ವಿಜೃಂಭಣೆಯ ದಿವ್ಯಲಿಂಗೇಶ್ವರ ರಥೋತ್ಸವ

KannadaprabhaNewsNetwork | Published : Mar 22, 2025 2:02 AM

ಸಾರಾಂಶ

ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕಾಮಾಕ್ಷಾಂಭ ಸಮೇತ ದಿವ್ಯಲಿಂಗೇಶ್ವರ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಮದ ನಡೆಯಿತು.

ಚಾಮರಾಜನಗರ: ಭಕ್ತಾದಿಗಳ ಜಯಘೋಷದೊಡನೆ ಇತಿಹಾಸ ಪ್ರಸಿದ್ಧ ತಾಲೂಕಿನ ಹರದನಹಳ್ಳಿಯ ಕಾಮಾಕ್ಷಾಂಭ ಸಮೇತ ದಿವ್ಯಲಿಂಗೇಶ್ವರ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಕಳೆದ 3-4 ದಿನಗಳಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಮಹೋತ್ಸವ ನಡೆದಿದ್ದವು. ಗುರುವಾರ ಸಂಜೆ ಗಿರಿಜಾ ಕಲ್ಯಾಣ ಮಹೋತ್ಸವವು ಅದ್ಧೂರಿಯಿಂದ ನಡೆಯಿತು. ಶುಕ್ರವಾರ ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು, ಕೆಲವರು ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ, ದೇವರ ದರ್ಶನ ಮಾಡಿ ಬಂದವರಿಗೆ ಪ್ರಸಾದ ವಿತರಿಸಿದರು. ಮಧ್ಯಾಹ್ನ ೧೨-೪೪ ರಿಂದ ೧೨-೫೭ರ ವರೆಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಕಾಮಾಕ್ಷಾಂಭ ಸಮೇತ ದಿವ್ಯಲಿಂಗೇಶ್ವರರ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣಿ ಹಾಕಲಾಯಿತು. ಮಹಾಮಂಗಳಾರತಿ ಮಾಡಲಾಯಿತು. ನಂತರ ಗ್ರಾಮದ ವಿವಿಧ ಕೋಮಿನ ಯಜಮಾನರು ವಿಶೇಷ ಪೂಜೆ ಸಲ್ಲಿಸಿ, ಈಡುಗಾಯಿ ಒಡೆಯುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ವಿವಿಧ ಜಾನಪದ ಕಲಾತಂಡಗಳಾದ, ನಂದಿಧ್ವಜ, ನಾದಸ್ವರ, ಡೊಳ್ಳು ಕುಣಿತ, ಗೊರವರ ಕುಣಿತ, ಕಂಸಾಳೆ ತಂಡ, ದೊಣ್ಣೆ ವರಸೆ, ಹುಲಿವೇಷ ಕುಣಿತ ಸೇರಿದಂತೆ ವಿವಿಧ ತಂಡಗಳು ರಥೋತ್ಸವಕ್ಕೆ ಮೆರಗು ತಂದವು. ಕಲಾ ತಂಡಗಳೊಂದಿಗೆ ಯುವಕರ ತಂಡ ಕುಣಿಯುತ್ತ ಸಾಗಿದರೆ, ರಥೋತ್ಸವ ಸಾಗುವ ರಸ್ತೆಯುದ್ದಕ್ಕೂ ಮಹಿಳೆಯರು ಪೂಜಾ ಸಾಮಾಗ್ರಿ ಹಿಡಿದು, ರಥಕ್ಕೆ ಪೂಜೆ ಸಲ್ಲಿಸಿದರು, ಬೀದಿಯುದ್ದಕ್ಕೂ ಭಕ್ತರು ಪಾನಕ, ಮಜ್ಜಿಗೆ, ಕೋಸುಂಬರಿ, ಪಂಚಾಮೃತ ವಿತರಿಸಿದರು.

ರಾಜ್ಯದ ಮೂಲೆಗಳಿಂದ ಮತ್ತು ತಮಿಳನಾಡಿನಿಂದ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡರು. ಚಾಮರಾಜಗರದಿಂದ ಅರ್ಚಕರ ತಂಡ ಪೂಜೆ ಕೈಕಂರ್ಯಗಳನ್ನು ನೆರವೇರಿಸಿದರು, ರಥೋತ್ಸವದ ಅಂಗವಾಗಿ ದೇವಸ್ಥಾನ ಮತ್ತು ಆವರಣವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಗುರುವಾರ ಸಂಜೆ ಗಿರಿಜಾ ಕಲ್ಯಾಣೋತ್ಸ ನಡೆಯಿತು, ಗ್ರಾಮದ ವಿವಿಧ ಕೋಮಿನ ಯಜಮಾನರು, ಮುಜರಾಯಿ ಇಲಾಖೆಯವರು ಮುಂದೆ ನಿಂತು ರಥೋತ್ಸವವನ್ನು ಯಶಸ್ವಿಗೊಳಿಸಿದರು.

Share this article