ಶೃಂಗೇರಿ ಪೀಠದ ಉಭಯ ಜಗದ್ಗುರುಗಳಿಂದ ಶ್ರೀ ದುರ್ಗಾಂಬೆಗೆ ವಿಶೇಷ ಪೂಜೆ.
ತಾಲೂಕಿನ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ದುರ್ಗಾ ದೇವಸ್ಥಾನದಲ್ಲಿರುವ ಹರಾವರಿ ಶ್ರೀ ದುರ್ಗಾಂಬೆಯ ಮಹಾರಥೋತ್ಸವ ಗುರುವಾರ ವೈಭವಯುತವಾಗಿ ಜರುಗಿತು.
ರಥೋತ್ಸವದ ಅಂಗವಾಗಿ ದೇವಿ ಸನ್ನಿದಿಯಲ್ಲಿ ಬುಧವಾರದಿಂದ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ, ರಾತ್ರಿ ದೇವಿ ಪಲ್ಲಕ್ಕಿ ಉತ್ಸವ ನೆರವೇರಿತು. ಗುರುವಾರ ಬೆಳಿಗ್ಗೆ ಶ್ರೀ ದುರ್ಗಾಂಬೆಗೆ ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಶ್ರೀ ದುರ್ಗಾಂಬೆಗೆ ವಿಶೇಷ ಪೂಜೆಯನ್ನು ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ವಿಧುಶೇಖರ ಶ್ರೀ ನೆರವೇರಿಸಿದರು. ನಂತರ ದೇವಾಲಯದ ಪ್ರಾಂಗಣದಲ್ಲಿ ಶ್ರೀ ದುರ್ಗಾಂಬೆ ಉತ್ಸವ ಮೂರ್ತಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಿ ಮಹಾರಥೋತ್ಸವ ನೇರವೇರಿಸಲಾಯಿತು.ಶ್ರೀ ಮಠದ ಗಜಪಡೆಗಳು, ಛತ್ರಿ ಛಾಮರ, ವಾದ್ಯ ಮೇಳ, ನೂರಾರು ವಿಪ್ರೋತ್ತಮರ ವೇದಘೋಷಗಳು,ಸಾವಿರಾರು ಭಕ್ತರ ಜಯ ಘೋಷಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ರಸ್ತೆ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಶ್ರೀ ದುರ್ಗಾಂಬೆ ದರ್ಶನ ಪಡೆದು ನಮಿಸಿದರು.
26 ಶ್ರೀ ಚಿತ್ರ 1-ಶೃಂಗೇರಿ ಶ್ರೀ ದುರ್ಗಾಂಬಾ ಮಹಾ ರಥೋತ್ಸವ ವೈಭವಯುತವಾಗಿ ನಡೆಯಿತು.