ಬಿಳಿಕಲ್ಲು ಲಕ್ಷ್ಮೀ ರಂಗನಾಥಸ್ವಾಮಿಯ ವೈಭವದ ಬ್ರಹ್ಮರಥೋತ್ಸವ

KannadaprabhaNewsNetwork |  
Published : Apr 03, 2026, 01:30 AM IST
ಬಿಳಿಕಲ್ಲು ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ವೈಭವ | Kannada Prabha

ಸಾರಾಂಶ

ಅಲಂಕೃತ ರಥದಲ್ಲಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿಯವರನ್ನು ಪ್ರತಿಷ್ಠಾಪಿಸಿ, ವೇದಮಂತ್ರಗಳು, ಮಂಗಳ ವಾದ್ಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ನಡುವೆ ರಥೋತ್ಸವ ಆರಂಭವಾಯಿತು. ಈ ವೇಳೆ ಭಕ್ತರು ಗೋವಿಂದಾ, ಗೋವಿಂದಾ, ಲಕ್ಷ್ಮೀ ರಂಗನಾಥಸ್ವಾಮಿ ಗೋವಿಂದಾ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ಭಕ್ತಿಭಾವದಿಂದ ರಥವನ್ನು ಎಳೆದರು. ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಹಾಗೂ ಹರಕೆ ಕಾಣಿಕೆಗಳನ್ನು ಅರ್ಪಿಸುವ ಮೂಲಕ ಅನೇಕರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಬಿಳಿಕಲ್ಲು ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವವು ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಹಾಗೂ ಭಕ್ತಿಭಾವಪೂರ್ಣವಾಗಿ ನೆರವೇರಿತು.ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮಿಥುನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆತಿದ್ದು, ದೇವರ ದರ್ಶನಕ್ಕಾಗಿ ಹಾಗೂ ರಥೋತ್ಸವದಲ್ಲಿ ಪಾಲ್ಗೊಳ್ಳಲು ತಾಲೂಕಿನ ವಿವಿಧ ಗ್ರಾಮಗಳ ಜೊತೆಗೆ ರಾಜ್ಯದ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸಿದ್ದರು. ಅಲಂಕೃತ ರಥದಲ್ಲಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿಯವರನ್ನು ಪ್ರತಿಷ್ಠಾಪಿಸಿ, ವೇದಮಂತ್ರಗಳು, ಮಂಗಳ ವಾದ್ಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ನಡುವೆ ರಥೋತ್ಸವ ಆರಂಭವಾಯಿತು. ಈ ವೇಳೆ ಭಕ್ತರು ಗೋವಿಂದಾ, ಗೋವಿಂದಾ, ಲಕ್ಷ್ಮೀ ರಂಗನಾಥಸ್ವಾಮಿ ಗೋವಿಂದಾ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ಭಕ್ತಿಭಾವದಿಂದ ರಥವನ್ನು ಎಳೆದರು. ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಹಾಗೂ ಹರಕೆ ಕಾಣಿಕೆಗಳನ್ನು ಅರ್ಪಿಸುವ ಮೂಲಕ ಅನೇಕರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.ರಥೋತ್ಸವದ ಅಂಗವಾಗಿ ದೇವಾಲಯ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರ ಅನುಕೂಲಕ್ಕಾಗಿ ಹಲವಾರು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರಸಾದ, ಮಜ್ಜಿಗೆ, ಪಾನಕ, ತಂಪು ಪಾನೀಯಗಳು ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಸ್ವಯಂಪ್ರೇರಿತವಾಗಿ ಆಯೋಜಿಸಿದ್ದರು. ಇದರಿಂದ ಭಕ್ತರಿಗೆ ವಿಶೇಷ ಅನುಕೂಲವಾಗಿದ್ದು, ಕ್ಷೇತ್ರದಲ್ಲಿ ದಾಸೋಹದ ವಾತಾವರಣ ಕಂಗೊಳಿಸಿತು.ಭಕ್ತರ ಸಂಚಾರ ಸುಗಮವಾಗಿಸಲು ಜೆಸಿಪುರದಿಂದ ಬಿಳಿಕಲ್ಲು ಕ್ಷೇತ್ರದವರೆಗೆ ಟ್ಯಾಕ್ಸಿ ಮತ್ತು ಆಟೋ ಮಾಲೀಕರು ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಯಿತು. ಈ ಸೇವೆಯಿಂದ ವಯೋವೃದ್ಧರು, ಮಹಿಳೆಯರು ಹಾಗೂ ದೂರದ ಊರುಗಳಿಂದ ಬಂದ ಭಕ್ತರಿಗೆ ಹೆಚ್ಚಿನ ನೆರವು ದೊರೆಯಿತು.ರಥೋತ್ಸವದ ಯಶಸ್ವಿ ನಿರ್ವಹಣೆಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತವು ಕಳೆದ ಹತ್ತು ದಿನಗಳಿಂದಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ದೇವಾಲಯದಲ್ಲಿ ಮುಂಚಿತವಾಗಿಯೇ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜಾ ಕೈಂಕರ್ಯ ಮತ್ತು ಉತ್ಸವಗಳು ಸಂಪ್ರದಾಯಬದ್ಧವಾಗಿ ನಡೆದಿದ್ದು, ಭಕ್ತರ ಆಗಮನವನ್ನು ಮನಗಂಡು ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಲಾಗಿತ್ತು.ಜಾತ್ರಾ ಮಹೋತ್ಸವದ ಅಂಗವಾಗಿ ಚಿಕ್ಕಲಕ್ಕೂರು, ಜೆಸಿಪುರ, ಬೈರಾಪುರ, ದೊಡ್ಡಘಟ್ಟ ಸೇರಿದಂತೆ ಮೂಲ ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಭಕ್ತಿಯಿಂದ ಸೇವೆ ಸಲ್ಲಿಸಿದರು. ದೇವಾಲಯದ ಪೂಜಾ ವಿಧಿವಿಧಾನಗಳು, ಉತ್ಸವದ ಸಂಭ್ರಮ ಹಾಗೂ ಭಕ್ತರ ಭಾವಭರಿತ ಭಾಗವಹಿಸುವಿಕೆಯಿಂದ ಈ ವರ್ಷದ ಬ್ರಹ್ಮರಥೋತ್ಸವವು ವಿಶೇಷ ವೈಭವಕ್ಕೆ ಸಾಕ್ಷಿಯಾಯಿತು.ಈ ಧಾರ್ಮಿಕ ಮಹೋತ್ಸವದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಶ್ರೀ ಬಿಳಿಕಲ್ಲು ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಸೇವಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಪಾರ ಭಕ್ತ ಸಮೂಹ ಉಪಸ್ಥಿತರಿದ್ದು, ರಥೋತ್ಸವವನ್ನು ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನೆಗಾಡು ಸೋಲಿಗರ ಹಾಡಿಗೆ ಕೊನೆಗೂ ಹರಿದ ಗಂಗೆ
ನಾಯಕತ್ವ ವೃದ್ಧಿಗೆ ವಿದ್ಯಾರ್ಥಿ ಸಂಸತ್ತು ಸಹಕಾರಿ: ಪ್ರೊ. ಜೆ.ಎಂ. ನಾಗಯ್ಯ