ನಾಯಕತ್ವ ಗುಣ ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜೆ.ಎಂ. ನಾಗಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಯಕತ್ವ ಗುಣ ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜೆ.ಎಂ. ನಾಗಯ್ಯ ಹೇಳಿದರು

ತಾಳಗುಂದದಲ್ಲಿರುವ ಶ್ರೀ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಗುರುವಾರ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ 2025- 26ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಮತ್ತು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ ಮಂಡನೆ, ವಿಮರ್ಶಾ ಸಾಮರ್ಥ್ಯ, ವಾಕ್ಚಾತುರ್ಯ, ಸಂವಹನ ಕೌಶಲ್ಯ, ನೀತಿ ರೂಪಿಸುವ ಸಾಮರ್ಥ್ಯ ಇರುವವರನ್ನು ಉತ್ತಮ ನಾಯಕ ಎಂದು ಪರಿಗಣಿಸಲಾಗುತ್ತದೆ. ಶಾಲಾ ಕಾಲೇಜಿನ ಹಂತದಲ್ಲಿ ವಿದ್ಯಾರ್ಥಿ ಸಂಸತ್ತು ರೂಪಿಸಿರುವುದು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಜಾಪ್ರಭುತ್ವದ ಆಶಯಗಳು ಬಲವರ್ಧನೆಗೊಳ್ಳಲು ವಿದ್ಯಾರ್ಥಿ ಸಂಸತ್ತು ಸಹಕಾರಿಯಾಗಿದೆ ಎಂದರು.

ಶಿಕ್ಷಣವನ್ನು ಪರ ಹಾಗೂ ಅಪರ ವಿದ್ಯೆ ಎಂದು ವಿಂಗಡಿಸಬಹುದಾಗಿದೆ. ಆತ್ಮಜ್ಞಾನ ಹಾಗೂ ಆತ್ಮ ವಿಕಸನಕ್ಕೆ ಪಡೆಯುವ ವಿದ್ಯೆಯನ್ನು ಪರ ವಿದ್ಯೆ ಎಂದೂ ಲೌಕಿಕ ಸುಖಕ್ಕೆ ಸಾಧಕವನ್ನಾಗಿ ಕಲಿಯುವ ವಿದ್ಯೆಯನ್ನು ಅಪರ ವಿದ್ಯೆ ಎಂದು ಪರಿಗಣಿಸಬಹುದಾಗಿದೆ. ಹಿಂದಿನ ಕಾಲದಲ್ಲಿ ಪರ ವಿದ್ಯೆ ಎಂದರೆ ಶಿಕ್ಷಣವನ್ನು ಆತ್ಮಜ್ಞಾನ ಅಥವಾ ಮೋಕ್ಷ ಪಡೆಯಲು ಅಧ್ಯಯನ ಮಾಡುತ್ತಿದ್ದರು. ಆದರೆ ಆಧುನಿಕ ಕಾಲಘಟ್ಟದಲ್ಲಿ ಪರ ಹಾಗೂ ಅಪರ ವಿದ್ಯೆಗಳೆರೆಡೂ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಶ್ರೀ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪರಮೇಶ ಹ. ಮಸಲವಾಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರವಾಡದ ಹುರಿಕಡ್ಲಿ ಅಜ್ಜ ಮಹಿಳಾ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಸಾಲಿ, ಹಂಸಭಾವಿ ಎಂಎಎಸ್‌ಸಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ.ಎಂ. ಅಕ್ಕಿ, ವಿಶೇಷ ಆಹ್ವಾನಿತರಾಗಿ ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೆ.ಪಿ. ಸುನೀಲ್ ಕುಮಾರ ಆಗಮಿಸಿದ್ದರು.

ಸಾಂಸ್ಕೃತಿಕ ವೇದಿಕೆ ಕಾರ್ಯಾಧ್ಯಕ್ಷ ವೈ.ಎಚ್. ರಾಜು, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಿ.ಎಚ್. ಮಾಲತೇಶ, ಎಂ. ಸುಚಿತ್ರಾ, ಎಂ. ವಿನಾಯಕ, ಬಿ. ಭೂಮಿಕಾ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದವರಿಗೆ ಡಿ. ಗುರುರಾಜ್ ಪ್ರಮಾಣ ವಚನ ಬೋಧಿಸಿದರು. ಪ್ರೊ.ಜೆ.ಎಂ. ನಾಗಯ್ಯ ಮತ್ತು ಡಾ. ರಾಜೇಶ್ವರಿ ಸಾಲಿ ಅವರನ್ನು ಅಭಿನಂದಿಸಲಾಯಿತು.

ಪಿ.ಎಚ್. ವಿದ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಐಶ್ವರ್ಯ ಎಂ. ಭಂಡಾರಿ ಸ್ವಾಗತಿಸಿ, ವೈ.ಎಚ್. ರಾಜು ಪ್ರಾಸ್ತಾವಿಸಿ, ಎಂ. ಸುಚಿತ್ರಾ ಮತ್ತು ಪಿ.ಎಚ್. ಮಾಲತೇಶ್ ನಿರೂಪಿಸಿ, ಎಚ್.ಎನ್. ಅಶ್ವಿನಿ ವಂದಿಸಿದರು.