ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆದ ಗೌರಿಹಬ್ಬ

KannadaprabhaNewsNetwork |  
Published : Sep 07, 2024, 01:32 AM IST
ತುಮಕೂರಲ್ಲಿ ಗಣೇಶ ಮಾರಾಟ ಜೋರಾಗಿರುವುದು | Kannada Prabha

ಸಾರಾಂಶ

ದುಪ್ಪಟ್ಟು ಬೆಲೆ ಏರಿಕೆ ನಡುವೆಯೂ ಗೌರಿ ಹಬ್ಬವನ್ನು ಕಲ್ವತರು ನಾಡಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ತುಮಕೂರು: ದುಪ್ಪಟ್ಟು ಬೆಲೆ ಏರಿಕೆ ನಡುವೆಯೂ ಗೌರಿ ಹಬ್ಬವನ್ನು ಕಲ್ವತರು ನಾಡಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮುಂಜಾನೆಯೇ ಮಹಿಳೆಯರು ಮನೆ ಬಾಗಿಲಲ್ಲಿ ಮೊರಗಳನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಗೌರಿ ಹಬ್ಬ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಮನೆಯಲ್ಲಿ ಗೌರಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಮನೆಯಲ್ಲಿ ಪೂಜೆ, ವ್ರತ ಆಚರಣೆ ಬಳಿಕ ತಮ್ಮ ಬಡಾವಣೆಗಳ ವ್ಯಾಪ್ತಿಯಲ್ಲಿ ಗೌರಿ ಮೂರ್ತಿ ಪೂಜಿಸಿ ಬಾಗಿನ ಅರ್ಪಿಸಲು ಸಿದ್ದತೆ ಮಾಡಲಾಗಿದ್ದ ದೇವಾಲಯಗಳಿಗೆ ತೆರಳಿದ ಸುಮಂಗಲಿಯರು, ಮಕ್ಕಳು, ಯುವತಿಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಆಶೀರ್ವಾದ ಪಡೆದರು.ನಗರದ ಬಿ.ಹೆಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮಿ ದೇವಾಲಯ, ಭದ್ರಮ್ಮ ವೃತ್ತದಲ್ಲಿರುವ ಸೋಮನಾಥೇಶ್ವರ ದೇವಾಲಯ, ಕುಣಿಗಲ್ ರಸ್ತೆಯ ಬನಶಂಕರಿಯಮ್ಮ, ರಾಮಕೃಷ್ಣನಗರದ ಸಾಯಿಬಾಬ ಮಂದಿರ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಈ ಎಲ್ಲ ದೇವಾಲಯಗಳಲ್ಲೂ ಮಹಿಳೆಯರು, ಮಕ್ಕಳು, ಯುವತಿಯರು ಗೌರಿಗೆ ಬಾಗಿನ ಅರ್ಪಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಮುಂಜಾನೆಯಿಂದಲೇ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ಸುಮಂಗಲಿಯರು ತವರಿನಿಂದ ಬಂದಂತಹ ಬಾಗಿನವನ್ನು ಗೌರಿ ಅರ್ಪಿಸಿದ್ದಲ್ಲದೆ, ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ನೀಡುವ ಮೂಲಕ ಹಬ್ಬದ ಸೊಬಗನ್ನು ಸಂಭ್ರಮಿಸಿದರು. ಗೌರಿ ಮೂರ್ತಿ, ಮೊರ, ಹೂವು, ಹಣ್ಣು, ಮಾವಿನ ಎಲೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಎಷ್ಟೇ ದುಪ್ಪಟ್ಟಾದರೂ ಅದನ್ನು ಲೆಕ್ಕಿಸದೆ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದು ಜಿಲ್ಲೆಯಾದ್ಯಂತ ಕಂಡು ಬಂತು. ಸರ್ಕಾರಿ ಕಚೇರಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಪುರುಷ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಶನಿವಾರ ಗಣೇಶ ಚತುರ್ಥಿ ಹಬ್ಬ ಇರುವುದರಿಂದ ಪುರುಷ ನೌಕರರು ಸಹ ಹಬ್ಬದ ಸಡಗರದಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು.

ಗಣೇಶನ ಹಬ್ಬಕ್ಕೆ ಸಿದ್ಧತೆ: ಒಂದೆಡೆ ಗೌರಿ ಹಬ್ಬ ಮುಗಿದ ಬೆನ್ನಲ್ಲೇ ಭರ್ಜರಿಯಾಗಿ ಗಣೇಶನ ಹಬ್ಬಕ್ಕೆ ಸಿದ್ದತೆ ಆರಂಭವಾಗಿದೆ. ತುಮಕೂರಿನ ವಿವಿಧ ಬಡಾವಣೆಗಳಲ್ಲೆಲ್ಲಾ ಮಿನಿ ಮಾರುಕಟ್ಟೆಯೇ ನಿರ್ಮಾಣವಾಗಿದೆ. ತುಮಕೂರಿನ ಸೋಮೇಶ್ವರಪುರಂ, ಎಸ್ಐಟಿ, ಜಯನಗರ, ಗೋಕುಲ ಮುಂತಾದ ಬಡಾವಣೆಗಳಲ್ಲಿ ಹಬ್ಬಕ್ಕೆ ಬೇಕಾದ ಹೂವು, ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ತುಮಕೂರಿನ ಹಲವು ಕಡೆ ಥರೇವಾರಿ ಗಣೇಶನ ಮೂರ್ತಿಗಳು ದಾಂಗುಡಿ ಇಟ್ಟಿದ್ದವು. ಶುಕ್ರವಾರ ಸಂಜೆ ರಸ್ತೆ ತುಂಬೆಲ್ಲಾ ಜನರು ಹಬ್ಬದ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದರು. ದುಬಾರಿ ರೇಟಾದರೂ ಸಹ ಸಂಭ್ರಮ, ಸಡಗರ ಜನರಲ್ಲಿ ಮನೆ ಮಾಡಿತ್ತು. ಕಚೇರೀಲಿ ಮಹಿಳಾ ನೌಕರರು ವಿರಳ: ಗೌರಿ ಹಬ್ಬದ ಅಂಗವಾಗಿ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ನೌಕರರ ಸಂಖ್ಯೆ ಅತ್ಯಂತ ವಿರಳವಾಗಿತ್ತು. ಇಂದು ಸರ್ಕಾರಿ ರಜೆ ಇಲ್ಲದಿದ್ದರೂ ಸಹ ಗೌರಿ ಹಬ್ಬದ ಪ್ರಯುಕ್ತ ಮಹಿಳಾ ನೌಕರರು ವೈಯುಕ್ತಿಕವಾಗಿ ರಜೆ ಹಾಕಿಕೊಂಡು ಹಬ್ಬ ಆಚರಣೆಯಲ್ಲಿ ತೊಡಗಿದ್ದರಿಂದ ಕಚೇರಿಗಳಲ್ಲಿ ಈ ನೌಕರರ ಹಾಜರಾತಿ ವಿರಳವಾಗಿದ್ದ ದೃಶ್ಯಗಳು ಕಂಡು ಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌