ಕರಾವಳಿಯಲ್ಲಿ ಮುಂದುವರಿದ ಮಳೆ : ಜನರನ್ನು ಕಾಡುತ್ತಿರುವ ಗುಡ್ಡದ ಭೂತ

KannadaprabhaNewsNetwork |  
Published : May 27, 2025, 01:53 AM ISTUpdated : May 27, 2025, 01:22 PM IST
ಸ | Kannada Prabha

ಸಾರಾಂಶ

ಕಳೆದ ವರ್ಷ ಮಾರಣಹೋಮ ನಡೆಸಿ ಭಯ ಹುಟ್ಟಿಸಿದ್ದ ಗುಡ್ಡ ಕುಸಿತ ಈ ಬಾರಿಯೂ ಜನತೆಯನ್ನು ಕಾಡತೊಡಗಿದೆ.

ಕಾರವಾರ: ಮಳೆ ಧೋ ಎಂದು ಅಬ್ಬರಿಸುತ್ತಿದೆ. ಈಗಲೇ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಕಳೆದ ವರ್ಷ ಮಾರಣಹೋಮ ನಡೆಸಿ ಭಯ ಹುಟ್ಟಿಸಿದ್ದ ಗುಡ್ಡ ಕುಸಿತ ಈ ಬಾರಿಯೂ ಜನತೆಯನ್ನು ಕಾಡತೊಡಗಿದೆ.

ವಾರದಿಂದ ಮಳೆ ಸುರಿಯುತ್ತಿದೆ. ಸೋಮವಾರವೂ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಆಗಾಗ ಭಾರಿ ಮಳೆಯಾಗಿದೆ. ಈ ನಡುವೆ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಮಿರ್ಜಾನ್- ಕತಗಾಲ ರಸ್ತೆಯಲ್ಲಿ ಖೈರೆ ಬಳ ಗುಡ್ಡ ಕುಸಿದು ಮಿರ್ಜಾನ್- ಕತಗಾಲ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕುಮಟಾ ತಾಲೂಕಿನ ಮುಸಗುಪ್ಪೆ ಬಳಿ ಗ್ರಾಮೀಣ ರಸ್ತೆಯಲ್ಲಿ ಕಲ್ಲು ಬಂಡೆಗಳು ಉರುಳಿ ಸಂಚಾರ ಸ್ಥಗಿತಗೊಂಡಿತ್ತು. ಇಂದು ಬೆಳಗ್ಗೆ ಕಲ್ಲು ಬಂಡೆಗಳನ್ನು ತೆರವುಗೊಳಿಸಿ ಸಂಚಾರ ಪುನಾರಂಭವಾಗಿದೆ.

ಹೊನ್ನಾವರದ ಗೇರಸೊಪ್ಪ ರಸ್ತೆಯ ಮೇಲೂ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಕಳೆದ ವರ್ಷ ಗುಡ್ಡ ಕುಸಿದು ಜಿಲ್ಲೆಯಲ್ಲಿ ತಲ್ಲಣ ಹುಟ್ಟಿಸಿದ್ದ ಶಿರೂರು ಬಳಿ ಮಣ್ಣು ಸಡಿಲವಾಗಿದ್ದು, ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಆ ಪ್ರದೇಶದಲ್ಲಿ ವಾಹನ ನಿಲುಗಡೆ, ಫೋಟೋ ತೆಗೆಯುವುದು, ಮೀನುಗಾರಿಕೆ ನಡೆಸುವುದನ್ನು ಪ್ರತಿಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಣ್ಣೆಹೊಳೆಗೆ ಹೊಸ ಸೇತುವೆ ನಿರ್ಮಾಣ ಮಾಡಲೆಂದು ತಾತ್ಕಾಲಿಕವಾಗಿ ಪಕ್ಕದಲ್ಲಿ ನಿರ್ಮಿಸಿದ ರಸ್ತೆಯೂ ಕೊಚ್ಚಿಕೊಂಡು ಹೋಗಿ ಕುಮಟಾ ಶಿರಸಿ ನಡುವೆ ಸಂಚಾರ ಸ್ಥಗಿತಗೊಂಡಿದೆ.

ಕಳೆದ ಮಳೆಗಾಲದಲ್ಲಿ ಶಿರೂರು ಗುಡ್ಡ ದುರಂತದಲ್ಲಿ 10 ಜನರು ಮೃತಪಟ್ಟು, ಇಬ್ಬರು ಕಣ್ಮರೆಯಾಗಿದ್ದರು. ಆ ಭಯ ಇನ್ನು ಮಾಸಿಲ್ಲ. ನಂತರ ದೇವಿಮನೆ ಘಟ್ಟ, ಗೇರುಸೊಪ್ಪ ರಸ್ತೆ ಹೀಗೆ ಹಲವೆಡೆ ಗುಡ್ಡ ಕುಸಿತ ಆಗಿ ಅವಾಂತರ ಉಂಟಾಗಿತ್ತು. ರಸ್ತೆ ಸಂಚಾರವೂ ಬಂದ್ ಆಗಿತ್ತು. ಗುಡ್ಡದ ಅಡಿಯಲ್ಲಿನ ಜನತೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಈ ಘಟನೆ ಈ ಬಾರಿಯೂ ಗುಡ್ಡದ ತಳಭಾಗದಲ್ಲೆಲ್ಲ ಕಳವಳವನ್ನು ಹುಟ್ಟಿಸಿದೆ.

ಕಡಲಕೊರೆತದ ಆತಂಕ: ಅಂಕೋಲಾ ತಾಲೂಕಿನ ಹಾರವಾಡ, ತರಂಗಮೇಟದಲ್ಲಿ ಈ ಬಾರಿಯೂ ಕಡಲ ಕೊರೆತ ಶುರುವಾಗಿದೆ. ಸಮುದ್ರ ಕೊರೆತದ ಭಯ ಕಡಲತೀರದ ನಿವಾಸಿಗಳನ್ನು ತಟ್ಟಿದೆ. ಬಿರುಗಾಳಿ, ಎತ್ತರದ ಅಲೆಗಳು ಏಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾರವಾರ ಹಾಗೂ ಮುರ್ಡೇಶ್ವರ ಕಡಲತೀರಗಳಿಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.

PREV
Read more Articles on

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!