವಿರುವ ಕಾಲೇಜಿದು. ಇಲ್ಲಿಗೆ ಬರುವ ಮಕ್ಕಳೆಲ್ಲರಲೂ ರೈತಾಪಿ ಕುಟುಂಬದ ಹಿನ್ಲೆಯಿರುವವರು. ಇಂತಹ ಮಕ್ಕಳು ಓದಿಗೆ ಕಾಲೇಜು ಅಹರ್ನಿಷಿ ಶ್ರಮಿಸಿದ್ದರ ಪ್ರತಿಫಲವನ್ನು ವಿದ್ಯಾರ್ಥಿಗಳು ಫಲಿತಾಂಶದ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ. ಅದಕ್ಕಾಗಿ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಐವತ್ತು ಸಾವಿರ ನಗದು ಬಹುಮಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಹುಲಿಕಟ್ಟೆ ಗ್ರಾಮದ ಎಚ್.ಜಿ. ಚನ್ನಪ್ಪ ಪದವಿಪೂರ್ವ ಕಾಲೇಜಿನ ಪ್ರಾಚಾರ್‍ಯ ಗೋವಿಂದರಾಜ್ ಮಾತನಾಡಿ , ವಿಪರೀತ ಮೊಬೈಲ್ ವೀಕ್ಷಣೆ ವಿದ್ಯಾರ್ಥಿಗಳಿಗೆ ದೊಡ್ಡ ಪಿಡುಗಾಗಿದೆ. ಯಾವುದನ್ನು ನೋಡಬೇಕು ಯಾವುದನ್ನು ನೋಡಬಾರದು ಮತ್ತು ಎಷ್ಟು ಹೊತ್ತು ನೋಡಬೇಕು ಎಂಬ ಯಾವ ತಯಾರಿಯೂ ಇಲ್ಲದೇ ಆಡುವ ಮಕ್ಕಳ ಕೈಗೆ ಗನ್ ಕೊಟ್ಟರೆ ಆಗುವ ಅನಾಹುತದಂತೆ ಮೊಬೈಲ್ ಸ್ವತಃ ವಿದ್ಯಾರ್ಥಿಗಳ ಯೋಚನಾಶಕ್ತಿಯನ್ನೇ ಕಸಿದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜನಪದ ಗಾಯಕ ಕನ್ನಡ ಕುಮಾರ್ ಮಾತನಾಡಿ, ಜನಪದವನ್ನು ಬಿಟ್ಟು ಸಾಹಿತ್ಯ ಎಂದಿಗೂ ಪೂರ್ಣವಾಗಲಾರದು. ಜೀವನದ ಸೊಬಗನ್ನು ಜನಪದ ಬದುಕು ತೆರೆದಿಡುತ್ತೆದೆ. ಅಪ್ಪಟ ದೇಸೀ ಸಂಸ್ಕೃತಿಯನ್ನು ಒಳಗೊಂಡಿರುವ ಈ ಸಂಪ್ರದಾಯವನ್ನು ಆಧುನಿಕತೆಯ ತೆರೆ ಹಾಕಿ ಮರೆಮಾಚಿದರೂ ಅದರ ಸುಗಂಧ ಜಗತ್ತಿನಾದ್ಯಂತ ನಿಧಾನಪವಾಗಿ ಪಸರಿಸುತ್ತಿದೆ. ಪಠ್ಯಗಳಲ್ಲಿ ಜನಪದದ ಕುರಿತಾಗಿ ಅಧ್ಯಯನಕ್ಕೆ ಅನುಕೂಲವಾಗುವಂತೆ ಪಾಠಗಳನ್ನು ಅಳವಡಿಸುವ ಕೆಲಸವನ್ನು ಸರ್ಕಾರಗಳು ಮತ್ತು ಶಿಕ್ಷಣ ಇಲಾಖೆ ಮಾಡಬೇಕಾಗಿದೆ ಎಂದು ಹೇಳಿದರು.ವಿದ್ಯಾಚೇತನ ಕಾಲೇಜಿನಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರ ಜೊತೆಗೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಾವುದೇ ಕೋಚ್ ತರಬೇತಿ ಪಡೆಯದೆಯೂ ದ್ವಿತೀಯ ಸ್ಥಾನ ಪಡೆದ ಅನಿತ ಎಂಬ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದೊಡ್ಡಬಾಣಗೆರೆ ಮಾರಣ್ನ, ಉಪನ್ಯಾಸಕ ಸುನೀಲ್, ರಘು, ಗಾಯತ್ತಿ, ತಿಮ್ಮರಾಜು, ಪ್ರಕಾಶ್, ಪುಷ್ಪ, ಫಾತಿಮ, ಚನ್ನಂಕೇಗೌಡ, ಗಗನ, ಚಂದನ, ರಾಜುಕನಕಪುರ ಭಾಗವಹಿಸಿದ್ದರು.
---8ಕೆಆರ್ ಎಂಎನ್ 7.ಜೆಪಿಜಿಮಾಗಡಿ ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ವಿದ್ಯಾಚೇತನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.