ಕನ್ನಡಪ್ರಭ ವಾರ್ತೆ ಹಾಸನ
ಈ ಬಾರಿಯ ವಿದ್ಯಾರ್ಥಿ ಸಂಸತ್ತಿನ ಆಯ್ಕೆಯು ಸಂಪೂರ್ಣವಾಗಿ ಪ್ರಜಾಪ್ರಭುತ್ವದ ಆಧಾರಿತ ಚುನಾವಣೆಯ ಮೂಲಕ ಮೂಡಿಬಂದಿತ್ತು. ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಮತ್ತು ಗೌರವ ವಂದನೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ವಿದ್ಯಾರ್ಥಿ ನಾಯಕರ ಶಿಸ್ತುಬದ್ಧ, ಆಕರ್ಷಕ ಹಾಗೂ ಲಯಬದ್ಧವಾದ ಪಥಸಂಚಲನ ಕಣ್ಮನ ಸೆಳೆಯಿತು. ಪ್ರಸಕ್ತ ಸಾಲಿನ ಶಾಲಾ ವಿದ್ಯಾರ್ಥಿ ನಾಯಕರಾಗಿ ಯಶವಂತ್ ಡಿ. ಎಮ್. ಮತ್ತು ಧೃತಿ ಎಚ್.ಎಲ್. ಅವರು ಅಧಿಕಾರ ವಹಿಸಿಕೊಂಡರು. ಇವರೊಂದಿಗೆ ವಿವಿಧ ವಿಭಾಗಗಳ ನಾಯಕರಾಗಿ ಹಾಗೂ ವಿದ್ಯಾರ್ಥಿ ಸಂಸತ್ತಿನ ಸದಸ್ಯರಾಗಿ ಒಟ್ಟು ೨೮ ಪ್ರತಿಭಾವಂತ ವಿದ್ಯಾರ್ಥಿಗಳು ಜವಾಬ್ದಾರಿಗಳನ್ನು ವಹಿಸಿಕೊಂಡರು. ಸಂಸ್ಕೃತಿ, ಶಿಸ್ತು ಪಾಲನೆ, ಆರೋಗ್ಯ , ಮಕ್ಕಳ ಹಕ್ಕುಗಳ ರಕ್ಷಣೆ, ಕ್ರೀಡೆ, ಸಾಹಿತ್ಯ ಮತ್ತು ಮಾಧ್ಯಮ ಈ ವಿಭಾಗದ ನಾಯಕರು ಈ ಸಂದರ್ಭದಲ್ಲಿ ಜವಾಬ್ದಾರಿಯ ಪ್ರಮಾಣ ವಚನ ಸ್ವೀಕರಿಸಿದರು. ಶಾಲೆಯ ಪ್ರಾಂಶುಪಾಲರಾದ ನಂದೀಶ ಕೆ.ಎಸ್. ಅವರು ನೂತನ ವಿದ್ಯಾರ್ಥಿ ಸಂಸತ್ತಿನ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಇರಬೇಕಾದ ಶಿಸ್ತು ಮತ್ತು ಮೌಲ್ಯಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ಶಾಲಾ ಆವರಣ ಮತ್ತು ತರಗತಿಗಳ ಸ್ವಚ್ಛತೆ, ವಿದ್ಯಾರ್ಥಿಗಳ ವೈಯಕ್ತಿಕ ಆರೋಗ್ಯ, ನೈರ್ಮಲ್ಯ ಹಾಗೂ ದೈನಂದಿನ ಶಿಸ್ತಿನ ಬಗ್ಗೆ ಅವರು ವಿಶೇಷ ಕಳಕಳಿ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಡಾ. ಶ್ರೀ ಲಕ್ಷ್ಮೀ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳು ನಿರಂತರವಾಗಿ ಬೆಳೆಯಬೇಕು, ಭವಿಷ್ಯದ ಆದರ್ಶ ಪ್ರಜೆಗಳಾಗಲು ಪೂರಕವಾಗಬೇಕು ಎಂದು ಪ್ರೋತ್ಸಾಹದಾಯಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೈ ಎನ್ ಸುಬ್ಬಸ್ವಾಮಿ ಅವರು ನೂತನ ನಾಯಕರಿಗೆ ಶುಭ ಹಾರೈಸುತ್ತಾ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಸತ್ತು ಶಾಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ಅಧಿಕಾರ ಎಂಬುದು ಕೇವಲ ಗೌರವವಲ್ಲ, ಅದೊಂದು ಅತ್ಯುನ್ನತ ಜವಾಬ್ದಾರಿ ಎಂದು ಆಶಿಸಿದರು. ತಮ್ಮ ಮಕ್ಕಳು ಶಾಲೆಯಲ್ಲಿ ಅತ್ಯುನ್ನತ ಜವಾಬ್ದಾರಿಯನ್ನು ಹೊತ್ತು, ಹೆಮ್ಮೆಯಿಂದ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.